ಯತ್ನಾಳ್‍ರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು: ರೇಣುಕಾಚಾರ್ಯ
ಬೆಂಗಳೂರು: ‘ಕೋವಿಡ್ ನಿರ್ವಹಣೆ ಸಂದರ್ಭದಲ್ಲಿ 40ಸಾವಿರ ಕೋಟಿ ರೂ.ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಈ ವರ್ಷದ ಅತ್ಯಂತ ದೊಡ್ಡ ಹಾಸ್ಯ ಪ್ರಸಂಗ. ಯತ್ನಾಳ್ ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ಅವರ ವಿರುದ್ಧ ಯತ್ನಾಳ್ ಮಾತನಾಡಿದ್ದಾರೆ. ಯತ್ನಾಳ್ ಪ್ರಭಾವಿ ಸಚಿವರ ಜೊತೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ. ಇದು ಯಾರಿಗೂ ಗೊತ್ತಿಲ್ಲವೇ?’ ಎಂದು ಪ್ರಶ್ನಿಸಿದರು.
ಕೋವಿಡ್ ಸಂದರ್ಭದಲ್ಲಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದರು. ಅಧಿವೇಶನದಲ್ಲಿ ಸುದೀರ್ಘ ಚರ್ಚೆಯಾಗಿತ್ತು. 2ಸಾವಿರ ಕೋಟಿ ರೂ.ಮಾತ್ರ ಬಿಡುಗಡೆಯಾಗಿತ್ತು. ಆದರೆ 40 ಸಾವಿರ ಕೋಟಿ ರೂ. ಎಂದು ಯತ್ನಾಳ್ ಆರೋಪ ಮಾಡುತ್ತಿದ್ದಾರೆ. ಅದರ ಬಗ್ಗೆ ದಾಖಲೆ ಇದ್ದರೆ ಕೊಡಲಿ ಎಂದರು.
ಹೇಳಿಕೆಯಿಂದ ನೋವಾಗಿದೆ: ಯತ್ನಾಳ್ ಬಗ್ಗೆ ನಾನು ಇಲ್ಲಿ ಮಾತನಾಡಲ್ಲ. ನನಗೆ ಮನಸ್ಸಿಗೆ ನೋವಾಗಿದೆ. ಪಕ್ಷದಲ್ಲೇ ಇದ್ದು ಈ ರೀತಿ ಹೇಳುವುದು ಸರಿಯಲ್ಲ. ನಾವೆಲ್ಲ ಪಕ್ಷ ಕಟ್ಟಲು ಶ್ರಮಿಸಿದ್ದೇವೆ. ನಾನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಒಪ್ಪುವುದಿಲ್ಲ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆಯನ್ನು ನಾನೂ ಒಪ್ಪುವುದಿಲ್ಲ. ಈ ವಿಚಾರವಾಗಿ ಹೈಕಮಾಂಡ್ ಬಳಿ ಮಾತಾಡಬಹುದಿತ್ತು. ಅದರ ಬದಲು ಅವರು ಬೀದಿಯಲ್ಲಿ ಮಾತಾಡಿರುವುದು ಸರಿಯಲ್ಲ. ಅವರ ಮನಸ್ಸಿಲ್ಲಿ ಏನಿದೆ ಎಂದು ಗೊತ್ತಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.