ಸರಕಾರವೇ ಕಾಲಿಗೆ ಬೀಳುವಾಗ ಸೌಜನ್ಯಾ ಪ್ರಕರಣಕ್ಕೆ ನ್ಯಾಯ ಎಲ್ಲಿ?: ಶಿವಸುಂದರ್ ಪ್ರಶ್ನೆ

ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಸಮಾಜ ಯಾರು ತಪ್ಪಿತಸ್ಥರೆಂದು ಗುರುತಿಸುತ್ತಿದೆಯೋ, ಅವರ ಕಾಲಿಗೆ ಸರಕಾರವೇ ಬೀಳುತ್ತಿದೆ. ಹೀಗಿರುವಾಗ ಈ ಪ್ರಕರಣಕ್ಕೆ ನ್ಯಾಯ ಕೊಡಿಸುವರು ಯಾರು ಎಂದು ಚಿಂತಕ ಶಿವಸುಂದರ್ ಪ್ರಶ್ನಿಸಿದ್ದಾರೆ.
ರವಿವಾರ ನಗರದ ಮಿಡಾಸ್ ಸ್ಕೂಲ್ ಆಫ್ ಎಂಟರ್ ಪ್ರೆನರಶಿಪ್‍ನ ಸಭಾಂಗಣದಲ್ಲಿ ಸಮಾಜಮುಖಿ, ಅಂಕುರ ಪ್ರಕಾಶನ ಮತ್ತು ಸ್ವ್ಯಾನ್ ಪ್ರಿಂಟರ್ ಆಶ್ರಯದಲ್ಲಿ ಚಂದ್ರಕಾಂತ ವಡ್ಡು ಅವರ ಸಂಪಾದಿತ ಚನ್ನಬಸವಣ್ಣನ ಗುಣವಿಶೇಷ ಕೃತಿ 'ಚುಂಬಕ ಗಾಳಿ' ಲೋಕಾರ್ಪಣೆ ಮತ್ತು ‘ಲೋಹಿಯಾ ಸಮಾಜವಾದ ಮತ್ತು ಇಂದಿನ ಸರಕಾರಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣವೂ ಮತ್ತೊಂದು ಬಾರಿ ಗಂಭೀರ ಸ್ವರೂಪ ಪಡೆದುಕೊಂಡು ಚರ್ಚಾ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಇತ್ತ ಗಮನ ನೀಡಬೇಕಿತ್ತು. ಪೊಲೀಸರೊಂದಿಗೆ ಚರ್ಚೆಸಿ ತನಿಖೆಯತ್ತ ನೋಡಬೇಕಿತ್ತು. ಆದರೆ, ತಪ್ಪಿತಸ್ಥರೆಂದು ಹೇಳಲಾಗುತ್ತಿರುವ ವ್ಯಕ್ತಿಗಳ ಕಾಲಿಗೆ ಸರಕಾರವೇ ಹೋಗುತ್ತಿದೆ. ಹೀಗಿರುವಾಗ, ನ್ಯಾಯ ದೊರೆಯಲು ಹೇಗೆ ಸಾಧ್ಯ?. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾನೂನಿಂದ ದೊಡ್ಡವರಿಗೆ ತೊಂದರೆ ಆಗುವುದಿಲ್ಲವೆಂದು ರಾಜ್ಯ ಸರಕಾರದ ಸಚಿವರೊಬ್ಬರು ಭರವಸೆ ನೀಡಿರುವುದು ಅಚ್ಚರಿ ತಂದಿದೆ ಎಂದರು.
ಆದಿವಾಸಿಗಳನ್ನು ನಕ್ಸಲರ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತಿದೆ. ಇದರ ಹಿಂದೆ ಖನಿಜ ಸಂಪತ್ತಿನ ಮಾಫಿಯಾ ಇದೆ. ಇದನ್ನು ನೋಡಿಯೂ ನೋಡದಂತೆ ಇರಬಾರದು. ಪ್ರತಿಯೊಬ್ಬರೂ ಇಂತಹ ವಿಷಯ ಕುರಿತು ಧ್ವನಿಗೂಡಿಸಬೇಕಾಗಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸರಕಾರಗಳನ್ನು ಪ್ರಶ್ನಿಸುವವರನ್ನು ನಗರ ನಕ್ಸಲ್ ಎಂದು ಹೆಸರಿಸಿ ಹತ್ಯೆ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.