ಯತ್ನಾಳ್ ನಾಲಿಗೆಗೆ ಲಂಗು ಲಗಾಮು ಇಲ್ಲ: ನಿರಾಣಿ ಕಿಡಿ'

Update: 2023-06-26 18:36 GMT

ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರು ಬಿಜೆಪಿ ಸಮಾವೇಶಕ್ಕೆ ಅಡ್ಡಿಪಡಿಸಿದ ಘಟನೆಯಿಂದಾಗಿ ಆಕ್ರೋಶದಿಂದ ಹೊರ ನಡೆದ ಮಾಜಿ ಸಚಿವ ಮುರುಗೇಶ ನಿರಾಣಿ ಯತ್ನಾಳ್ ವಿರುದ್ಧ ಕಿಡಿಕಾರಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗೇಶ ನಿರಾಣಿ, ನನ್ನನ್ನು ಸೋಲಿಸಲು ದುಡ್ಡು ಕೊಟ್ಟು ಕಳುಹಿಸಿದ್ದಾರೆ ಎಂದು ಪದೇ ಪದೇ ವ್ಯಂಗ್ಯವಾಡುವ ನಗರ ಶಾಸಕರು ತಾಕತ್ತಿದ್ದರೆ ಬಹಿರಂಗವಾಗಿ ಇಲ್ಲಿ ಬಂದು ಉತ್ತರಿಸಲಿ, ನಾನೇ ಸಿಎಂ, ವಿಧಾನಸೌಧದ ಮೂರನೇಯ ಮಹಡಿಯಲ್ಲಿ ನಾನೇ ಕೂರುವೆ ಎಂದು ಅಹಂ ಆಗಿ ಹೇಳುವ ಅವರು ಮೊದಲು ಈ ಬಗ್ಗೆ ಉತ್ತರಿಸಲಿ ಎಂದು ಗರಂ ಆಗಿ ಸವಾಲು ಹಾಕಿದರು.

ದುಡ್ಡು ಕೊಟ್ಟಿದ್ದಾರೆ, ದುಡ್ಡು ಕೊಟ್ಟಿದ್ದಾರೆ ಎಂದು ನಾಲಿಗೆ ಹರಿಬಿಡುವ ನಾಯಕರು, ಮನಬಂದಂತೆ ಮಾತನಾಡುತ್ತಾರೆ, ಅವರ ನಾಲಿಗೆಗೆ ಲಗಾಮು ಇಲ್ಲ, ನಾನು ಹಣ ಕಳಿಸಿದ್ದು ನಮ್ಮ ಪಾರ್ಟಿ ಅವರಿಗೆ ಗೊತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕರಿರುವ ಸಭೆಯಲ್ಲಿ ಈ ರೀತಿಯ ಆಕ್ಷೇಪ ವ್ಯಕ್ತವಾಗುವಂತೆ ಮಾಡಿದ್ದು ಸರಿಯೇ? ಈ ರೀತಿ ಢೋಂಗಿ ರಾಜಕಾರಣ ನಡೆಯಲ್ಲ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ಅಶಿಸ್ತಿನ ನಡವಳಿಕೆಗೆ ಬಿಜೆಪಿ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಿದೆ ಎಂದು ನಿರಾಣಿ ಹೇಳಿದರು.

2018 ರಲ್ಲಿ ಕಾರಜೋಳ ಅವರ ಪುತ್ರ ಡಾ.ಗೋಪಾಲ ಕಾರಜೋಳ ಅವರು ಸ್ಪರ್ಧೆ ಮಾಡಿದ್ದರು, ಅವರನ್ನು ಸೋಲಿಸಿದ್ದು ಯಾರು? ಬಬಲೇಶ್ವರದಿಂದ ಸ್ಪರ್ಧೆ ಮಾಡಿದ ವಿಜುಗೌಡ ಪಾಟೀಲರನ್ನು ಸೋಲಿಸಿದ್ದು ಯಾರು? ನಾನೇ ಹಿಂದೂ ಹುಲಿ ಎಂದು ಜಂಬಕೊಚ್ಚಿಕೊಳ್ಳುವ ನಾಯಕರು ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಹೋಗಿ ಟೋಪಿ ಧರಿಸಿ ನಮಾಜ್‌ಗೆ ಹೋಗಿದ್ದು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.

ಇಂದು ನಾವು ಸೋತಿರಬಹುದು, ಇಂದಿರಾ ಗಾಂಧೀ, ಅಟಲ್ ಬಿಹಾರಿ ವಾಜಪೇಯಿ, ದೇವೆಗೌಡ ಹೀಗೆ ಅನೇಕ ದಿಗ್ಗಜರು ಸೋತಿದ್ದಾರೆ, ಸೋಲು-ಗೆಲುವು ಸಾಮಾನ್ಯ, ಆದರೆ ನಾನೇ ಗೆದ್ದಿರುವೆ, ನಾನೇ ಹಿರೋ ಎಂದು ಬಿಂಬಿಸಿಕೊಂಡು ತಮ್ಮ ಬೆನ್ನು ಚಪ್ಪರಿಸಿಕೊಂಡು ಧಿಮಾಕಿನ ಮಾತು ಹೇಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News