ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ: ಸಿಎಂ ರಾಜೀನಾಮೆಗೆ ವಿಪಕ್ಷ ನಾಯಕ ಆರ್. ಅಶೋಕ್ ಪಟ್ಟು
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ನಿಯಮ 69ರ ಅಡಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಕುರಿತು ಪ್ರಸ್ತಾಪಿಸಿದ ಅವರು, ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಸರಕಾರವೇ ಒಪ್ಪಿಕೊಂಡಿದೆ. ವಾಲ್ಮೀಕಿ ಜನಾಂಗದ ಶಾಪ ಸರಕಾರಕ್ಕೆ ತಟ್ಟಬಾರದೆಂದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದರು.
ವಸಂತನಗರದ ಯೂನಿಯನ್ ಬ್ಯಾಂಕ್ ಹಾಗೂ ಎಂಜಿ ರಸ್ತೆಯ ಬ್ಯಾಂಕ್ ಖಾತೆಗೆ ಹಣ ಹಾಕಲಾಗಿದೆ. ಎರಡು ಖಾತೆ ತೆರೆಯಬಾರದು ಎಂದು ಸರಕಾರವೇ ಆದೇಶ ಮಾಡಿರುವಾಗ ಅದನ್ನು ಉಲ್ಲಂಘಿಸಲಾಗಿದೆ. ಕಳ್ಳತನ ಆಗಿರುವುದೇ 187 ಕೋಟಿ ರೂ.ಎಂದಿರುವಾಗ ಅದು 89 ಕೋಟಿ ರೂ. ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸು ಇಲಾಖೆಯವರು ತಮಗೆ ಗೊತ್ತಿರಲಿಲ್ಲ ಎಂದು ಹೇಳಿದರೂ ಅದು ದೊಡ್ಡ ತಪ್ಪು ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಗೆ ವಿಶೇಷ ತನಿಖಾ ದಳ ನಿಯೋಜಿಸಲಾಗಿದೆ. ಹಾಗೆಯೇ ಎಚ್.ಡಿ.ರೇವಣ್ಣ, ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ತನಿಖೆಗೆ ವಿಶೇಷ ತನಿಖಾ ದಳ ನಿಯೋಜಿಸಲಾಗಿದೆ. ಎಸ್‍ಐಟಿ ತನಿಖೆ ಆರಂಭವಾದಾಗಲೇ ಅವರು ಭಯಗೊಂಡು ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ ನಿಗಮದ ತನಿಖೆ ಆರಂಭವಾದಾಗ ಸಚಿವರಿಗೆ ಹಾಗೂ ಅಧ್ಯಕ್ಷರಿಗೆ ಯಾವುದೇ ಭಯ ಇರಲಿಲ್ಲ ಎಂದು ಆಪಾದಿಸಿದರು.
ಸಿಬಿಐ ತನಿಖೆಯಾದರೆ ಎರಡು ವರ್ಷ ಜೈಲು ಹಾಗೂ ನಮ್ಮವರು ಬಂದರೆ ಬಿಡುಗಡೆ ಎಂದು ಬಿಡುಗಡೆಯಾದ ಆಡಿಯೊದಲ್ಲಿ ಅಧಿಕಾರಿಗಳು ಮಾತಾಡಿದ್ದಾರೆ. ನಿಗಮದ ಹಗರಣದ ತನಿಖೆಯಲ್ಲಿ ಎಸ್‌ಐಟಿ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಬೇನಾಮಿ ಹಣ ಬಂದ ಕೂಡಲೇ ಸಹಜವಾಗಿ ಇಲ್ಲಿ ಜಾರಿ ನಿರ್ದೇಶನಾಲಯ ಬಂದು ತನಿಖೆ ಮಾಡಿದೆ. ಹಾಗೆಯೇ ಸಿಬಿಐ ಕೂಡ ಕಾನೂನು ಪ್ರಕಾರ ಮಧ್ಯಪ್ರವೇಶ ಮಾಡಿ ತನಿಖೆ ಮಾಡುತ್ತಿದೆ. ಆದರೆ ಎಸ್‌ಐಟಿ ಅನ್ನು ಕಾಂಗ್ರೆಸ್ ಸರಕಾರ ನೇಮಿಸಿದ್ದು, ತನಿಖೆ ವೇಗವಾಗಿ ನಡೆದಿಲ್ಲ. ಇಲ್ಲಿ ತಾರತಮ್ಯ ನಡೆದಿದೆ ಎಂದು ಅವರು ಹೇಳಿದರು.
ನಿಗಮದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಕ್ರಿಯಾಯೋಜನೆಗೆ ಆದೇಶ ಹೊರಡಿಸಿ ಐದು ತಿಂಗಳಾದರೂ ಅದನ್ನು ಇಲಾಖೆಯ ಕಾರ್ಯದರ್ಶಿ ಪರಿಶೀಲನೆ ಮಾಡಿಲ್ಲ. ಪರಿಶಿಷ್ಟ ಪಂಗಡಕ್ಕೆ ನೀಡಿದ ಈ ಯೋಜನೆಯ ಪ್ರಗತಿ ಎಷ್ಟಂದು ತಿಳಿಯುವ ಪ್ರಯತ್ನವೇ ನಡೆದಿಲ್ಲ. ತಳ್ಳು ಗಾಡಿ ಬರುತ್ತದೆಂದು ಕಾಯುತ್ತಿದ್ದ ವ್ಯಕ್ತಿಗೆ ಹಣ ತಲುಪಲೇ ಇಲ್ಲ. ಹಿಂದಿನ ಬಜೆಟ್‍ನಲ್ಲಿ ನೀಡಿದ ಹಣವನ್ನು ಏಕೆ ಖರ್ಚು ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪ್ರಶ್ನಿಸಬೇಕಿತ್ತು. ಆಗಲೇ ಪ್ರಶ್ನೆ ಮಾಡಿದ್ದರೆ ಫಲಾನುಭವಿಗಳಿಗೆ ಅನುಕೂಲವಾಗುತ್ತಿತ್ತು ಎಂದು ಅಶೋಕ್ ತಿಳಿಸಿದರು.
ಇದು 224 ಶಾಸಕರಿಗೂ ಸಂಬಂಧಪಟ್ಟ ಸಂಗತಿ. ಒಂದು ವರ್ಷದಿಂದ ನಿಗಮದಿಂದ ದಲಿತರಿಗೆ 187 ಕೋಟಿ ರೂ. ಮೊತ್ತದ ಯೋಜನೆ ಸಿಕ್ಕಿಲ್ಲ. ಈ ಹಣವನ್ನು ಮುಖ್ಯಮಂತ್ರಿಯೇ ನೀಡಬೇಕು. ಇದಕ್ಕೆ ಯಾರು ಜವಾಬ್ದಾರಿ? ಯೋಜನೆ ಮುಂದುವರಿಸುವುದಕ್ಕೆ ಯಾರನ್ನು ಹೊಣೆಗಾರರಾಗಿ ಮಾಡುತ್ತಾರೆ? ಇದು ಕ್ಷೇತ್ರದ ಮತದಾರರಿಗೆ ತಲುಪಬೇಕಾದ ಹಣ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಮನೆಗೆ ಹೋಗಿ ಒಂದು ದಿನ ವಾಸ್ತವ್ಯ ಮಾಡಲಿ. ದಲಿತರು ಎಷ್ಟು ಕಷ್ಟ ಪಡುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ.ಹಗರಣದ ಜವಾಬ್ದಾರಿಯನ್ನು ಅಧಿಕಾರಿಗಳ ಮೇಲೆ ಹಾಕಿ, ತಮಗೆ ಬೇಕಾದ ಸಚಿವರು, ಶಾಸಕರನ್ನು ರಕ್ಷಿಸುವ ಕೆಲಸ ಸರಕಾರದ ನೇತೃತ್ವದಲ್ಲಿ ನಡೆದಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೀಡಿರುವ ಹೇಳಿಕೆ ಅದಕ್ಕೆ ಪುಷ್ಟಿ ಕೊಡುವಂತಿದೆ. ಇದು ಕೇವಲ ಹಗರಣವಲ್ಲ, ಅಕ್ಷಮ್ಯ ಅಪರಾಧ. ಆರ್ಥಿಕ ಇಲಾಖೆಯ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ರಾಜ್ಯದ ಜನರ ಪರವಾಗಿ ಒತ್ತಾಯ ಮಾಡುತ್ತೇನೆ’
-ಬಿ.ವೈ.ವಿಜಯೇಂದ್ರ, ಬಿಜೆಪಿ ಸದಸ್ಯ
‘ಎಸ್‍ಐಟಿಗೆ ತನಿಖೆ ನಡೆಸಲು ಮುಕ್ತ ಸ್ವಾತಂತ್ರ್ಯ ನೀಡಲು ಸಾಧ್ಯವಾಗದಿದ್ದರೆ, ಅದನ್ನು ಹಿಂಪಡೆಯುವುದು ಉತ್ತಮ. ಸಿಬಿಐ ಹಾಗೂ ಈ.ಡಿ.ಯವರು ಈ ಹಗರಣದ ಕುರಿತು ತನಿಖೆಯನ್ನು ಮಾಡಲಿ. ಮುಂದಿನ ದಿನಗಳಲ್ಲಿ ಎಸ್‍ಐಟಿ ಅಧಿಕಾರಿಗಳು ಸಿಬಿಐ ತನಿಖೆ ಎದುರಿಸುವಂತೆ ಮಾಡಬೇಡಿ’
-ಆರಗ ಜ್ಞಾನೇಂದ್ರ, ಬಿಜೆಪಿ ಸದಸ್ಯ