ತಂದೆ ಕಾರಣದಿಂದ ವಿಜಯೇಂದ್ರಗೆ ಅಧಿಕಾರ ಸಿಕ್ಕಿದೆ, ಸಾಧನೆ ಶೂನ್ಯ : ಪ್ರದೀಪ್ ಈಶ್ವರ್

Update: 2024-05-29 14:01 GMT

Screengrab : x/@INCKarnataka

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಎನ್ನುವ ಕಾರಣಕ್ಕೆ ಬಿ.ವೈ.ವಿಜಯೇಂದ್ರ ಅವರಿಗೆ ಅಧಿಕಾರ ಸಿಕ್ಕಿದೆ. ಇದನ್ನು ಹೊರತುಪಡಿಸಿದರೆ, ವಿಜಯೇಂದ್ರ ಸಾಧನೆ ಶೂನ್ಯ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ʼಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಚರ್ಚೆ ಮಾಡಬೇಕಾದ ವಿಚಾರಗಳನ್ನು ಬಿಟ್ಟು ವಿಷಯಾಂತರ ಮಾಡಿ ಮಾತನಾಡುತ್ತಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತಲೆಕೋದಲು ಬಗ್ಗೆ ಮಾತನಾಡುವ ಬದಲು ಅಗತ್ಯತೆ ಕುರಿತು ಪ್ರತಿಕ್ರಿಯಿಸಿʼ ಎಂದರು.

ಮಧು ಬಂಗಾರಪ್ಪ ಅವರ ಬಗ್ಗೆ ಮಾತನಾಡಿದ್ದೀರಿ ಎಂದು ನಿಮ್ಮ ಕ್ಷಮೆಯನ್ನೂ ನಾವು ಬಯಸುವುದಿಲ್ಲ. ನಿಮ್ಮ ಕ್ಷಮೆ ನಮಗೆ ಬೇಡ. ಬದಲಾಗಿ ಪಕ್ಷ ಕಟ್ಟಿದ ಕೆ.ಎಸ್.ಈಶ್ವರಪ್ಪ, ಬಸನಗೌಡಪಾಟೀಲ್ ಯತ್ನಾಳ್ ಅವರ ಬಳಿ ಕೇಳಿ. ಅಲ್ಲದೆ, ಇದುವರೆಗೂ ಬರ ಪರಿಹಾರದ ಬಗ್ಗೆ ಮಾತನಾಡಿಲ್ಲ. ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಕೇಂದ್ರದ ಬಳಿ ಮಾತನಾಡಿಲ್ಲ. 26 ಜನ ಸಂಸದರಿದ್ದರೂ ಒಮ್ಮೆಯೂ ದನಿ ಎತ್ತಿಲ್ಲ ಎಂದು ಟೀಕಿಸಿದರು.

ಈ ಬಾರಿ ಕಾಂಗ್ರೆಸ್ ಪಕ್ಷದ 20ಕ್ಕೂ ಹೆಚ್ಚು ಸಂಸದರು ರಾಜ್ಯಕ್ಕೆ ಬೇಕಾದ ಸವಲತ್ತುಗಳನ್ನು ತರುತ್ತಾರೆ. ನೀವು ಅನಾವಶ್ಯಕ ಮಾತುಗಳನ್ನು ಬಿಟ್ಟು ಹಿಂದುಳಿದ ವರ್ಗಗಳ ನಾಯಕರು ಬೆಳೆಯಲು ಅವಕಾಶ ಮಾಡಿಕೊಡಿ ಎಂದ ಅವರು, ಶಿವಮೊಗ್ಗದ ಇತಿಹಾಸದಲ್ಲಿ ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕದ ಮೂಲಕ ಹಳ್ಳಿ ಯುವಕರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಅಪ್ಪನ ಹಾದಿಯಂತೆ ಮಧು ಬಂಗಾರಪ್ಪ ಅವರು 12 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ಕಟ್ಟುನಿಟ್ಟಾಗಿ ಎಸೆಸೆಲ್ಸಿ ಪರೀಕ್ಷೆಗಳು ನಡೆದಿವೆ. ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಶಿಸ್ತಿನ ಪಕ್ಷ ಎಂದು ಕರೆಯಲಾಗುತ್ತದೆ. ನಿಜವಾದ ಶಿಸ್ತಿನ ಪಕ್ಷ ಕಾಂಗ್ರೆಸ್. ಏಕೆಂದರೆ ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಿರಿಯ ನಾಯಕರ ವಿರುದ್ಧ ಮಾತನಾಡಿದರೆ ಪಕ್ಷದಿಂದ ಕಿತ್ತು ಹಾಕಲಾಗುವುದು. ಆದರೆ ಬಿಜೆಪಿಯಲ್ಲಿ ಬಾಯಿಗೆ ಬಂದಂತೆ ಬೈದುಕೊಂಡು ಓಡಾಡಬಹುದು. ಈಶ್ವರಪ್ಪ, ಯತ್ನಾಳ್ ಅವರು ಮಾತನಾಡುತ್ತಲೇ ಇದ್ದಾರೆ, ಅವರ ವಿರುದ್ಧ ಮೊದಲು ಕ್ರಮ ತೆಗೆದುಕೊಳ್ಳಿ. ಕುರ್ಚಿಗಲ್ಲ ಧೈರ್ಯ ಇರುವುದು, ಅದರ ಮೇಲೆ ಕುಳಿತುಕೊಳ್ಳುವವರಿಗೆ ಎಂದು ಚಾಟಿ ಬೀಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News