ನುಣುಚಿಕೊಳ್ಳುವ ಸಮಾಜ

Update: 2023-11-12 09:04 GMT

ವ್ಯಕ್ತಿಯೊಬ್ಬ ಕಳ್ಳನೋ, ಸುಳ್ಳನೋ, ಅತ್ಯಾಚಾರಿಯೋ, ಕೊಲೆಗಡುಕನೋ ಅಥವಾ ಮೋಸಗಾರನೋ ಆದ ಕೂಡಲೇ ಸಮಾಜ ಅವನನ್ನು ಒಂಟಿಯಾಗಿಸುತ್ತದೆ. ಅದೇ ಅವನು ಸಕಾರಾತ್ಮಕವಾಗಿ ಸಾಧಿಸಿದರೆ ಸುತ್ತಲೂ ಸೇರಿ ಹಾಡಿ ಹೊಗಳುತ್ತದೆ. ಇವ ನಮ್ಮವ ಇವ ನಮ್ಮವ ಎಂದು ಅವನನ್ನು ತಮ್ಮೊಡನೆ ಗುರುತಿಸಿಕೊಳ್ಳುತ್ತದೆ.

ಮಗುವಿನ ಬಾಲ್ಯ, ಮಗುವಿನ ಮೇಲಾಗಿರುವಂತಹ ಹೆತ್ತವರ ಮತ್ತು ಇತರ ಕುಟುಂಬದ ಸದಸ್ಯರ ಪ್ರಭಾವಗಳು, ಶಿಕ್ಷಣ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ವ್ಯಕ್ತಿಯ ವ್ಯಕ್ತಿತ್ವದ ಮೇಲೆ, ಸ್ವಭಾವದ ಮೇಲೆ, ನೈತಿಕತೆಯ ಮೇಲೆ ಪ್ರಭಾವ ಬೀರಿರುತ್ತವೆ.

ವ್ಯಕ್ತಿಯೊಬ್ಬ ನಕಾರಾತ್ಮಕವಾಗಿ ಪ್ರಕಟಗೊಂಡರೆ ಸಮಾಜ ಆತನನ್ನು ಒಂಟಿಯಾಗಿ ನಿಲ್ಲಿಸಿ ನೈತಿಕವಾಗಿ, ಸಾಮಾಜಿಕವಾಗಿ ಮತ್ತು ವ್ಯಕ್ತಿಗತವಾಗಿ ಕಳಂಕಿತನನ್ನಾಗಿಸಿ ಖಂಡಿಸುತ್ತದೆ, ದೂಷಿಸುತ್ತದೆ ಮತ್ತು ಶಿಕ್ಷಿಸುತ್ತದೆ. ಅದೇ ವ್ಯಕ್ತಿಯು ಸಕಾರಾತ್ಮಕವಾಗಿ ರೂಪುಗೊಂಡು ಸಾಧಿಸಿದರೆ, ಅವನಿಗೆ ದೊರಕಿರುವ ಕೌಟುಂಬಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಸ್ಕಾರಗಳನ್ನು ಪ್ರಶಂಸಿಸುತ್ತದೆ.

ವಾಸ್ತವವಾಗಿ ವಿಷಯ ವ್ಯತಿರಿಕ್ತವಾಗಿರುವುದು.

ಯಾರಾದರೂ ವ್ಯಕ್ತಿಯು ಸಕಾರಾತ್ಮಕವಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಏನೇ ಸಾಧನೆ ಮಾಡಿದರೂ, ಸಹನೆ, ಕರುಣೆ, ಪ್ರೀತಿ, ಮಮತೆಯಂತಹ ಸ್ವಭಾವವನ್ನು ಹೊಂದಿದ್ದರೂ, ಆರ್ಥಿಕವಾಗಿ, ಲೌಕಿಕವಾಗಿ ಉನ್ನತ ಸ್ತರಗಳನ್ನು ಹೊಂದಿದ್ದರೂ; ಅದು ಆ ವ್ಯಕ್ತಿಯ ವೈಯಕ್ತಿಕವಾದ ಆಶಯ, ಬದ್ಧತೆ ಮತ್ತು ಪರಿಶ್ರಮವೇ ಆಗಿರುತ್ತದೆ. ಕುಟುಂಬ ಮತ್ತು ಸಾಮಾಜಿಕ ಪರಿಸರ ವ್ಯಕ್ತಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಬಹುದು. ಸವಲತ್ತುಗಳೊಂದಿಗೆ ನೆರವಾಗಬಹುದು. ಹಿಂದಕ್ಕೆ ಎಳೆಯದೆ ಮುಂದಡಿಯಿಡಲು ಭಾವನಾತ್ಮಕವಾಗಿ ಮತ್ತು ನೈತಿಕವಾಗಿ ಒತ್ತಾಸೆಯಾಗಿ ನಿಲ್ಲಬಹುದು. ಆದರೆ ವ್ಯಕ್ತಿಯು ತನ್ನ ವ್ಯಕ್ತಿಗತವಾದ ಆಶಯ, ಬದ್ಧತೆ ಮತ್ತು ಪರಿಶ್ರಮವನ್ನು ಹೊಂದದಿದ್ದರೆ ಕುಟುಂಬದ ಮತ್ತು ಸಮಾಜದ ಎಲ್ಲಾ ಪೂರಕವಾದ ವಿಷಯಗಳನ್ನು ವಿಫಲಗೊಳಿಸುತ್ತದೆ. ಒಂದು ವೇಳೆ ವ್ಯಕ್ತಿಗೆ ಪೂರಕವಾದ ವಾತಾವರಣವಿಲ್ಲದಿದ್ದರೂ ತನ್ನ ಆಶಯ ಮತ್ತು ಬದ್ದತೆಯೊಂದಿಗೆ ಕಠಿಣ ಪರಿಶ್ರಮವನ್ನು ಹೊಂದಬೇಕಾಗುತ್ತದೆ. ಆ ವ್ಯಕ್ತಿಗೆ ಹೆಚ್ಚು ಹೆಚ್ಚು ಸವಾಲುಗಳಿರುತ್ತವೆ.

ಹಾಗೆಯೇ ಒಬ್ಬ ವ್ಯಕ್ತಿಯು ನಕಾರಾತ್ಮಕವಾಗಿ ರೂಪುಗೊಂಡರೆ ಕುಟುಂಬದ, ಮಾನವ ವಾತಾವರಣದ, ಜೈವಿಕ ಸಹವಾಸಗಳ ದೋಷವೇ ಆಗಿರುತ್ತದೆ. ಆ ವ್ಯಕ್ತಿಗೆ ನಿರೋಧಿಸುವಂತಹ ಮನೋಬಲವಿಲ್ಲದೆಯೇ ಪ್ರಭಾವಕ್ಕೆ ಒಳಗಾಗಿ ಪ್ರಭಾವಿಸುವ ವಿಷಯಕ್ಕೆ ತಕ್ಕಂತೆ ರೂಪುಗೊಳ್ಳುತ್ತಾನೆ. ಗಮನಿಸಿ, ವ್ಯಕ್ತಿಯು ನಕಾರಾತ್ಮಕವಾಗಿ ರೂಪುಗೊಳ್ಳುವುದಕ್ಕೆ ಕಾರಣ ಕುಟುಂಬ ಮತ್ತು ಇತರ ಸಾಮಾಜಿಕ ಪರಿಸರವೇ ಹೊರತು ವ್ಯಕ್ತಿಯಲ್ಲ. ವ್ಯಕ್ತಿಯು ಬಲಿಪಶು. ಆದರೆ ವ್ಯಕ್ತಿಯೇ ಖಂಡಿಸಲ್ಪಡುವುದು. ಏಕೆಂದರೆ ಕುಟುಂಬ ಮತ್ತು ಸಮಾಜ ರೂಪುಗೊಂಡಿರುವ ತಮ್ಮ ವ್ಯವಸ್ಥೆಯು ದೋಷಪೂರ್ಣವಾಗಿದೆ ಎಂದು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ.

ವ್ಯಕ್ತಿಯು ತನ್ನ ಮೇಲಾಗುತ್ತಿರುವ ಕುಟುಂಬದ ಮತ್ತು ಸಮಾಜದ ಪ್ರಭಾವಗಳನ್ನು ಗಮನಿಸಿ, ಅದರಿಂದ ತನ್ನಲ್ಲಿ ಉಂಟಾಗಿರುವಂತಹ ವರ್ತನೆಗಳ ರೀತಿ, ಆಲೋಚನೆಗಳ ಕ್ರಮ, ಮನಸ್ಥಿತಿಯ ಸ್ವರೂಪ, ಗುಣಾವಗುಣಗಳನ್ನೆಲ್ಲಾ ಗುರುತಿಸಿಕೊಂಡು, ಯಾವುದು ಅಗತ್ಯ, ಯಾವುದು ಅನಗತ್ಯ, ಯಾವುದರಿಂದ ಹಿತ, ಯಾವುದು ಅಹಿತ, ಯಾವುದು ಮನಸ್ಥಿತಿ, ಯಾವುದು ಮಾನಸಿಕ ಸಮಸ್ಯೆ; ಹೀಗೆಲ್ಲಾ ಆತ್ಮಾವಲೋಕನ ಮಾಡಿಕೊಂಡು, ತನ್ನನ್ನು ಪ್ರಭಾವಿಸಿರುವಂತಹ ಸಂಬಂಧಗಳನ್ನು, ವ್ಯಕ್ತಿಗಳನ್ನು ಕ್ಷಮಿಸಿ, ವ್ಯವಸ್ಥೆಗಳ ಸಂಸ್ಕಾರಗಳನ್ನು ಉಪೇಕ್ಷಿಸಿ, ತಾನು ಆರೋಗ್ಯವಂತ ಮನಸ್ಕನಾಗಬೇಕು ಎಂದು ಸಂಕಲ್ಪ ಮಾಡಿ, ತನ್ನಲ್ಲೀಗಾಗಲೇ ರೂಢಿಗತವಾಗಿರುವ ಎಲ್ಲಾ ನಕಾರಾತ್ಮಕ ವಿಷಯಗಳನ್ನೆಲ್ಲಾ ಸರಿಮಾಡಿಕೊಳ್ಳುವ ಹೊಸ ರೂಢಿಯನ್ನು ಅಭ್ಯಾಸ ಮಾಡಿಕೊಳ್ಳುತ್ತಾ; ನೋಡಿದರೆ, ಅದೆಷ್ಟು ಪರಿಶ್ರಮ ಪಡಬೇಕು. ಪರಿಶ್ರಮ ಹಾಕುವುದಿರಲಿ, ಈ ಅರಿವು ಬಂತೆಂದರೇನೇ ಅದು ಮಹಾಭಾಗ್ಯ. ಮುಂದಿನದೆಲ್ಲಾ ಮುಂದಿನ ಯೋಜನೆಗಳು.

ಒಬ್ಬನಿಗೆ ತನ್ನಲ್ಲಿ ಹುಟ್ಟುವ ಆಸೆ, ಕೋಪ, ಅಸಹನೆ, ಅಸೂಯೆ, ಕ್ರೌರ್ಯವೆಲ್ಲವನ್ನೂ ತೋರ್ಪಡಿಸಿಬಿಡುವುದು ಏನೇನೂ ವಿಶೇಷವಲ್ಲ. ಅದು ಸಹಜವಾಗಿ ಪ್ರಕಟವಾಗುವವು. ಆದರೆ ಹುಟ್ಟಿದ ಆಸೆಯನ್ನು ವಿವೇಚಿಸಿ, ಅದು ಅಗತ್ಯವೋ ಅನಗತ್ಯವೋ ಪರಿಶೀಲಿಸಿ, ಬೇಕಾದರೆ ಪೂರೈಸಿಕೊಂಡು, ಬೇಡವಾದರೆ ತ್ಯಾಗ ಮಾಡುವುದಕ್ಕೆ ಅರಿವು, ವಿವೇಚನೆ ಮತ್ತು ಪರಿಶ್ರಮಬೇಕು. ಕೋಪದಿಂದ ದೈಹಿಕವಾಗಿ ಅಥವಾ ಮೌಖಿಕವಾಗಿ ದಾಳಿ ಮಾಡುವುದರ ಬದಲು ಎದುರಾಳಿಯ ಪ್ರಚೋದನೆಗೆ ಕಾರಣವೇನು ಎಂದು ಆಲೋಚಿಸಿ, ಅವರನ್ನು ಕ್ಷಮಿಸಿ, ಕೋಪವನ್ನು ಸ್ನೇಹಮಯವಾದ ಪ್ರತಿಕ್ರಿಯೆಗೆ ತಿರುಗಿಸುವುದೆಂದರೆ ಅದೆಷ್ಟು ಪರಿಶ್ರಮದ ತರಬೇತಿ ಮನಸ್ಸಿಗಿರಬೇಕು. ಈ ಲೋಕದಲ್ಲಿ ಕೆಟ್ಟ ಮತ್ತು ಒಳ್ಳೆಯ ಮನಸ್ಸು ಎಂಬುದಿಲ್ಲ. ಅವುಗಳು ಪ್ರಶಂಸೆಯನ್ನು ತನ್ನದಾಗಿಸಿಕೊಳ್ಳುವ, ಆರೋಪವನ್ನು ನಿರಾಕರಿಸಲು ಯತ್ನಿಸುವ ಸಾಮಾಜಿಕ ಸಂಸ್ಥೆಗಳು ನೀಡುವ ಬರಿಯ ಹಣೆಪಟ್ಟಿಗಳಷ್ಟೇ. ತರಬೇತಿ ಹೊಂದಿರುವ ಮನಸ್ಸು, ತರಬೇತಿ ಹೊಂದಿರದ ಮನಸ್ಸಷ್ಟೇ ಇರುವುದು. ನಿಜ ಹೇಳುವುದಾದರೆ, ವ್ಯಕ್ತಿಗತವಾಗಿ ನಮ್ಮ ಬಹುದೊಡ್ಡ ಹೊಣೆಗಾರಿಕೆಯೆಂದರೆ ಯಾವುದೇ ಬಗೆಯ ಪ್ರಭಾವಗಳಿದ್ದರೂ ಆತ್ಮಾವಲೋಕನ ಮಾಡಿಕೊಳ್ಳುವುದರ ಮೂಲಕ ನಮಗೆ ನಾವು ಮತ್ತು ನಮ್ಮವರಿಗೆ ನಾವು ಹಾನಿಕಾರವಾಗದಿರುವಂತೆ ಎಚ್ಚರದ ಮತ್ತು ಆರೋಗ್ಯಕರವಾದ ಮನಸ್ಸನ್ನು ಹೊಂದುವುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ