ರೈತರು ಸುಪ್ರೀಂಕೋರ್ಟ್‌ ಗೆ ಹೋಗಬೇಕಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ?: ಡಿ.ಕೆ.ಶಿವಕುಮಾರ್ ಗೆ ಬೊಮ್ಮಾಯಿ ಪ್ರಶ್ನೆ

Update: 2023-08-17 13:47 GMT

ಬೆಂಗಳೂರು, ಆ.17: ಕಾವೇರಿ ನೀರು ಉಳಿಸಿಕೊಳ್ಳಲು ರೈತರು ಸುಪ್ರೀಂಕೊರ್ಟ್‍ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿನ್ನೆ ಡಿ.ಕೆ.ಶಿವಕುಮಾರ್ ಅವರು ಅಣೆಕಟ್ಟೆಯ ಬೀಗ ನಮ್ಮ ಕೈಯಲ್ಲಿ ಇಲ್ಲ’ ಎಂದು ಹೇಳಿದ್ದಾರೆ. ನಮ್ಮ ಅಣೆಕಟ್ಟುಗಳ ಮೇಲೆ ನಮ್ಮ ಹಕ್ಕಿದೆ. ಆದರೆ, ಇವರು ನಮ್ಮ ಹಕ್ಕನ್ನು ಬಿಟ್ಟು ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮ ಹಕ್ಕನ್ನು ಅವರಿಗೆ ಬಿಟ್ಟು ಕೊಟ್ಟು, ತಾವು ಮಾಡಿದ ತಪ್ಪಿಗೆ, ರೈತರಿಗೆ ಸುಪ್ರೀಂ ಕೋರ್ಟಿಗೆ ಹೋಗಿ ಅಂತ ಹೇಳುತ್ತಿದ್ದಾರೆ. ರೈತರು ಸುಪ್ರೀಂಕೋರ್ಟಿಗೆ ಹೋಗಬೇಕಾದರೆ ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕಿತ್ತು. ಇವರು ಯಾಕೆ ಸರಕಾರದಲ್ಲಿ ಅಧಿಕಾರ ಮಾಡಬೇಕು. ನೀವು ರಕ್ಷಣೆ ಮಾಡಲಿ ಅಂತಾನೆ ಜನ ನಿಮ್ಮನ್ನ ಆಯ್ಕೆ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಾವೇರಿ ಜಲಾನಯನ ಪ್ರದೇಶದ ಜನ ನಿಮಗೆ ಶಾಸಕರನ್ನು ಕೊಟ್ಟಿದ್ದಾರೆ. ಅವರು ರೈತರ ರಕ್ಷಣೆ ಮಾಡದೇ ಇದ್ದರೆ ನೀವುಗಳು ಯಾಕೆ ಬೇಕು? ಇದರಲ್ಲಿ ಏನೋ ರಾಜಕೀಯ ಹಿತಾಸಕ್ತಿ ಇದೆ ಅಂತ ಕಾಣಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಕಿಡಿಗಾರಿದರು.

ಕಾವೇರಿ ಜಲಾನಯನದ ವಿವಾದ ಹೊಸದಲ್ಲ ಟ್ರಿಬ್ಯುನಲ್ ಆದೇಶ ಆಗಿದೆ. ಯಾವ ರೈತರು ಎಷ್ಟು ಬೆಳೆ ಬೆಳೆಯಬೇಕು ಅಂತ ನಿರ್ಧಾರ ಆಗಿದೆ. ತಮಿಳುನಾಡು ರೈತರು 32 ಟಿಎಂಸಿ ನೀರು ಬಳಕೆ ಮಾಡಿಕೊಂಡು 1.80 ಲಕ್ಷ ಹೆಕ್ಟೇರ್ ಬೆಳೆ ಬೆಳೆಯಬೇಕು ಅಂತ ನಿರ್ಧಾರ ಆಗಿದೆ ಎಂದು ಅವರು ಮಾಹಿತಿ ನೀಡಿದರು.

ಆದರೆ, ಅವರು 60 ಟಿಎಂಸಿ ನೀರು ಬಳಕೆ ಮಾಡಿಕೊಂಡು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದ್ದಾರೆ. ಅದನ್ನು ನಮ್ಮ ರಾಜ್ಯ ಸರಕಾರ ಪ್ರಶ್ನಿಸಬೇಕಿದೆ. ಇವರು ಪ್ರಶ್ನೆ ಮಾಡುತ್ತಿಲ್ಲ. ನಮ್ಮ ಜಲಾಶಯದ ನೀರನ್ನು ನಮ್ಮ ರೈತರಿಗೆ ಸರಿಯಾದ ಸಮಯದಲ್ಲಿ ಬಿಡಲಿಲ್ಲ. ಈಗ ತಮಿಳುನಾಡಿನವರು ನೀರು ಕೇಳುತ್ತಿದ್ದಾರೆ. ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ಯಾರೂ ಬಿಜೆಪಿ ಬಿಡುವುದಿಲ್ಲ: ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಹೋಗುತ್ತಾರೆ ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು, ಕಾಂಗ್ರೆಸ್ ಮೇಲೆ ಕಮಿಷನ್ ಆರೋಪ ಕೇಳಿ ಬಂದಿರುವುದರಿಂದ ಅದನ್ನು ಡೈವರ್ಟ್ ಮಾಡಲು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಯಶವಂತಪುರದಲ್ಲಿ ಸ್ಥಳಿಯವಾಗಿ ಕೆಲವು ಸಮಸ್ಯೆ ಇರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಹರಿಸಲಾಗುವುದು. ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News