ವಾಲ್ಮೀಕಿ ನಿಗಮದ ಹಗರಣ | ವಿಚಾರಣೆಯಲ್ಲಿ ನಿಗಮದ ಮಾಜಿ ಎಂ.ಡಿ.ಗೆ ಕಿರುಕುಳ ಆರೋಪ : ಇಬ್ಬರು ಈಡಿ ಅಧಿಕಾರಿಗಳ ವಿರುದ್ಧ ಎಫ್‍ಐಆರ್

Update: 2024-07-22 15:42 GMT

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹೆಸರು ಹೇಳುವಂತೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಡಿ ಇಬ್ಬರು ಈಡಿ ಅಧಿಕಾರಿಗಳ ವಿರುದ್ಧ ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಿಂದಿನ ನಿರ್ದೇಶಕ ಕಲ್ಲೇಶ್(54) ಎಂಬುವರು ನೀಡಿನ ದೂರಿನನ್ವಯ ಈಡಿ ಅಧಿಕಾರಿಗಳಾದ ಮಿತ್ತಲ್, ಮುರುಳಿ ಕಣ್ಣನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ) ತನಿಖೆಯನ್ನು ನಡೆಸುತ್ತಿದ್ದು, ಈ ಸಂಬಂಧ ನನ್ನನ್ನು ವಿಚಾರಣೆಗೆ ಹಾಜರಾಗುವಂತೆ ಈಡಿ ಅಧಿಕಾರಿಗಳು ಜು.16ರಂದು ಸೂಚಿಸಿದ್ದರು. ಅದರಂತೆ ನಾನು ಶಾಂತಿನಗರದ ಜಾರಿ ನಿರ್ದೇಶನಾಲಯ ಕಚೇರಿಗೆ ಹೋಗಿದ್ದು, ಈಡಿ ಅಧಿಕಾರಿ ಮುರುಳಿ ಕಣ್ಣನ್ ಅವರು ನನ್ನ ಹೇಳಿಕೆಯನ್ನು ದಾಖಲಿಸಿಕೊಂಡರು ಎಂದು ಕಲ್ಲೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ, ನನಗೆ 17 ಪ್ರಶ್ನೆಗಳನ್ನು ಕೇಳುತ್ತಾರೆ. ನಾನು 17 ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ. ಅದರಲ್ಲಿ. ಮೂರು ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತಬೇಕು ಹಾಗು ನನ್ನ ಕೆಳಹಂತದ ಅಧಿಕಾರಿಗಳು ಬೇಕಾಗುತ್ತಾರೆಂದು ತಿಳಿಸಿರುತ್ತೇನೆ, ಆಗ ಕಣ್ಣನ್ ಅವರು ಜು.18ರಂದು ಬನ್ನಿ ಆಗ ಕಡತ ಜೊತೆಗೆ ಇತರೆ ಅಧಿಕಾರಿಗಳನ್ನು ಕರೆಯುತ್ತೇನೆಂದು ಹೇಳಿದರು ಎಂದು ಕಲ್ಲೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುತ್ತೇನೆ, ಅವರು ನನ್ನ ಹೇಳಿಕೆಗೆ ಸಹಿ ಪಡಿಯುತ್ತಾರೆ. ನಾನು ನನ್ನ ಹೇಳಿಕೆಯ ಪ್ರತಿಯನ್ನು ನನಗೊಂದು ಕೊಡಿ ಎಂದು ಕೇಳುತ್ತೇನೆ. ಆದರೆ, ಈಡಿಯವರು ಕೊಡಲಿಲ್ಲ. ನಂತರ ಪುನಃ ನನ್ನನ್ನು ಪ್ರಶ್ನೆ ಕೇಳುತ್ತಾರೆ. ಆದರೆ, ಈ ಸಲ ಯಾವುದೇ ಲಿಖಿತ ರೂಪದಲ್ಲಿ ಪ್ರಶ್ನೆ ನೀಡುವುದಿಲ್ಲ. ಪ್ರಕರಣದಲ್ಲಿ ನನ್ನದು ಯಾವುದು ತಪ್ಪಿಲ್ಲ ಎಂದು ಹೇಳಿದರೂ, ಸಹ ನಿಮ್ಮನ್ನು ಬಂಧಿಸುತ್ತೇವೆಂದು ಅಧಿಕಾರಿಗಳು ಧಮ್ಮಿ ಹಾಕಿದ್ದಾರೆ. ಅಲ್ಲದೆ, ಎರಡು ವರ್ಷ ಆದರೂ ನಿಮಗೆ ಜಾಮೀನು ಸಿಗುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ ಎಂದು ಕಲ್ಲೇಶ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಸರಕಾರದ ಉನ್ನತ ಮಟ್ಟದಲ್ಲಿರುವವರ ಹೆಸರು ಹೇಳಿದರೆ ಈಡಿಯು ನಿಮಗೆ ಸಹಾಯ ಮಾಡುತ್ತದೆ, ಇಲ್ಲದಿದ್ದರೆ ಬಂಧಿಸುತ್ತೇವೆಂದು ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಆದ್ದರಿಂದ ನನಗೆ ಮಾನಸಿಕ ಹಿಂಸೆ ನೀಡಿದ ಈಡಿ ಅಧಿಕಾರಿ ಮಿತ್ತಲ್ ಹಾಗೂ ಮುರುಳಿ ಕಣ್ಣನ್ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಕಲ್ಲೇಶ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News