ಧೋರಣೆಯ ಸಂಸ್ಕೃತಿ

Update: 2024-06-02 04:57 GMT

ಯಾರೋ ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾನೆಂದುಕೊಳ್ಳಿ. ಅವಾಚ್ಯ ಅಥವಾ ಅಶ್ಲೀಲ ಮಾತುಗಳನ್ನು ಕೇಳಿದಂತಹ ವ್ಯಕ್ತಿಯು ತನ್ನನ್ನು ಅಪಮಾನಿಸಿದ್ದಾನೆಂದು ಆ ಬೈದವನಿಗೆ ಅಷ್ಟೇ ಪ್ರಮಾಣದಲ್ಲಿ ಬೈಯಬಹುದು. ತನ್ನ ಮಾತಿನ ಮೂಲಕ ಅಥವಾ ಇತರರ ನೆರವಿನಿಂದ ದೈಹಿಕವಾಗಿ ದಾಳಿ ಮಾಡಬಹುದು. ಇದೊಂದು ರೀತಿಯ ಪ್ರತಿಕ್ರಿಯೆಯಾದರೆ, ಬೈಸಿಕೊಂಡವನು ತನಗೆ ಹೀಗೆ ಬೈದರು, ಅಪಮಾನಿಸಿದರು ಎಂದು ಇತರರ ಬಳಿ ತನ್ನ ದುಃಖವನ್ನು ತೋಡಿಕೊಂಡು, ಆ ಮೂಲಕ ಇತರರು ಬೈದವನಿಗೆ ಬೈದರೆ ಅಥವಾ ಜಗಳಕ್ಕೆ ಹೋದರೆ ತೃಪ್ತಿಯಾಗುವಂತಹ ಧೋರಣೆ ಹೊಂದಿರಬಹುದು ಅಥವಾ ಬೈದವನು ತನ್ನಲ್ಲಿರುವ ದೌರ್ಬಲ್ಯದಿಂದ ಹೀಗೆ ಬೈಯುತ್ತಿದ್ದಾನೆಂದೂ, ಆತನ ಸ್ವಭಾವವೇ ಹಾಗಿರುವುದರಿಂದ ಹಾಗೆ ವರ್ತಿಸುತ್ತಾನೆಂದೂ, ಅವನ ರೀತಿಯಲ್ಲಿ ತಾನು ವರ್ತಿಸುವ ಅಗತ್ಯವಿಲ್ಲವೆಂದೂ ಭಾವಿಸಿ ಜಗಳವು ಮುಂದುವರಿಯದೇ ಇರುವ ಹಾಗೆ ನೋಡಿಕೊಳ್ಳುವುದು ಕೂಡಾ ವರ್ತನಾ ಧೋರಣೆಯೇ. ವ್ಯಕ್ತಿಯ ಧೋರಣೆ ಅಥವಾ ನಿಲುವುಗಳು ಅವನ ಪ್ರತಿಕ್ರಿಯೆಯ ರೀತಿಯನ್ನು ನಿರ್ಧರಿಸುವುದು.

ಧೋರಣೆಯನ್ನು ವ್ಯಕ್ತಿ ತಾನೇ ರೂಢಿಸಿಕೊಳ್ಳಬಹುದು ಅಥವಾ ಸಾಮಾಜಿಕ ಹಾಗೂ ಕೌಟುಂಬಿಕ ವಾತಾವರಣದಿಂದಲೂ ಸಂಸ್ಕೃತೀಕರಣಕ್ಕೆ ಒಳಗಾಗಬಹುದು.

ಒಟ್ಟಾರೆ ಮನಸ್ಸಿಗೆ ಧೋರಣೆ ಎನ್ನುವುದು ಅಥವಾ ಸುನೀತಿ ಎಂಬುದು ತರಬೇತಿ ಅಥವಾ ರೂಢಿ. ಯಾವುದೇ ಒಂದು ವಿಷಯವನ್ನು ನೋಡುವ ಬಗೆ ಅಥವಾ ಅದು ಹೀಗೆ ಎಂದು ನಿರ್ಣಯಿಸುವ ಬಗೆ ರೂಢಿಯೇ. ಇದು ಜನರನ್ನು, ವಸ್ತುಗಳನ್ನು, ವಿಷಯಗಳನ್ನು, ನಿಯಮಗಳನ್ನು, ಸಂಗತಿಗಳನ್ನು, ರಾಜಕೀಯ ಅಥವಾ ಸಾಮಾಜಿಕ ವ್ಯವಸ್ಥೆಗಳನ್ನು; ಹೀಗೆ ಯಾವುದನ್ನಾದರೂ ತನ್ನ ನೋಡುವಿಕೆಯ ಬಗೆಯೊಳಗೆ ಅಡಕ ಮಾಡಿಕೊಳ್ಳುತ್ತದೆ. ಇದೊಂದು ತನ್ನದೇ ನೋಡುವಿಕೆಯ ಕೇಂದ್ರವಾಗಿದ್ದು ಇದರಿಂದಲೇ ಭಾವನೆಗಳನ್ನು, ಅಭಿಪ್ರಾಯಗಳನ್ನು, ಗ್ರಹಿಕೆಗಳನ್ನು ವಿಶ್ವಾಸಗಳನ್ನು, ನಿರೀಕ್ಷೆಗಳನ್ನು, ಮೌಲ್ಯಗಳನ್ನು ಮತ್ತು ಉದ್ದೇಶಗಳನ್ನು ಹೊಂದುವುದು.

ಈ ಎಲ್ಲಾ ಕ್ರಿಯೆ ಮತ್ತು ಪ್ರಕ್ರಿಯೆಗಳು ಸಕಾರಾತ್ಮಕವಾಗಿಯಾದರೂ ಇರಬಹುದು, ನಕಾರಾತ್ಮಕವಾಗಿಯಾದರೂ ಇರಬಹುದು. ಕೆಲವೊಮ್ಮೆ ಖಚಿತತೆ ಇಲ್ಲದ ಅಥವಾ ಸಮಚಿತ್ತದ ನಿಲುವಿನದ್ದೂ ಆಗಿರಬಹುದು.

ನಿಲುವು ಅಥವಾ ಧೋರಣೆಗಳಲ್ಲಿ ಸಾಮಾನ್ಯವಾಗಿ ಮೂರು ಬಗೆಯ ಘಟಕಗಳನ್ನು ಗುರುತಿಸಬಹುದು. ಯಾವುದೇ ಒಂದು ವಸ್ತು, ವಿಷಯ ಅಥವಾ ವ್ಯಕ್ತಿಗಳು; ವ್ಯಕ್ತಿಯಲ್ಲಿ ಯಾವ ಬಗೆಯ ಭಾವನೆಗಳನ್ನು ಉಂಟು ಮಾಡುವರು ಎಂಬುದು. ಯಾವ ಬಗೆಯ ಭಾವನೆಗಳನ್ನು ಹೇಗೆ ಉಂಟು ಮಾಡುತ್ತಾರೋ ಅವು ಪ್ರಭಾವಿಸುತ್ತವೆ ಎಂದು ಅರ್ಥ. ನಕಾರಾತ್ಮಕವಾಗಿ ಅಥವಾ ಸಕಾರಾತ್ಮಕವಾಗಿ ಪ್ರಭಾವಿಸುವಂತಹ ವಿಷಯಗಳು ಅವಾಗಿರುತ್ತವೆ. ಅದಕ್ಕೆ ಪ್ರಭಾವಿತ ಧೋರಣೆಗಳು ಎಂದು ಕರೆಯಬಹುದು.

ಹಾಗೆಯೇ ವ್ಯಕ್ತಿಯು ತನ್ನ ನಿಲುವಿನ ಅಥವಾ ಧೋರಣೆಯ ಪ್ರಕಾರ ಯಾವುದೇ ವಿಷಯಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುವನು ಅಥವಾ ಸ್ಪಂದಿಸುವನು ಎಂಬುದು ಇನ್ನೊಂದು ಅಂಗ. ವ್ಯಕ್ತಿಯು ತನ್ನ ಮಾತಿನಲ್ಲಿ, ನಡವಳಿಕೆಯಲ್ಲಿ ತನ್ನ ಪ್ರತಿಕ್ರಿಯೆಯನ್ನು ನೀಡುವುದನ್ನು ವರ್ತನಾ ಧೋರಣೆ ಅಥವಾ ವರ್ತನಾ ನೀತಿಯಾಗಿರುತ್ತದೆ.

ಮೂರನೆಯ ಘಟಕವೆಂದರೆ ಅರಿವಿನ ನಿಲುವು. ತನ್ನ ಅನುಭವ, ಅಧ್ಯಯನ, ಅವಲೋಕನವೇ ಮೊದಲಾದ ಚಟುವಟಿಕೆಗಳ ಮೂಲಕ ವ್ಯಕ್ತಿಯು ತನ್ನನ್ನು ತಾನು ಸುಶಿಕ್ಷಿತಗೊಳಿಸಿಕೊಂಡು ಅರಿವನ್ನು ಪಡೆದಿರುತ್ತಾರೆ. ಈ ಅರಿವಿನ ಧೋರಣೆ ಅಥವಾ ಕಾಗ್ನಿಟಿವ್ ಅಟಿಟ್ಯೂಡ್ ಮೂಲಕ ವಸ್ತು ಮತ್ತು ವಿಷಯಗಳನ್ನು ಪರಿಭಾವಿಸುತ್ತಾನೆ ಅಥವಾ ಗ್ರಹಿಸುತ್ತಾನೆ. ತನ್ನ ಅರಿವಿನ ಆಧಾರದಲ್ಲಿ ಗ್ರಹಿಸುವನು, ವಿಶ್ವಾಸಿಸುವನು ಮತ್ತು ಉಪಚರಿಸುವನು. ಹೀಗೆ ವ್ಯಕ್ತಿಯ ಧೋರಣೆಯು ಪ್ರಭಾವ, ವರ್ತನೆ ಮತ್ತು ಅರಿವಿನ ರೂಪದಲ್ಲಿ ಚಟುವಟಿಕೆಯಿಂದ ಇರುವುದು.

ಈ ಧೋರಣೆಗಳು ಕೆಲವೊಮ್ಮೆ ಸ್ಪಷ್ಟವಾಗಿರುತ್ತವೆ, ಮತ್ತೆ ಕೆಲವೊಮ್ಮೆ ಸೂಚ್ಯವಾಗಿರುತ್ತವೆ. ತಮ್ಮ ಧೋರಣೆಗಳಲ್ಲಿ ಸ್ಪಷ್ಟತೆಯನ್ನು ಹೊಂದಿರುವವರು ತಮ್ಮ ಭಾವಾಭಿವ್ಯಕ್ತಿಯ ಬಗ್ಗೆ, ವರ್ತನೆಗಳ ಬಗ್ಗೆ ಎಚ್ಚರಿಕೆಯನ್ನು ಹೊಂದಿರುತ್ತಾರೆ. ಯಾರಲ್ಲಿ ಅವರ ಪ್ರಯತ್ನವಿಲ್ಲದೆ ಧೋರಣೆಯು ಸೂಚಿತವಾಗಿರುತ್ತದೆಯೋ ಅವರಲ್ಲಿ ಅದು ಅವರ ಸುಪ್ತ ಚೇತನದಿಂದ ಅಂದರೆ ಒಳಮನಸ್ಸಿನ ಪದರದಿಂದ ಕ್ರಿಯಾಶೀಲವಾಗಿರುತ್ತದೆ.

ಧೋರಣೆಯನ್ನು ರೂಢಿಗೊಳಿಸುವುದಕ್ಕೆ ಸಮಾಜ ಸುಧಾರಕರು ಮತ್ತು ಅನುಭಾವಿಗಳು ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆಯಾ ಕಾಲಘಟ್ಟದ ಸಮಾಜದಲ್ಲಿ ಮನಸ್ಸಿನ ಏರಿಳಿತಗಳಿಗೆ ಕಾರಣವಾಗಿರುವಂತಹ ವಿಷಯಗಳನ್ನು ಗುರುತಿಸಿ ಜನರನ್ನು ಧಾರ್ಮಿಕಗೊಳಿಸುವ ಅಥವಾ ಸಂಸ್ಕೃತೀಕರಣಗೊಳಿಸುವ ಮೂಲಕ ಧೋರಣೆಗಳನ್ನು ಸ್ಥಾಪಿಸಲು ಶ್ರಮಿಸಿದ್ದಾರೆ.

ಒಬ್ಬರನ್ನು ದ್ವೇಷಿಸುವವನು ತಾನು ವಿಷ ತಿಂದು ಮತ್ತೊಬ್ಬರು ಸಾಯಲು ಬಯಸಿದಂತೆ ಎನ್ನುವ ಬುದ್ಧ, ತನ್ನನ್ನು ತಾನು ಪ್ರೀತಿಸಿಕೊಳ್ಳುವಂತೆ ನೆರೆಯವರನ್ನು ಪ್ರೀತಿಸು ಎನ್ನುವ ಯೇಸು, ನೆರೆ ಮನೆಗೆ ಬೆಳಕು ಮತ್ತು ಗಾಳಿಗೆ ತೊಂದರೆಯಾಗುವಂತೆ ತನ್ನ ಮನೆಯ ಕಟ್ಟಡವನ್ನು ಎತ್ತರಿಸಬಾರದು, ನೆರೆಯವರಲ್ಲಿ ನಾವು ಇರುವುದು ಭಯ ಹುಟ್ಟಿಸಬಾರದು, ನಮ್ಮ ಮನೆಯ ಸಾರಿನ ಪರಿಮಳ ಅವರಿಗೆ ಮುಟ್ಟುತ್ತದೆ ಎಂದರೆ ಮಾಡುವ ಸಾರನ್ನು ಹೆಚ್ಚಿಸು ಎನ್ನುವ ಪ್ರವಾದಿ ಮುಹಮ್ಮದ್, ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು ಎನ್ನುವ ಬಸವಣ್ಣ; ತಮ್ಮ ಸಹಜೀವಿಗಳಲ್ಲಿ ನೈತಿಕ ಧೋರಣೆಯನ್ನೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಧೋರಣೆಯನ್ನಾಗಿಸುವಂತೆ ಹಲವಾರು ನೀತಿ ನೇಮಗಳನ್ನು ರೂಢಿಸಲು ಯತ್ನಿಸಿದರು. ವ್ಯಕ್ತಿಗಳ ಮನೋಧೋರಣೆಯನ್ನು ಹಿತಕಾರಿಯಾಗಿಸಲು ಸಾಮೂಹಿಕ ಪ್ರಯತ್ನಗಳಾದವು.

ಆಫ್ರಿಕಾದ ಬುಡಕಟ್ಟಿನ ಸಂಸ್ಕೃತಿಯಾದ ಉಬುಂಟು ‘ನನ್ನ ಹಿತ ಎಲ್ಲರ ಹಿತದಲ್ಲಿದೆ’ ಎಂಬ ಸಹಕಾರ ತತ್ವ. ಅಂತಹ ಸಾಂಸ್ಕೃತಿಕ ಪರಿಸರದ ಸಮಾಜದಲ್ಲಿ ಬೆಳೆದ ಮಕ್ಕಳಿಗೆ ಸ್ಪರ್ಧೆ ಎಂಬುದೇ ಗೊತ್ತಿರಲಿಲ್ಲ. ರೇಸಲ್ಲಿ ಗೆದ್ದವರಿಗೆ ಹಣ್ಣು ಎಂದರೆ ಯಾವ ಮಕ್ಕಳೂ ನಾ ಮೊದಲು ಎಂದು ಓಡಲಿಲ್ಲ. ಎಲ್ಲರೂ ಒಟ್ಟಿಗೇ ಕೈ ಹಿಡಿದುಕೊಂಡು ಹಣ್ಣಿನ ಬುಟ್ಟಿಯ ಕಡೆಗೆ ನಡೆದಿದ್ದರು. ಉಬುಂಟು ಸಾಂಸ್ಕೃತೀಕರಣಕ್ಕೆ ಒಳಗಾಗಿದ್ದ ಮಕ್ಕಳ ಧೋರಣೆ ಸಹಾನುಭೂತಿ, ಸಹಬಾಳ್ವೆ, ಸಹಕಾರಗಳಲ್ಲೇ ಪ್ರಭಾವಿತವಾಗಿದ್ದವು, ಅದೇ ಅವರ ಅರಿವಾಗಿತ್ತು ಮತ್ತು ಅದನ್ನೇ ತಮ್ಮ ವರ್ತನೆಗಳಲ್ಲಿ ತೋರಿದ್ದರು.

ಒಟ್ಟಾರೆ ವ್ಯಕ್ತಿಯು ತನ್ನ ಸಾಮುದಾಯಿಕ ಬದುಕಿನಲ್ಲಿ ಸಹಬಾಳ್ವೆ ಮತ್ತು ಶಾಂತಿಯಿಂದ ಪರಸ್ಪರ ಸಹಕಾರದಲ್ಲಿ ಬದುಕಲು ಹಿಂದೆಂದಿನಿಂದಲೂ ನಾನಾ ಆಯಾಮಗಳಲ್ಲಿ ಪ್ರಯತ್ನಗಳು ಆಗುತ್ತಲೇ ಇವೆ. ಈಗ ಹೊಸ ಮನಶಾಸ್ತ್ರೀಯ ಯುಗದಲ್ಲಿ ವ್ಯಕ್ತಿತ್ವ ವಿಕಸನವೇ ಮೊದಲಾದ ಕಾರ್ಯಾಗಾರಗಳು ಅವವೇ ವಿಷಯ ಗಳನ್ನು ಮನೋವೈಜ್ಞಾನಿಕವಾಗಿ ಪ್ರಸ್ತುತ ಪಡಿಸಲು ಯತ್ನಿಸುತ್ತವೆ. ಸಮಾಜೋಧಾರ್ಮಿಕ ಸುಧಾರಕರೆಲ್ಲಾ ಮಾಡಿದ್ದು ಕಾಗ್ನಿಟಿವ್ ಅಪ್ರೋಚ್ ಅಥವಾ ಅರಿವಿನ ಸುನೀತಿಯ ಮಾರ್ಗವೇ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್

contributor

Similar News

ಗೀಳಿಗರು
ತನ್ನಾರೈಕೆ
ಭೂತದ ಗೀಳು
ಶಿಸ್ತು