‘ಶಕ್ತಿ' ಯೋಜನೆಗೆ ವೀರೇಂದ್ರ ಹೆಗ್ಗಡೆ ಮೆಚ್ಚುಗೆ: ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Update: 2023-07-14 13:06 GMT

ಬೆಂಗಳೂರು: ‘ರಾಜ್ಯದಲ್ಲಿ ಹದಿನಾಲ್ಕನೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು, ರಾಜ್ಯ ಸರಕಾರದ ‘ಶಕ್ತಿ’ ಯೋಜನೆಗೂ ಮೆಚ್ಚುಗೆ ವ್ಯಕ್ತಪಡಿಸಿ, ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ''ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ನಾನು ಮಂಡಿಸಿದ 14 ನೇ ಬಜೆಟ್ ನ ಫಲಶೃತಿಯನ್ನು ಶ್ಲಾಘಿಸಿ ಹಾಗೂ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸಿಕ್ಕಿರುವ ಜನ ಮನ್ನಣೆಗೆ ಮೆಚ್ಚುಗೆ ಸೂಚಿಸಿ ಬರೆದಿರುವ ಪತ್ರಕ್ಕೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ. 

''ಸರ್ಕಾರಕ್ಕೆ ನೈತಿಕ ಸ್ಥೈರ್ಯ''

''ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಹಲವು ಜನಪರ ಹಾಗೂ ಅಭಿವೃದ್ಧಿಪರ ನಿರ್ಧಾರಗಳನ್ನು ಕೈಗೊಂಡಿದೆ. ವೀರೇಂದ್ರ ಹೆಗ್ಗಡೆಯವರು ಸರ್ಕಾರದ ಸಾಧನೆ, ಯೋಜನೆಗಳನ್ನು ಮೆಚ್ಚಿ ಶ್ಲಾಘಿಸಿದ್ದು ನಮ್ಮ ಸರ್ಕಾರಕ್ಕೆ ನೈತಿಕ ಸ್ಥೈರ್ಯ ತುಂಬಲಿದೆ'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸಿಎಂಗೆ ಬರೆದ ಪತ್ರದಲ್ಲೇನಿದೆ ?

‘ಅನೇಕ ಯೋಜನೆಗಳ ಮೂಲಕ ಸಿದ್ದರಾಮಯ್ಯ ಅವರು ಜನರಿಗೆ ಉಪಯುಕ್ತ ಕಾರ್ಯಕ್ರಮ ನೀಡಿದ್ದು, ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು, ವಿಶೇಷವಾಗಿ ಮಹಿಳೆಯರು ಸಂತೋಷ ವ್ಯಕ್ತಪಡಿಸಿದ್ದು, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

'ಜೈನ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವ ವಿಚಾರ ತಿಳಿದು ಇಡೀ ಸಮಾಜಕ್ಕೆ ಸಂತೋಷವಾಗಿದೆ. ಎಲ್ಲರ ಪರವಾಗಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು, ತಮಗೆ ಅವಕಾಶವಿದ್ದಾಗ ಕ್ಷೇತ್ರಕ್ಕೆ ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗಬೇಕು ಎಂದು ಡಿ.ವೀರೇಂದ್ರ ಹೆಗ್ಗಡೆ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News