ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೆ ಕೆಲಸ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 02: ಯಾರೂ ಏನೇ ಹೇಳಿದರೂ ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೆ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಅವರು ಇಂದು ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ಅಲಹಳ್ಳಿ ಅಂಜನಾ
ಪುರ ದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಗಾಣಿಗ ಜನಾಂಗದ ಸಮಾವೇಶ, ನೂತನ ಕಟ್ಟಡ ಬ್ಲಾಕ್-1 ಉದ್ಘಾಟನೆ ಹಾಗೂ ಬ್ಲಾಕ್ -2 ಕಟ್ಟಡಕ್ಕೆ ಶಿಲಾನ್ಯಾಸ ನೆರೆವೇರಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ಅವಕಾಶ ವಂಚಿತ ಜನರಿಗೆ, ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವವರು, ಸಾಮಾಜಿಕ ನ್ಯಾದಿಂದ ಇಂದಿಗೂ ವಂಚಿತರಾದ ಜನರ ಪರವಾಗಿ ನಾವು ಇರುತ್ತೇವೆ ಎಂದರು.
ಗಾಣಿಗರ ನಿಗಮ ಸ್ಥಾಪನೆ, ವಿಶ್ವಕರ್ಮ ಯೋಜನೆಯಡಿ ಗಾಣಿಗರನ್ನು ಬಿಟ್ಟಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮನವಿ ಮಾಡಿದ್ದಾರೆ. ನಿಮ್ಮ ಸಮಾಜಕ್ಕೆ ಸೇರಿದ ಪ್ರಧಾನಿಗಳಿಗೆ ನಿಮ್ಮ ಸಮಸ್ಯೆ ಗೊತ್ತಿದೆಯೋ ಗೊತ್ತಿಲ್ಲ. ಆದರೆ ನಾನು ಕೂಡಲೇ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧ ಮಾಡಿದ್ದು, ವರದಿಯನ್ನು ಇನ್ನೂ ನಾವು ಸ್ವೀಕಾರ ಮಾಡಿಲ್ಲ. ವರದಿಯನ್ನು ಸ್ವೀಕರಿಸಲೆಂದೇ ಆಯೋಗದ ಅವಧಿಯನ್ನು 2 ತಿಂಗಳು ಮುಂದುವರಿಸಲಾಗಿದೆ. ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು.
ಗಾಣಿಗರಿಗೆ ಹೆಚ್ಚಿನ ಸಹಾಯ ಮಾಡುವುದಾಗಿ ಭರವಸೆ ನೀಡಿದ ಸಿಎಂ, ನಿಮಗೆ ನ್ಯಾಯ ಕೊಡಿಸಲು ಸದಾ ನಿಮ್ಮೊಂದಿಗೆ ಇರುತ್ತೇನೆ. ಎಲ್ಲಾ ಜಾತಿಯ ಬಡವರಿಗೆ ಗ್ಯಾರಂಟಿಗಳನ್ನು ಒದಗಿಸಲಾಗಿದೆ ಎಂದರು.
ಗಾಣಿಗ ಸಂಘದ ಅಧ್ಯಕ್ಷ ಎಂ.ಆರ್.ರಾಜಶೇಖರ್, ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್.ಸುದರ್ಶನ್, ಶಾರದಾ ಮೋ ಹನ್ ಶೆಟ್ಟಿ, ಡಾ: ವಾಸಂತಿ, ಮೈಸೂರಿನ ಮಾಜಿ ಮೇಯರ್ ಅನಂತ್, ರಮೇಶ್, ಎಂ.ಎಸ್.ಶ್ರೀ ನಿವಾಸಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.