ಸೇಡಂನಲ್ಲಿ ಸಂಘ ಪರಿವಾರದ ಸಂಘಟನೆಯ ಸಮಾವೇಶಕ್ಕೆ ಹೋಗ್ತಾರಾ ಸಿಎಂ, ಸಚಿವರು ?

Update: 2024-12-01 10:25 GMT

ಬೆಂಗಳೂರು: 2025ರ ಜ. 29 ರಿಂದ ಫೆ. 6 ರವರೆಗೆ ಗುಲ್ಬರ್ಗಾದ ಸೇಡಂನಲ್ಲಿ ಸಂಘ ಪರಿವಾರದ ಕೆ.ಏನ್. ಗೋವಿಂದಾಚಾರ್ಯನವರ ಅವರು ಸ್ಥಾಪಿಸಿರುವ ಭಾರತ ವಿಕಾಸ ಸಂಗಮ ಎಂಬ ಸಂಸ್ಥೆಯು ನಡೆಸುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವ -7 ಎಂಬ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಸಚಿವರು ಭಾಗವಹಿಸಲಿದ್ದಾರೆ ಎಂಬ ವಿಷಯ ಈಗ ಚರ್ಚೆಗೆ ಕಾರಣವಾಗಿದೆ.

"...ಹಿಂದೂ ಧರ್ಮ ನಮ್ಮ ದೇಶದ ಜೀವಾಳ.- ಧರ್ಮೋ ರಕ್ಷತಿ ರಕ್ಷಿತಃ ಇದರ ಮೂಲ ಸಿದ್ದಾಂತ. ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ. ನಮ್ಮ ಹಿರಿಯರು ಈ ವಿಷಯವನ್ನು ಆಧಾರವಾಗಿಟ್ಟುಕೊಂಡು ಧಾರ್ಮಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ಒಟ್ಟು ಸಮಾಜವನ್ನು ಸ್ಥಾಪಿಸಿದ್ದಾರೆ. ದೇವಾಲಯಗಳು ಮತ್ತು ಆಶ್ರಮಗಳು ನಮ್ಮ ಸಮಾಜವನ್ನು ಕಟ್ಟಿದ್ದಾರೆ. .. ದೇವಾಲಯಗಳು ಮತ್ತು ಆಶ್ರಮಗಳುನಮ್ಮ ಸಮಾಜದ ಜನರ ಜೀವನವನ್ನು ಸುಭದ್ರವಾಗಿ ಸ್ಥಾಪಿಸಿವೆ. ಈ ತಳಹದಿ ಬಿರುಕು ಬಿಡುತ್ತಿದೆ. ಇದನ್ನು ತಡೆಗಟ್ಟಲು ಹಾಗೂ ಆಧುನಿಕ ಜನಜೀವನದಲ್ಲಿ ಅಂಗವಾಗಿರುವ ಒತ್ತಡದ ಜೀವನ, ನಿರಾಶೆ, ಹಪಹಪಿತನವನ್ನು ಧರ್ಮದ ನೆಲಗಟ್ಟಿನಲ್ಲಿ ಹದ್ದುಬಸ್ತಿನಲ್ಲಿಡಲು ಮತ್ತು ಉತ್ತಮ ಮನಸ್ಥಿತಿಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಈ ಸಮಾವೇಶ ಹೊಂದಿದೆ" ಎಂದು ತಮ್ಮ ಕಾರ್ಯಕ್ರಮದ ಉದ್ದೇಶವನ್ನು ಸ್ಪಷ್ಟವಾಗಿ ತಮ್ಮ ಆಹ್ವಾನದಲ್ಲಿ ಬರೆಯಲಾಗಿದೆ.

ಈ ಭಾರತೀಯ ಸಂಸ್ಕೃತಿ ಉತ್ಸವ -7 ಎಂಬ ಕಾರ್ಯಕ್ರಮ ಒಂದು ಅಮೂಲಾಗ್ರವಾದ ಸಂಘಿ ಹಿಂದುತ್ವದ ಉತ್ಸವ ಕಾರ್ಯಕ್ರಮವಾಗಿದೆ. ಭಾರತೀಯ ಎಂದರೆ ಹಿಂದೂ ಅದರಲ್ಲೂ ಹಿಂದೂ ಬ್ರಾಹ್ಮಣೀಯ ಸಂಸ್ಕೃತಿ ಎಂಬ ಆರೆಸ್ಸೆಸ್ಸಿನ ಸಿದ್ಧಾಂತವನ್ನು ಪ್ರಚಾರ ಮಾಡುವುದೇ ಈ ಸಮಾವೇಶದ ಉದ್ದೇಶ ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.

ಇದರ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾಡುತ್ತಿರುವುದು ಮಾತ್ರವಲ್ಲದೆ ಏಳು ದಿನದ ಕಾಲ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಇತರ ಮಂತ್ರಿಗಳು ಮತ್ತು ಕಾಂಗ್ರೆಸ್ ಸಂಸದರುಗಳು ಅಧಿಕೃತವಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ

ಭಾರತ ವಿಕಾಸ ಸಂಗಮವು ಹೊರತಂದಿರುವ 52 ಪುಟಗಳ ವರ್ಣರಂಜಿತ ಆಹ್ವಾನ ಪತ್ರಿಕೆಯ ಪ್ರಕಾರ 28-1-2025 ರಂದು ಪ್ರಾರಂಭಿಕ ಶೋಭಾ ಯಾತ್ರೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಾದ ಶರಣ ಪ್ರಕಾಶ್ ಪಾಟೀಲ್ ಮತ್ತು ಕಾಂಗ್ರೆಸ್ ಸಂಸದರಾದ ರಾಧಾಕೃಷ್ಣ ದೊಡ್ಡಮನಿಯವರು ಭಾಗವಹಿಸುತ್ತಿದ್ದಾರೆ.

29-1-2025 ರಂದು ಶುರುವಾಗುವ ಮೊದಲ ದಿನದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮ್ಮಯ್ಯನವರು ಉದ್ಘಾಟಿಸಲಿದ್ದಾರೆ. ಹಾಗೂ ಸಚಿವ ಪ್ರಿಯಾಂಕಾ ಖರ್ಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 30-1-2025 ರಂದು ನಡೆಯಲಿರುವ ಶಿಕ್ಷಣದ ಹೆಸರಿನ ಸಂಜೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಸರ್ಕಾರದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ವಹಿಸಿಕೊಳ್ಳಲಿದ್ದಾರೆ. 1-2-2025 ರಂದು ನಡೆಯಲಿರುವ ಕೃಷಿ ಹೆಸರಿನ ಸಂಜೆಯೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ವಹಿಸಿಕೊಳ್ಳುತ್ತಿದ್ದಾರೆ.

3-2-2025 ರಂದು ನಡೆಯಲಿರುವ ಸ್ವಯಂ ಉದ್ಯೋಗದ ಹೆಸರಿನ ಕಾರ್ಯಕ್ರಾಮದ ಮುಖ್ಯ ಅತಿಥಿಯಾಗಿ ಕಾಂಗ್ರೆಸ್ಸಿನ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ್ ಭಾಗವಹಿಸಲಿದ್ದಾರೆ. 4-2-2025 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಳ್ಳಾರಿಯ ಕಾಂಗ್ರೆಸ್ ಸಂಸದ ತುಕಾರಾಮ್ ಭಾಗವಹಿಸಲಿದ್ದಾರೆ. ಅಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಕಾಂಗ್ರೆಸ್ಸಿನ ಅಜಯ್ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇವರುಗಳಲ್ಲದೆ ಕೇಂದ್ರದ ಬಿಜೆಪಿ ಸರ್ಕಾರದ , ಮಹಾರಾಷ್ಟ್ರದ ಸರ್ಕಾರದ ಮಂತ್ರಿಗಳ ಜೊತೆಗೆ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಹಲವು ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ISRO ಅಧ್ಯಕ್ಷರಿಂದ ಮೊದಲುಗೊಂಡು ಹಲವು ಕೇಂದ್ರ ಸರಕಾರದ ಸಂಸ್ಥೆಗಳ ಮುಖ್ಯಸ್ಥರೂ ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರು ಗುಲ್ಬರ್ಗ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ದಯಾನಂದ ಅಗ್ಸರ್ ಅವರು. ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಯಲಯದ ಉಪಕುಲಪತಿಗಳಾದ ಪ್ರೊ. ಭತ್ತು ಸತ್ಯನಾರಾಯಣ ಉಪಾಧ್ಯಕ್ಷರು.

ಇದಲ್ಲದೆ ಸಾಹಿತ್ಯ ಪರಿಷತ್ತಿನ ಅಧ್ಯಾಕ್ಷರಾದ ಮಹೇಶ್ ಜೋಷಿಯಿಂದ ಹಿಡಿದು, ಮಂಡ್ಯ ಸಾಹತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋ.ರು. ಚನ್ನಬಸಪ್ಪನ್ನವರವರೆಗೆ, ಹಲವರನ್ನು ಈ ಸಂಘ ಪರಿವಾರದ ಸಮ್ಮೇಳನ ಆಹ್ವಾನಿಸಿದೆ. ಕಲಬುರ್ಗಿ, ಬೀದರ್ ಗಳ ಕೆಲವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಹೆಸರೂ ಈ ಆಹ್ವಾನ ಪತ್ರಿಕೆಯಲ್ಲಿದೆ.

RSS ಗೆ 100 ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ ಸಂಘಪರಿವಾರವು ಹಲವು ಉಗ್ರ, ಮೃದು ಮುಖವಾಡಗಳನ್ನು ದೇಶ-ಧರ್ಮ-ಸಂಸ್ಕೃತಿ- ಅಭಿವೃದ್ಧಿ- ಇತ್ಯಾದಿಗಳ ಉಡುಪುಗಳನ್ನು ಹೊದ್ದುಕೊಂಡು ಇಡೀ ದೇಶವನ್ನು ಹಿಂದುತ್ವದ ತೆಕ್ಕೆಗೆ ತೆಗೆದುಕೊಳ್ಳುವ ಬೃಹತ್ ಸಂವಿಧಾನ ದ್ರೋಹಿ -ಸಂವಿಧಾನ ನಿರ್ನಾಮ ಯೋಜನೆಯನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿದ್ದರೆ ಈ ಕಾರ್ಯಕ್ರಮದೊಂದಿಗೆ ತನ್ನೆಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಭಾರತವೆಂದರೆ ಹಿಂದೂ ಎನ್ನುವ ಈ ಸಂವಿಧಾನ ವಿರೋಧಿ ಮೌಲ್ಯಗಳ ಸಮಾವೇಶವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಬಾರದು. ಮತ್ತು ಈ ಸಿದ್ಧಾಂತಗಳ ಪ್ರಚಾರಕ್ಕೆ ಸರ್ಕಾರದ ಬಳಕೆಯನ್ನು ನಿರಾಕರಿಸಬೇಕು ಎಂದು ಶಿವಸುಂದರ್ ಆಗ್ರಹಿಸಿದ್ದಾರೆ.

ಆರೆಸ್ಸೆಸ್ ಗೆ ನೇರವಾಗಿ ಅದರದ್ದೇ ಅಂಗಸಂಸ್ಥೆಗಳು ಹಲವಾರು ಇರುವಂತೆಯೇ ಅದರ ಅಂಗಸಂಸ್ಥೆ ಎಂದು ನೇರವಾಗಿ ಹೇಳಿಕೊಳ್ಳದೆ ಅದರದೇ ಸಿದ್ಧಾಂತ ಹಾಗು ಕಾರ್ಯಸೂಚಿಯಲ್ಲಿ ಕೆಲಸ ಮಾಡುವ ನೂರಾರು ಸಂಘ ಸಂಸ್ಥೆಗಳಿವೆ. ಅಂತಹದ್ದೇ ಒಂದು ಸಂಸ್ಥೆ ಈ ಭಾರತ ವಿಕಾಸ ಸಂಗಮ. ಇದರ ಸ್ಥಾಪಕ ಕೆ ಎನ್ ಗೋವಿಂದಾಚಾರ್ಯ ಆರೆಸ್ಸೆಸ್ ನ ಪ್ರಚಾರಕರಾಗಿದ್ದವರು. ಬಿಜೆಪಿಯಲ್ಲಿ ದೊಡ್ಡ ಹೆಸರಿದ್ದ ನಾಯಕ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದವರು. ವಾಜಪೇಯಿ ಅಡ್ವಾಣಿ ಕಾಲದಲ್ಲಿ ವಾಜಪೇಯಿ ನಮ್ಮ ಪಕ್ಷ ಮತ್ತು ಸರಕಾರಕ್ಕೆ ಕೇವಲ ಮುಖವಾಡ ಮಾತ್ರ ಎಂದು ಹೇಳಿ ದೊಡ್ಡ ವಿವಾದವಾದ ಮೇಲೆ ಅವರು ಬಿಜೆಪಿಯಿಂದ ಅನಿವಾರ್ಯವಾಗಿ ಹೊರಬರಬೇಕಾಯಿತು.

ಈಗ ಆ ಕೆ ಎನ್ ಗೋವಿಂದಾಚಾರ್ಯ ಭಾರತ ವಿಕಾಸ ಸಂಗಮ ಎಂಬ ಸಂಘಟನೆಯ ಮೂಲಕ ಕೆಲಸ ಮಾಡುತ್ತಿದ್ದಾರೆ. ಗೋವಿಂದಾಚಾರ್ಯ ಈಗಲೂ ಆರೆಸ್ಸೆಸ್ ಹಾಗು ಸಂಘ ಪರಿವಾರದ ಕಟ್ಟಾಳು. ಈ ಭಾರತ್ ವಿಕಾಸ್ ಸಂಗಮದ ಪೋಷಕ ಹಾಗು ಸೇಡಮ್ ಸಮಾವೇಶದ ನೇತೃತ್ವ ವಹಿಸಿರುವವರು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ , ಆರೆಸ್ಸೆಸ್ ಪ್ರಚಾರಕ ಹಾಗು ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ್ ಪಾಟೀಲ್ ಸೇಡಂ.

ಮುಖ್ಯಮಂತ್ರಿಗಳು ಈ ಬಗ್ಗೆ ಬಹಿರಂಗ ಘೋಷಣೆ ಮಾಡಬೇಕು. ಕರ್ನಾಟಕದ ಪ್ರಗತಿಪರ ಶಕ್ತಿಗಳು ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸುವುದರ ಜೊತೆಗೆ ಸಂಘಪರಿವಾರದ ಹಿಂದುತ್ವವಾದಿ ಯೋಜನೆಗಳ ವಿರುದ್ಧ ಬೃಹತ್ ಅಭಿಯಾನವನ್ನು ನಡೆಸಬೇಕಿದೆ. ಮುಖ್ಯಮಂತ್ರಿಗಳು ಸಮಾವೇಶವನ್ನು ಉದ್ಘಾಟಿಸುತ್ತಿರುವ ಬಗ್ಗೆ ಸಂಘಟಕರ ಅಧಿಕೃತ ಆಹ್ವಾನ ಪತ್ರಿಕೆಯ 52 ಪುಟಗಳಲ್ಲಿ ದಾಖಲಾಗಿದೆ ಎಂದು ಶಿವಸುಂದರ್ ಹೇಳಿದ್ದಾರೆ

ಈ ಬಗ್ಗೆ ಕಲಬುರ್ಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕೇಳಿದಾಗ "ಅವರು ನಮಗೆ ಅಧಿಕೃತವಾಗಿ ಆಹ್ವಾನಿಸಿಲ್ಲ ಮತ್ತು ಮಾಹಿತಿ ಕೊಟ್ಟಿಲ್ಲ, ಸುಮ್ಮನೆ ಹೆಸರು ಹಾಕಿದ್ದಾರೆ ಅಷ್ಟೇ" ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಮಾವೇಶವೊಂದು ನಡೆಯುವಾಗ ಮುಖ್ಯಮಂತ್ರಿ ಸಹಿತ ಹತ್ತಾರು ಸಚಿವರ ಹೆಸರುಗಳನ್ನೂ ಹೇಳದೆ ಕೇಳದೆ ಹಾಕಲು ಸಾಧ್ಯವೇ ? ಹಾಕಿದ್ದರೂ ಅವರಿಗೆ ಅಧಿಕೃತ ಆಹ್ವಾನ ನೀಡದೆ ಒಪ್ಪಿಗೆ ಪಡೆಯದೇ ಹೇಗೆ ನಮ್ಮ ಹೆಸರು ಹಾಕಿದ್ರಿ, ಅದನ್ನು ತಕ್ಷಣ ತೆಗೀರಿ ಎಂದು ಸೂಚನೆ ನೀಡಿ ಹೆಸರು ಉಲ್ಲೇಖಿಸಲಾದ ಗಣ್ಯರು ಸ್ಪಷ್ಟೀಕರಣ ಕೊಟ್ಟು ಗೊಂದಲ ನಿವಾರಿಸಬೇಕಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಆದರೆ ರಾಜ್ಯ ಸರಕಾರದ ಯಾರೊಬ್ಬ ಸಚಿವರೂ ಈವರೆಗೆ ಅಂತಹ ಯಾವುದೇ ಸ್ಪಷ್ಟೀಕರಣ ಕೊಟ್ಟ ವರದಿಗಳಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇಡೀ ಸರಕಾರವೇ ಸಮಾವೇಶದಲ್ಲಿ ಭಾಗವಹಿಸುತ್ತದೆ ಎಂಬಂತೆ ಬಿಂಬಿಸಲಾಗಿರುವ ಆಹ್ವಾನ ಪತ್ರಿಕೆಯ ಪ್ರತಿಗಳು ಹರಿದಾಡುತ್ತಿವೆ. ಈಗ ಈ ಬಗ್ಗೆ ಜನರಿಗೆ ಸ್ಪಷ್ಟೀಕರಣ ಕೊಡುವ ಜವಾಬ್ದಾರಿ ಸರಕಾರಕ್ಕಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News