ಕೊಳವೆಬಾವಿ ಮುಚ್ಚದೆ ಬಿಟ್ಟಿದ್ದರೆ ಪ್ರಕರಣ ದಾಖಲಿಸಲು ಸೂಚನೆ: ಸಚಿವ ಎಂ.ಬಿ. ಪಾಟೀಲ್

Update: 2024-04-04 13:03 GMT

ಬೆಂಗಳೂರು: ಕೊಳವೆಬಾವಿಗಳನ್ನು ಮುಚ್ಚದೆ ಬಿಟ್ಟಿದ್ದರೆ, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲು ಪ್ರಕರಣ ದಾಖಲಿಸಬೇಕು. ಅಲ್ಲದೆ, ಮುಚ್ಚದೆ ಹಾಗೆಯೇ ಬಿಟ್ಟಿರುವ ಕೊಳವೆಬಾವಿಗಳ ಬಗ್ಗೆ ಸರ್ವೆ ನಡೆಸುವಂತೆ ವಿಜಯಪುರ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಇಂಡಿ ತಾಲೂಕು ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 14 ತಿಂಗಳ ಮಗುವನ್ನು 20 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಎಲ್ಲರನ್ನೂ ಶ್ಲಾಘಿಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎನ್‍ಡಿಆರ್‍ಎಫ್, ಎಸ್‍ಡಿಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೊಳವೆಬಾವಿಗೆ ಜಾರಿದ್ದ ಮಗುವನ್ನು (ಸಾತ್ವಿಕ) ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿರುವುದು ಅತ್ಯಂತ ಸಮಾಧಾನ ತಂದಿದೆ. ಘಟನೆ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದರು. ಗುರುವಾರ ಮಧ್ಯಾಹ್ನ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿಯುವ ತನಕ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News