ಬೆಳಗಾವಿಯಲ್ಲಿ ಡಿ.9ರಿಂದ 20ರವರೆಗೆ ಚಳಿಗಾಲದ ಅಧಿವೇಶನ
ಬೆಂಗಳೂರು: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಡಿ.9 ರಿಂದ 20ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಸರಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಅಧಿವೇಶನ ಕರೆಯುವ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‍ಗೆ ಕಡತ ರವಾನಿಸಿದೆ. ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕ, ಸ್ಥಳ ನಿಗದಿ ಮಾಡಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿತ್ತು.
ಅದರಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಡಿ.9 ರಿಂದ 20ರವರೆಗೆ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಕರೆಯುವಂತೆ ರಾಜ್ಯಪಾಲರಿಗೆ ಕಡತ ಕಳುಹಿಸಿಕೊಟ್ಟಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅಧಿವೇಶನಕ್ಕೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಬೆಳಗಾವಿಯಲ್ಲಿ 1924ರ ಡಿ.26 ಮತ್ತು 27ರಂದು ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದರು. ಈ ಕಾರ್ಯಕ್ರಮಕ್ಕೆ 100 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಡಿ.26 ಹಾಗೂ 27ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಲು ಪಕ್ಷ ಹಾಗೂ ರಾಜ್ಯ ಸರಕಾರ ಉದ್ದೇಶಿಸಿದೆ.
ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿ ಈ ಅಧಿವೇಶನವನ್ನು ಆಯೋಜಿಸಲು ಮುಂದಾಗಿರುವ ಕಾಂಗ್ರೆಸ್, ವಿವಿಧ ಸಮಿತಿಗಳನ್ನು ರಚನೆ ಮಾಡಿದೆ. ಅಲ್ಲದೇ, ಅಮೇರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲು ಸಿದ್ಧತೆ ನಡೆಸಿದೆ.