ಆಲೋಚನೆಗಳ ನಿರಂತರತೆ

Update: 2024-06-23 05:19 GMT

ಸಮುದ್ರದಲ್ಲಾದರೂ ಒಂದರ ಹಿಂದೆ ಒಂದು ಅಲೆ ಬರಲು ಒಂದಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಮನಸ್ಸಿನಲ್ಲಿ ಒಂದಾದ ಮೇಲೊಂದು ಆಲೋಚನೆಗಳು ಅದಕ್ಕಿಂತ ತೀವ್ರಗತಿಯಲ್ಲಿ ಬರುತ್ತಿದ್ದರೆ, ಹೌದು, ಅವು ರೇಸಿಂಗ್ ಥಾಟ್ಸ್!

ಆಲೋಚಿಸಲು ಯಾವುದೋ ಒಂದು ನಿರ್ದಿಷ್ಟ ವಿಷಯ ವಸ್ತು ಇರಲೇಬೇಕೆಂದಿಲ್ಲ. ಆಲೋಚನೆಗಳು ತಮ್ಮ ಪಾಡಿಗೆ ತಾವು ಆರಾಮವಾಗಿ ವಿಷಯಾಂತರವಾಗುತ್ತಿರುತ್ತವೆ. ಅಷ್ಟೇ ಅಲ್ಲ, ಇಚ್ಛಿಸದೇ ಇದ್ದರೂ ರ್ಯಾಂಡಮ್ಮಾಗಿ ಯಾವುದ್ಯಾವುದೋ ಹಳೆಯ ನೆನಪುಗಳನ್ನು, ಸಂಗತಿಗಳನ್ನು ಒಂದಿಲ್ಲೊಂದನ್ನು ಹೆಕ್ಕಿ ತರುತ್ತಿರುತ್ತದೆ. ಆಲೋಚನೆಯ ಸಾಮಗ್ರಿಗಳಿಗೆ ಒಂದಕ್ಕೊಂದು ಸಂಬಂಧ ಇರಬಹುದು ಅಥವಾ ಇಲ್ಲದೇ ಇರಬಹುದು, ಅವೆಲ್ಲಾ ವಿಷಯವೇ ಅಲ್ಲ. ಆದರೆ ಇದರಿಂದಾಗಿ ಆರಾಮವಾಗಿರುವುದನ್ನು ಕಳೆದುಕೊಳ್ಳುವುದೆಂದರೆ, ಅಂತಹ ಮನಸ್ಸಿನ ವ್ಯಕ್ತಿ.

ಆ ವ್ಯಕ್ತಿಗೆ ಒಂದು ಕೆಲಸದ ಮೇಲೆ ಗಮನವಿಟ್ಟು ಕ್ರಿಯಾಶೀಲವಾಗಿರಲು ಆಗುವುದಿಲ್ಲ ಅಥವಾ ಸರಿಯಾಗಿ ನಿದ್ರೆ ಬರುವುದಿಲ್ಲ ಅಥವಾ ಯಾರೊಬ್ಬರ ಮಾತುಗಳನ್ನು ಗಮನವಿಟ್ಟು ಕೇಳಲಾಗುವುದಿಲ್ಲ ಅಥವಾ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ ಅಥವಾ ಕೆಲಸಗಳನ್ನು ಮಾಡುವಲ್ಲಿ ಆತಂಕ ಮತ್ತು ಕಳವಳ ಉಂಟಾಗುತ್ತಿರುತ್ತದೆ ಅಥವಾ ಯಾರಾದರೂ ನಿಧಾನವಾಗಿ ಮತ್ತು ಅಸ್ಪಷ್ಟವಾಗಿ ಏನಾದರೂ ಹೇಳಲು ಪ್ರಯತ್ನಿಸುತ್ತಿದ್ದರೆ ಅಸಹನೆ ಉಂಟಾಗುತ್ತಿರುತ್ತದೆ ಅಥವಾ ವಿಪರೀತವಾದ ಆಲೋಚನೆಗಳ ಪ್ರವಾಹ ಅಧಿಕವಾಗಿ ಒತ್ತಡ ಮತ್ತು ಖಿನ್ನತೆ ಉಂಟಾಗಬಹುದು; ಹೀಗೆ ಪರಿಣಾಮಗಳ ಪಟ್ಟಿ ಮಾತ್ರ ಉದ್ದಕ್ಕೆ ಬೆಳೆಯುತ್ತದೆ. ವ್ಯಕ್ತಿಯ ಕೆಲಸ ಮಾಡುವ ಸಾಮರ್ಥ್ಯದಲ್ಲಿ, ತನ್ನನ್ನು ತಾನು ಪ್ರಕಟಗೊಳಿಸಿಕೊಳ್ಳುವ ರೀತಿಯಲ್ಲಿ, ತನ್ನೊಂದಿಗೆ ತಾನು ಮತ್ತು ಮತ್ತೊಬ್ಬರಿಗೆ ಸಹಕರಿಸುವ ವಿಷಯಗಳಲ್ಲಿ, ಚಿಂತಿಸುವ ವಿಚಾರಗಳಲ್ಲಿ ಮತ್ತು ವರ್ತನೆಗಳಲ್ಲಿನ ಸ್ಪಷ್ಟತೆಗಳಲ್ಲಿ ತೊಡಕುಂಟಾಗುತ್ತವೆ. ಇವು ಇನ್ನೂ ತೀವ್ರವಾಗುವಲ್ಲಿ, ಅಂದರೆ ಸಮಸ್ಯೆಯು ಉತ್ಕರ್ಷ ಮಟ್ಟವನ್ನು ಮುಟ್ಟುವಂತಾದಾಗ ವ್ಯಕ್ತಿಯು ತಾನೇ ಧ್ವನಿಗಳನ್ನು ಕೇಳುವಂತಾಗುವುದು, ಅವರ ಮೆದುಳಿನಲ್ಲೇ ಗದ್ದಲವೊಂದು ಹಿನ್ನೆಲೆಯಾಗಿರುವಂತೆ ಭಾಸವಾಗುವಷ್ಟರ ಮಟ್ಟಿಗೆ ತೊಂದರೆಗೀಡಾಗಬಹುದು.

ಆಲೋಚನೆಗಳ ಇಂತಹ ನಿರಂತರತೆಯನ್ನು ಸರಿಯಾದಂತಹ ಮಾರ್ಗದರ್ಶನದಲ್ಲಿ ಸರಿಪಡಿಸಿಕೊಳ್ಳಬೇಕು. ಅವನ್ನು ತಹಬಂದಿಗೆ ತರುವಂತಹ ಕೆಲವು ತಂತ್ರಗಳನ್ನು ತಿಳಿದುಕೊಂಡು ತಮಗೆ ತಾವೇ ಸಹಾಯ ಮಾಡಿಕೊಳ್ಳಬೇಕು. ಮನಸ್ಸಿನ ಸಮಸ್ಯಾತ್ಮಕ ಆಲೋಚನೆಗಳನ್ನು ಅದೇ ಮನಸ್ಸಿನ ಗುಣಾತ್ಮಕ ಆಲೋಚನೆಗಳು ಸರಿಪಡಿಸಲು ಸಾಧ್ಯ ಎಂಬುದನ್ನು ಎಂದಿಗೂ ಮರೆಯದಿರೋಣ.

ಇಂತಹ ನಿರಂತರ ಆಲೋಚನೆಗಳಿಗೆ ಕಾರಣಗಳು ಹಲವಾರು ಮೂಲಗಳಿರುತ್ತವೆ. ದ್ವಂದ್ವಗೇಡಿತನ (ಬೈಪೋಲಾರ್ ಡಿಸಾರ್ಡರ್), ಆತಂಕಗೇಡಿತನ, ಖಿನ್ನತೆ, ಭೀತಿಗೇಡಿತನ (ಪ್ಯಾನಿಕ್ ಡಿಸಾರ್ಡರ್), ದೀರ್ಘಕಾಲದ ತೀವ್ರ ಒತ್ತಡಗಳು (ಕ್ರಾನಿಕ್ ಸ್ಟ್ರೆಸ್), ಅಮಲಿನ ಪದಾರ್ಥಗಳ ವ್ಯಸನ, ಕೆಲವು ಬಗೆಯ ಅನಾರೋಗ್ಯದ ಸ್ಥಿತಿಗಳು, ಮೆದುಳಿಗೆ ತೀವ್ರ ಪೆಟ್ಟು ಬಿದ್ದಿರುವಂತಹ ಪ್ರಸಂಗ, ಗೀಳು (obsessive-compulsive disorder/OCD), ಹಳತೊತ್ತಡ ಬಾಧೆ (post-traumatic stress disorder/PTSD), ಚುರುಕುಗೇಡಿತನ (attention deficit hyperactivity disorder/ADHD), ಮತ್ತು ದೀರ್ಘಕಾಲದಿಂದ ಪುನರಾವರ್ತಿತವಾಗಿ ಗಟ್ಟಿಯಾಗಿರುವ ‘ರೂಢಿ’.

ಎಷ್ಟೋ ಬಾರಿ ಆಲೋಚನೆಗಳ ನಿರಂತರತೆಯಿಂದ ತಪ್ಪಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಮೊರೆ ಹೋಗಿರುವ ಪ್ರಸಂಗಗಳೂ ಕೂಡಾ ಇವೆ.

ವಾಸ್ತವವಾಗಿ ಚಲನಶೀಲವೇ ಗುಣವಾಗಿರುವ ಮನಸ್ಸಿನ ಆಲೋಚನೆಗಳ ನಿರಂತರತೆಯನ್ನು ತಹಬಂದಿಗೆ ತರಲು ಹಲವಾರು ತಂತ್ರಗಳು ಇವೆ. ದೈಹಿಕ ಮತ್ತು ಉಸಿರಾಟದ ವ್ಯಾಯಾಮ, ನಿರಂತರತೆಯ ಚಲನೆಯನ್ನು ಪಲ್ಲಟ ಮಾಡುವಂತಹ ಬಹಳಷ್ಟು ತಂತ್ರಗಳು ಬಹಳ ಉಪಯೋಗಕ್ಕೆ ಬರುತ್ತವೆ.

ಮನಸ್ಸಿನ ವಿಷಯದಲ್ಲಿ ನಾವು ಬರೀ ವೈಜ್ಞಾನಿಕವಾಗಿ ಮಾತ್ರವಲ್ಲದೆ ತಾತ್ವಿಕವಾಗಿಯೂ ಕೂಡಾ ಎಚ್ಚೆತ್ತುಕೊಳ್ಳುವುದು ಬಹಳ ಅಗತ್ಯವಿರುತ್ತದೆ.

ಹಿಂದಿನ ಲೇಖನ ಗಳಲ್ಲಿ ವಿವರಿಸಿರುವಂತೆ ಧೋರಣೆಗಳನ್ನು ಹೊಂದುವುದರ ಅಥವಾ ನಿಲುವುಗಳನ್ನು ತಳೆಯುವುದರ ಬಗ್ಗೆ ಕೂಡಾ ಗಮನವನ್ನು ಹರಿಸಬೇಕು.

‘ಈಗ ಇಲ್ಲೇ’ (Here and Now) ಎಂಬ ತಾತ್ವಿಕ ಧೋರಣೆ. ಹಿಂದಿನದರ ಬಗ್ಗೆಯೂ ಅಲ್ಲ ಅಥವಾ ಮುಂದಿನದರ ಬಗ್ಗೆಯೂ ಅಲ್ಲ, ಇಲ್ಲಿ ಮತ್ತು ಈಗಿನ ವಿಷಯವನ್ನು ನಾನು ಗಮನಿಸುತ್ತೇನೆ ಎಂಬ ತಾತ್ವಿಕ ಧೋರಣೆ ಆಲೋಚನೆಗಳ ನಿರಂತರತೆಯನ್ನು ತುಂಡರಿಸಲು ಬಹಳಷ್ಟು ಸಹಾಯ ಮಾಡುತ್ತದೆ.

ಮನಸ್ಸು ತತ್ ತಕ್ಷಣವೇ ಕಾರ್ಯಪ್ರವೃತ್ತವಾಗಲು ಮುಂದಾದಾಗ ಅಥವಾ ಹಠಾತ್ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ‘ನಿಂತು ಚಲಿಸು’(hಚಿಟಣ ಚಿಟಿಜ ಠಿಡಿoಛಿeeಜ) ಸೂತ್ರವನ್ನು ಪಾಲಿಸಲು ಪೂರ್ವಭಾವಿಯಾಗಿ ದೀರ್ಘ ಉಸಿರಾಟವನ್ನು ನಿಧಾನವಾಗಿ ಮಾಡುವುದು ಒಳಿತು. ಐದು ಎಣಿಕೆಗಳವರೆಗೆ ಉಸಿರನ್ನು ಒಳಕ್ಕೆ ಎಳೆದುಕೊಳ್ಳುವುದು, ಐದು ಎಣಿಕೆಯವರೆಗೂ ಒಳಗಿಟ್ಟುಕೊಳ್ಳುವುದು, ನಂತರ ಐದು ಎಣಿಕೆಗಳವರೆಗೂ ನಿಧಾನವಾಗಿ ಉಸಿರನ್ನು ಬಿಡುವುದು. ಇದನ್ನು ವಿಶೇಷ ತರಬೇತಿ ಇಲ್ಲದೇ ಎಲ್ಲಿಯಾದರೂ, ಯಾವಾಗಲಾದರೂ ಮಾಡಬಹುದು.

ಯಾವುದಾದರೊಂದು ವಿಷಯದಲ್ಲಿ ಗೊಂದಲ ಅಥವಾ ಒತ್ತಡ ಉಂಟಾದಾಗ ಪರ್ಯಾಯ ವ್ಯವಸ್ಥೆ ಅಥವಾ ಅವಕಾಶಗಳ ಬಗ್ಗೆ ಆಲೋಚಿಸುವುದು. ಅಥವಾ ಬೇರೆಯವರು ಹೇಳಲು ಮುಂದಾದಾಗ ಅವರ ಮಾತನ್ನು ಸಂಪೂರ್ಣ ಕೇಳುತ್ತೇನೆ ಎಂದು ಪ್ರಜ್ಞಾಪೂರ್ವಕವಾಗಿ ಯತ್ನಿಸುವುದು. ಇದೊಂದು ತನ್ನ ತಾನೇ ಗಮನಿಸಿಕೊಂಡು ಮತ್ತು ತನ್ನನ್ನು ತಾನೇ ತಹಬಂದಿಗೆ ತರುವಂತಹ ತಾಂತ್ರಿಕ ಪ್ರಯತ್ನ.

ತನಗೆ ತಾನೇ ಸಕಾರಾತ್ಮಕ ಸಂದೇಶಗಳನ್ನು ಕೊಟ್ಟುಕೊಳ್ಳುವುದು, ಸಂಗೀತ ಕೇಳುವುದು, ಚಿತ್ರ ಬಿಡಿಸುವುದು, ರಂಗಚಟುವಟಿಕೆ, ಹಾಡುವ, ಕುಣಿಯುವ ಅಥವಾ ಇತರ ಪ್ರದರ್ಶಕ ಕಲೆಗಳಲ್ಲಿ ತೊಡಗಿಸಿಕೊಳ್ಳುವುದು ಇವೆಲ್ಲವೂ ಕಲಾಚಿಕಿತ್ಸೆಗಳೇ ಆಗಿವೆ.

ತೋಟಗಾರಿಕೆ, ಅಡುಗೆ ಮಾಡುವುದು, ಒಂದಷ್ಟು ದೂರ ವಾಕಿಂಗ್ ಹೋಗುವುದು, ವ್ಯಾಯಾಮ ಮಾಡುವುದು, ಸಂಗೀತ ಕೇಳುವುದು, ಸಿನೆಮಾ ನೋಡುವುದು; ಇವೆಲ್ಲವು ಕೂಡಾ ಆಲೋಚನೆಗಳ ನಿರಂತರತೆಯನ್ನು ತುಂಡರಿಸುವಂತಹ ತಂತ್ರಗಳೇ ಆಗಿರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು