ಯತ್ನಾಳ್ ಮಹಾ ಸುಳ್ಳುಗಾರ, ಹಾಶ್ಮಿ ಅವರ ಮೇಲಿನ ಆರೋಪ ಸಾಬೀತುಪಡಿಸಲಿ: ಸಿಎಂ ಸಿದ್ದರಾಮಯ್ಯ

Update: 2023-12-07 09:59 GMT

ಬೆಳಗಾವಿ: ಶಾಸಕ ಯತ್ನಾಳ್ ಅಲ್ಪಸಂಖ್ಯಾತರ ವಿರುದ್ಧದ, ದ್ವೇಷದ ರಾಜಕಾರಣ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ತೆಲಂಗಾಣ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತೆರಳುವ ಮುನ್ನ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಅವರು, “ಯತ್ನಾಳ್ ಮಹಾ ಸುಳ್ಳುಗಾರ. ಚುನಾವಣೆ ಗೆಲ್ಲಲು ಯತ್ನಾಳ್ ಈ ರೀತಿ ಮಾಡಬಾರದು. ಹಾಶ್ಮಿ ಅವರ ಮೇಲಿನ ಆರೋಪ ಸಾಬೀತು ಮಾಡಲಿ. ಅವರದ್ದೇ ಸರ್ಕಾರ 10 ವರ್ಷಗಳಿಂದ ಇದೆ. ಇಷ್ಟು ವರ್ಷ ಏನು ಮಾಡುತ್ತಿದ್ದರು. ಬರೀ ಆರೋಪ ಮಾಡುವುದಲ್ಲ ಅದನ್ನು ಸಾಬೀತುಪಡಿಸಲಿ” ಎಂದು ವಾಗ್ದಾಳಿ ನಡೆಸಿದರು.

ಬಿಜಾಪುರ ಶರೀಫ್‌ನ ಸೂಫಿ ವಿದ್ವಾಂಸ ಸೈಯ್ಯದ್ ಮುಹಮ್ಮದ್ ತನ್ವೀರ್ ಹಾಶ್ಮಿ ಜೊತೆಗೆ ವೇದಿಕೆ ಹಂಚಿಕೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಹಾಶ್ಮಿ ಅವರೊಂದಿಗೆ ಬಹಳ ವರ್ಷಗಳಿಂದ ಸಂಬಂಧ ಇದೆ. ಯತ್ನಾಳ್ ಅವರು ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಪ್ರಯತ್ನಿಸಿದ್ದರು. ಎರಡೂ ಸಿಕ್ಕದ ಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆಯಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, “ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆ ಇರಲಿ, ಅದು ಇಲ್ಲವೇ ಇಲ್ಲ” ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News