ತಾಯತಗಳ ತಾಕಲಾಟಗಳು

Update: 2024-12-15 04:39 GMT

ಶಿಶುವಿಹಾರ ಮುಗಿಸಿ ಆಗ ತಾನೇ ಶಾಲೆಗೆ ಹೋಗುತ್ತಿರುವ ಮಗುವಿನ ಕೊರಳಲ್ಲಿ ಒಂದಷ್ಟು ತಾಯತಗಳು! ಅವುಗಳೇಕೆಂದು ಆ ಮಗುವನ್ನೇ ಕೇಳಲಾಗಿ ‘‘ನನಗೆ ಮೈ ಹುಷಾರಿರಲಿಲ್ಲ ಅದಕ್ಕೆ ನಮ್ಮಮ್ಮ ಯಂತ್ರ ಕಟ್ಟಿಸಿರೋದು’’ ಎಂದು ಹೇಳಿತು.

‘‘ಇದನ್ನು ಕಟ್ಟಿಸಿದರೆ ಹುಷಾರಾಗುತ್ತೀಯಾ?’’ ಎಂದು ಕೇಳಿದರೆ ಆ ಮಗು ಹೂ ಎಂದಿತು.

ಮಗುವಿಗೆ ವಿಜ್ಞಾನದ ಬಾಲಪಾಠವಾಗುವ ಮುನ್ನವೇ ಪರಿಚಯವಾಗಿರುವುದು ಈ ತಾಯತ. ತಾಯಿ ತನ್ನ ಮಗುವಿಗೆ ಶಿಕ್ಷಣಕ್ಕೆ ಪ್ರವೇಶಿಸುವ ಮುನ್ನವೇ ಪರಿಚಯಿಸಿರುವುದು ಶ್ರದ್ಧೆಯನ್ನೋ, ನಂಬಿಕೆಯನ್ನೋ, ಭರವಸೆಯನ್ನೋ ಅಲ್ಲ. ಬದಲಿಗೆ ತನ್ನ ಭಯ ಮತ್ತು ಆತಂಕವನ್ನು!

ಮಗುವಿನ ಮನಸ್ಸು ವಿಷಯಗಳನ್ನು ಗ್ರಹಿಸುವ ಮತ್ತು ಒಪ್ಪುವ ಆರಂಭಿಕ ಹಂತದಲ್ಲಿಯೇ ದೂರದೃಷ್ಟಿ ಮತ್ತು ಸೂಕ್ಷ್ಮದೃಷ್ಟಿ ಇರದ ಪೋಷಕರು ವೈಜ್ಞಾನಿಕ ವಿವೇಚನೆಯಿಲ್ಲದೆ ಇಂತಹ ದ್ವಂದ್ವಗಳನ್ನು ಮತ್ತು ಗೊಂದಲಗಳನ್ನು ಅವರಲ್ಲಿ ಬಿತ್ತುತ್ತಾರೆ. ಇದರ ಪರಿಣಾಮವಾಗಿ ಜಗತ್ತಿನ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಯ ಸಂಪೂರ್ಣ ಲಾಭ ಪಡೆಯಬೇಕಾಗಿರುವ ಪೀಳಿಗೆಗಳು ಮಾನಸಿಕವಾಗಿ ಆತಂಕ ಮತ್ತು ಅನಗತ್ಯ ಅವಲಂಬನದ ಮೊರೆ ಹೋಗುತ್ತಾರೆ.

ಇನ್ನು ಮಕ್ಕಳು ಮುಂದೆ ಬೆಳೆದಂತೆ ಭಾವನಾತ್ಮಕವಾಗಿ ಬಳಲುತ್ತಾರೆ. ಏಕೆಂದರೆ ಅವರಿಗೆ ಅರಿವು ಮೂಡುವ ಮೊದಲೇ ಸುಪ್ತಮನಸ್ಸಿನಲ್ಲಿ ಬಿತ್ತಲಾಗಿರುವ ಭೀತಿ ಮತ್ತು ಹುಸಿ ಪರ್ಯಾಯಗಳನ್ನು ನಿಜವೆಂದು ನಂಬಿರುತ್ತಾರೆ. ಅದು ಸುಪ್ತಚೇತನದಲ್ಲಿ ಮತ್ತು ಅಪ್ರಜ್ಞೆಯ ಮನಸ್ಸಿನಲ್ಲಿ ಹುದುಗಿಕೊಂಡಿರುವ ಭೀತಿ ಮತ್ತು ಹುಸಿ ಪರ್ಯಾಯವಾಗಿರುವುದರಿಂದ ವಯಸ್ಕರಾದಮೇಲೂ ಅವರ ಜಾಗೃತ ಮನಸ್ಸಿನ ಅರಿವಿಗೆ ಬರುವುದೇ ಇಲ್ಲ. ಆದರೆ ಆ ಭೀತಿ, ಆತಂಕ ಮತ್ತು ಹುಸಿ ಪರ್ಯಾಯಗಳೇ ವ್ಯಕ್ತಿಯ ಆ ಹೊತ್ತಿನ ಆಲೋಚನೆ ಮತ್ತು ನಡವಳಿಕೆಗಳನ್ನು ಆಳುತ್ತಿರುತ್ತವೆ ಮತ್ತು ನಿರ್ಧರಿಸುತ್ತಿರುತ್ತವೆ. ಅವರು ವೈದ್ಯಕೀಯ ನೆರವು ಪಡೆಯುವಾಗಲೂ ಪರ್ಯಾಯವಾಗಿ ಯಂತ್ರ-ಮಂತ್ರ-ತಂತ್ರಗಳ ಮೊರೆ ಹೋಗುತ್ತಾರೆ ಯಾವುದಕ್ಕೂ ‘ಇದೂ’ ಒಂದು ಇರಲಿ ಅಂತ.

ಮಗುವು ವ್ಯಕ್ತಿಯಾಗಿ ನಿಲ್ಲುವಾಗ ಅದರ ವಿಶ್ವದೃಷ್ಟಿ ಎಷ್ಟರಮಟ್ಟಿಗೆ ಇರುವುದೆಂಬ ಅರಿವೇ ಇಲ್ಲದೆ, ಊಹೆಯೂ ಇಲ್ಲದೇ ಪರಿಚಯಿಸಿರುವ ಹುಸಿ ಪರ್ಯಾಯಗಳಿಂದಾಗಿ ತನ್ನ ಗುರುತನ್ನು ಸಂಕುಚಿತಗೊಳಿಸಿಕೊಳ್ಳುತ್ತಾ ಹೋಗುವುದು. ಜಾಗತಿಕ ಮಟ್ಟದ ವಿಶಾಲ ದೃಷ್ಟಿ ಮತ್ತು ಪ್ರಗತಿಯ ಗತಿಗೆ ತನ್ನ ನಡೆಯನ್ನು ಹೊಂದಿಸಿಕೊಳ್ಳುವಲ್ಲಿ ಅಸಮರ್ಥತೆ ಕಾಡುವುದು.

ಪೋಷಕರು ಮಗುವಿನ ಮನಸ್ಸಿನಲ್ಲಿ ಬಿತ್ತಲಾಗುವ ತಮ್ಮ ಆತಂಕ, ಭೀತಿ ಮತ್ತು ಹುಸಿ ಪರ್ಯಾಯಗಳಿಂದಾಗಿ, ಆ ಮಗುವು ವ್ಯಕ್ತಿಯಾಗಿ ನಿಲ್ಲುವಾಗ ಅವುಗಳ ಅವಲಂಬನೆಯನ್ನು ಮತ್ತು ಅವೈಜ್ಞಾನಿಕವಾದ ನಡೆಯನ್ನು ಸಂಸ್ಕೃತಿಗೆ ಆರೋಪಿಸಿ, ಅದರ ಆಚರಣೆಗಳಲ್ಲಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಂಡು ತನ್ನಲ್ಲಿ ಆಗಿರುವ ಬಿತ್ತನೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗುವರೇ ಹೊರತು ಅವುಗಳು ಮಾನಸಿಕವಾಗಿ ದೋಷಪೂರಿತವಾದವು ಎಂದು ಒಪ್ಪಿಕೊಳ್ಳುವುದೇ ಇಲ್ಲ. ಅವರಿಗೆ ಅವರ ರೀತಿಯಲ್ಲಿಯೇ ಭೀತಿ ಮತ್ತು ಹುಸಿ ಪರ್ಯಾಯಗಳ ಮಾಂತ್ರಿಕತೆಗೆ ಮನೋವಶವಾಗಿರುವವರ ಬೆಂಬಲವಿದ್ದು ಸಂಕಲಿತವಾದ ಅಭಿಪ್ರಾಯವನ್ನು ಗಟ್ಟಿಯಾಗಿ ಹಿಡಿಯುತ್ತಾರೆ.

ವ್ಯಕ್ತಿಯಾಗಿ ಹೊಂದಿರುವ ಅಭಿಪ್ರಾಯ ಮತ್ತು ಗಾಢ ನಂಬುಗೆಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪೋಷಕರ ಪಾತ್ರ ಬಾಲ್ಯದಲ್ಲಿಯೇ ಪ್ರಭಾವಿಸಿರುತ್ತದೆ. ಅದರಿಂದ ವ್ಯಕ್ತಿ ಹೊರಬರಬೇಕಾದರೆ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಅರಿವು, ಅಧ್ಯಯನ ಮತ್ತು ಅನುಭವಗಳನ್ನು ಅವರ ಪ್ರಭಾವದಿಂದಾಚೆಗೆ ವಿಸ್ತರಿಸಿಕೊಂಡರೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಪೋಷಕರ ಜಿದ್ದುಗೇಡಿತನ, ಹಟಮಾರಿತನ, ಅರಿವುಗೇಡಿತನ ಮತ್ತು ಇತರ ನಕಾರಾತ್ಮಕ ಗುಣಗಳಂತೆ ಇವೂ ಕೂಡಾ ಅವರಲ್ಲಿ ಬೇರು ಬಿಡುತ್ತದೆ.

ಸಮಕಾಲೀನ ಶಿಕ್ಷಣವನ್ನು ಮತ್ತು ಜಾಗತಿಕ ವಿದ್ಯಮಾನಗಳ ಮಾಹಿತಿಗಳನ್ನು ಪಡೆಯುತ್ತಾ ಅವರ ಪೋಷಕರಿಗಿಂತಲೂ ಭಿನ್ನ ತಿಳುವಳಿಕೆಯನ್ನು ಪಡೆಯುತ್ತಾ ಹೋಗುವ ಮಕ್ಕಳ ಮನಸ್ಸಿನ ಆಳದಲ್ಲಿ ದ್ವಂದ್ವ ಮತ್ತು ಗೊಂದಲಗಳು ಸದಾ ಜೀವಂತವಾಗಿದ್ದು, ಅವರಿಗೆ ಅರಿವೇ ಇಲ್ಲದಂತೆ ಅದರ ಬಾಧೆಗೆ ಒಳಗಾಗುತ್ತಿರುತ್ತಾರೆ.

ಪೋಷಕರು ಮಕ್ಕಳ ಮನೋವಿಕಾಸದ ಮತ್ತು ಬುದ್ಧಿವಿಕಾಸದ ಹೊಣೆ ಹೊರಬೇಕಾಗಿರುವುದು ಸಹಜ ಜವಾಬ್ದಾರಿ. ವಿವೇಕ ಮತ್ತು ತಿಳುವಳಿಕೆ ಎಂಬುದು ಅವರದ್ದಷ್ಟೇ ಅಲ್ಲ ಹಾಗೂ ಅವರ ಮಕ್ಕಳು ಅವರಿಗಿಂತಲೂ ಮುಂದುವರಿದ ಶೈಕ್ಷಣಿಕ ಪ್ರಗತಿಯನ್ನು ಮತ್ತು ಔದ್ಯೋಗಿಕ ಅವಕಾಶಗಳನ್ನು ಹೊಂದುತ್ತಿರುವವರು ಎಂಬ ಸೂಕ್ಷ್ಮತೆಯನ್ನು ಹೊಂದಿರಬೇಕು. ಏಕೆಂದರೆ ಮಾಟ, ಮಂತ್ರ, ಯಂತ್ರ, ತಂತ್ರಗಳಂತಹ ಮಾಂತ್ರಿಕಾಚರಣೆಗಳು ವೈಜ್ಞಾನಿಕ ಸಂಶೋಧನೆಗಳಿಗಿಂತ ಬಹಳ ಪೂರ್ವ ಜನರಲ್ಲಿದ್ದಂತಹ ಸಾಂತ್ವನದ ಮತ್ತು ಭರವಸೆಗಳ ಸಾಧನಗಳೇ ಆಗಿದ್ದವು. ಆದರೆ ವೈಜ್ಞಾನಿಕವಾಗಿ ಮುಂದುವರಿದ ಯುಗದಲ್ಲಿ ಅವುಗಳು ನಮ್ಮ ಅಧ್ಯಯನಕ್ಕೆ ವಸ್ತುಗಳೇ ಹೊರತು ಅನುಸರಿಸಲು ಅಲ್ಲ. ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಯೋಗಿಸಲು ಮುಂದಾದಾಗ ಅವು ಹೊರ ಜಗತ್ತಿನ ವಾಸ್ತವ ಸಂಗತಿಗಳನ್ನೂ ಮತ್ತು ಮನೋಲೋಕದ ಗುಪ್ತಗಾಮಿನಿಗಳನ್ನೂ ತಾಳೆ ನೋಡಲಾಗದೆ ದ್ವಂದ್ವ ಮತ್ತು ಗೊಂದಲಗಳಿಂದ ಮಾನಸಿಕವಾಗಿ ಒತ್ತಡಕ್ಕೆ ಸಿಲುಕುತ್ತಾರೆ. ಆತಂಕವೇ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೀಗಾಗಿಯೇ ಇತ್ತೀಚೆಗೆ ವಾರಣಾಸಿಯಲ್ಲಿ ತನ್ನ ಭಕ್ತಿ ಮತ್ತು ಪೂಜೆಗೆ ಕಾಳಿ ಮಾತೆಯು ಬರಲಿಲ್ಲವೆಂದು ಅರ್ಚಕನೊಬ್ಬ ಕುತ್ತಿಗೆಯನ್ನು ಕುಯ್ದುಕೊಂಡು ಆತ್ಮಾಹುತಿ ಮಾಡಿಕೊಂಡ. ಹೈದರಾಬಾದಿನಲ್ಲಿ ವಿದ್ಯಾವಂತ ದಂಪತಿ ತಮ್ಮ ವಿದ್ಯಾವಂತ ಹೆಣ್ಣುಮಕ್ಕಳನ್ನು ದೇವರಿಗೆ ಬಲಿಕೊಟ್ಟರು. ಈ ಬಗೆಯ ಘಟನೆಗಳನ್ನು ದಿನ ನಿತ್ಯವೂ ನೋಡುತ್ತಿರುತ್ತೇವೆ. ಮೂರ್ತದಿಂದ ಅಮೂರ್ತದೆಡೆಗೆ ವಿಕಾಸವಾಗುವ ದೇವರ ಪರಿಕಲ್ಪನೆ ಅವರಲ್ಲಿ ಮೂಡಿಯೇ ಇಲ್ಲ. ರೂಪಕ, ತಾತ್ವಿಕ ಮತ್ತು ಸಾಂಕೇತಿಕ ವಿಷಯಗಳನ್ನೂ ಅಕ್ಷರಶಃ ಭಾವಿಸಿ ಮಾನಸಿಕವಾಗಿ ಭ್ರಮಾಧೀನರಾಗುವರು.

ಹೀಗಾಗಿಯೇ ದಾಂಪತ್ಯದಲ್ಲಿ ಸಮಸ್ಯೆ, ಕುಟುಂಬದಲ್ಲಿ ಕಲಹ, ವ್ಯಾಪಾರದಲ್ಲಿ ನಷ್ಟ, ನಿರುದ್ಯೋಗವೇ ಮೊದಲಾದ ಸಮಸ್ಯೆಗಳಿಗೆ ಸಂಬಂಧಪಟ್ಟ ಆಪ್ತ ಸಮಾಲೋಚಕರನ್ನು ಕಾಣುವ ಬದಲು ಮಾಟ ಮಂತ್ರದವರನ್ನು ಕಂಡು ಮಾಂತ್ರಿಕಾಚರಣೆಗಳಿಗೆ ಮೊರೆಹೋಗುತ್ತಿರುವುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು