ಶಿಸ್ತು

Update: 2024-07-14 08:59 GMT

ದೇವರು, ಧರ್ಮ, ಸಂಸ್ಕೃತಿ, ದೇಶ, ದಾಂಪತ್ಯ, ಲೈಂಗಿಕತೆ ಮತ್ತು ಪ್ರೇಮವೇ ಮೊದಲಾದ ವಿಷಯಗಳು ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಬಹಳಷ್ಟು ಅಪವ್ಯಾಖ್ಯಾನಕ್ಕೆ ಒಳಗಾಗಿವೆ. ಇವುಗಳನ್ನು ತಮ್ಮತಮ್ಮ ದೃಷ್ಟಿ, ಗ್ರಹಿಕೆ, ಧೋರಣೆ, ದೌರ್ಬಲ್ಯ, ಅನುಕೂಲ ಮತ್ತು ಹಿತಾಸಕ್ತಿಗಳಿಗೆ ಅನುಗುಣವಾಗಿ ವಿವರಿಸುತ್ತಾರೆ ಮತ್ತು ಅನುಸರಿಸುತ್ತಾರೆ. ಅವುಗಳ ಪಟ್ಟಿಯಲ್ಲಿ ಸೇರಿಸಬಹುದಾದ ಮತ್ತೊಂದು ವಿಷಯವೆಂದರೆ ಶಿಸ್ತು.

ಶಿಸ್ತಿನ ವ್ಯಾಪ್ತಿ ಬಹಳ ದೊಡ್ಡದು. ಸ್ವಭಾವತಃ ಅದು ಬಹಳ ಸೂಕ್ಷ್ಮ ಮತ್ತು ಪ್ರಭಾವಶಾಲಿಯಾದದ್ದು. ಶಿಸ್ತು ಎಂಬ ಅಂಶವು ಯಾಂತ್ರಿಕವೇ ಆದರೂ ಅದು ಆಂತರಿಕವಾದದ್ದು. ಅದು ನಕಾರಾತ್ಮಕ ಮತ್ತು ಸಕಾರಾತ್ಮಕವೆರಡೂ ರೀತಿಗಳಲ್ಲಿ ಪ್ರಭಾವ ಬೀರುವಂತವು. ಆದರೆ ಪ್ರಾರಂಭದಲ್ಲೇ ಹೇಳಿದಂತೆ ತಪ್ಪಾದ ಗ್ರಹಿಕೆ ಮತ್ತು ವಿವರಣೆಗೆ ಒಳಪಟ್ಟಿರುವುದರಿಂದ ಅದರ ಸಕಾರಣ ಮತ್ತು ಸಕಾರಾತ್ಮಕವಾದ ಪ್ರಭಾವಗಳಿಗಿಂತ ಹೆಚ್ಚಾಗಿ ನಕಾರಾತ್ಮಕವಾದಂತಹ ಪರಿಣಾಮವನ್ನೇ ನಾವು ವ್ಯಕ್ತಿಗಳ ವೈಯಕ್ತಿಕ ಬದುಕುಗಳಲ್ಲಿ ಮತ್ತು ಸಾಮೂಹಿಕ ಜೀವನಗಳಲ್ಲಿ ನೋಡುತ್ತಿರುವುದು.

ಶಿಸ್ತು ದೇಶದಿಂದ ದೇಶಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ, ಸಂಸ್ಕೃತಿಯಿಂದ ಸಂಸ್ಕೃತಿಗೆ ವ್ಯತ್ಯಾಸವಾಗುತ್ತದೆ. ಆದ್ದರಿಂದ ನಾನೀಗ ಏನನ್ನು ಹೇಳುತ್ತೇನೋ ಅದು ನಮ್ಮ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ರೂಢಿಗಳಿಗೆ ಅನುಗುಣವಾಗಿ ಎಂದೇ ತಿಳಿಯಬೇಕಿದೆ.

ದೇವರು ಮತ್ತು ಧರ್ಮಗಳು ವಿಪರೀತವಾದಿಗಳಿಂದ ವಿತಂಡ ವಾದಗಳಿಗೆ ಒಳಗಾಗಿ ವಿಚಿತ್ರವಾಗಿ ತಿರುಚಲ್ಪಟ್ಟಂತೆ ಶಿಸ್ತು ಕೂಡ ಸ್ವಾತಂತ್ರ್ಯವಾದಿಗಳು ಮತ್ತು ಶಿಸ್ತುವಾದಿಗಳಿಂದ ನಜ್ಜುಗುಜ್ಜಾಗಿದೆ.

ಸ್ವಾತಂತ್ರ್ಯವಾದಿಗಳು ಎಲ್ಲಾ ಬಗೆಯ ಶಿಸ್ತನ್ನೂ ಒಮ್ಮಿಂದೊಮ್ಮೆಲೇ ತಿರಸ್ಕರಿಸಿ ಎಲ್ಲವನ್ನೂ ಒತ್ತಡ ಎನ್ನುವ ಮಟ್ಟಕ್ಕೆ ವಿವರಿಸಲು ಯತ್ನಿಸಿದರೆ, ಶಿಸ್ತುವಾದಿಗಳು ಉಸಿರಾಡಲೂ ಕೂಡ ಬಿಡದಷ್ಟು ಬಿಗಿತನದಲ್ಲಿ ಒತ್ತಡವನ್ನುಂಟು ಮಾಡುತ್ತಾರೆ. ಎರಡೂ ಬಗೆಯ ವಿಪರೀತವಾದಿಗಳಿಂದ ಸಹಜವಾದ ಶಿಸ್ತು ನಾಶವಾಗಿ, ಶಿಸ್ತುಮುಕ್ತ ಮತ್ತು ಅತಿಶಿಸ್ತುಗಳಷ್ಟೇ ಪರ ವಿರೋಧಗಳ ವಾದಕ್ಕೆ ಇಳಿದು ಪರಸ್ಪರ ದೋಷಾರೋಪ ಮಾಡುತ್ತಾ ಚರ್ಚೆ ಮಾಡುತ್ತಿರುತ್ತವೆ.

ಶಿಸ್ತುಗಳಲ್ಲಿ ಸಹಜವಾದ ಶಿಸ್ತು, ಬಹಿರಂಗ ಶಿಸ್ತು, ಸ್ವಯಂ ಶಿಸ್ತು, ಆಂತರಿಕ ಶಿಸ್ತು ಎಂದು ಗುರುತಿಸಬಹುದು.

ಯಾವುದೇ ವ್ಯಕ್ತಿಯ ಕ್ರಿಯೆ, ಪ್ರತಿಕ್ರಿಯೆ, ಧೋರಣೆ, ವರ್ತನೆ, ಸಂವೇದನೆಗಳೆಲ್ಲವೂ ಅವನು ಮಾಡಿಕೊಂಡಿರುವ ರೂಢಿಯ ಮೇಲೆ ಎಂಬುದು ಸಾಮಾನ್ಯ ಜ್ಞಾನ. ನಿಶ್ಚಿತ ಗುರಿ ಮತ್ತು ನಿರೀಕ್ಷಿತ ಫಲವನ್ನು ಅಪೇಕ್ಷಿಸುವಾಗ ನಮಗೆ ಶಿಸ್ತು ಎಂಬವ ಪ್ರಭಾವಶಾಲಿ ತಾಂತ್ರಿಕ ಅಂಶ ನೆರವಾಗುತ್ತದೆ.

ಶಿಸ್ತಿನ ಬಹಳ ಮುಖ್ಯವಾದ ಉದ್ದೇಶವೇ ನಿಯಂತ್ರಣ.

ದೌರ್ಬಲ್ಯಗಳೋ, ಪ್ರಲೋಭನೆಗಳೋ, ಸೆಳೆತಗಳೋ, ಆವೇಶಗಳೋ, ಉದ್ರೇಕಗಳೋ; ಯಾವುದೇ ವ್ಯಕ್ತಿಯ ಮನಸ್ಸನ್ನು ಪ್ರಭಾವಿಸುವಂತಹ ಶಕ್ತಿಗಳನ್ನು ತಹಬಂದಿಗೆ ತರಲು ಈ ಶಿಸ್ತು ಎಂಬುದು ಬೇಕು. ಆದರೆ ಆ ನಿಯಂತ್ರಣವು ಹೇಗಿರಬೇಕೆಂಬುದೇ ಈಗ ವಿಚಾರದ ವಸ್ತು.

ವಾಹನ ಚಾಲಕನು ಸಿಗ್ನಲ್ ಜಂಪ್ ಮಾಡದೆ ನಿಂತಿರುವುದು ಅಲ್ಲಿ ಸಿಸಿ ಕ್ಯಾಮರಾ ಇದೆ ಎಂದು. ಅದರಲ್ಲಿ ತಾನು ರಸ್ತೆಯ ನಿಯಮವನ್ನು ಪಾಲಿಸಲಿಲ್ಲ ಎಂಬುದು ದಾಖಲಾಗಿ ತನಗೆ ದಂಡವನ್ನು ವಿಧಿಸಲಾಗುವುದು ಎಂಬ ಕಾರಣಕ್ಕೆ ನಿಂತಿದ್ದಾನೆ. ಚಾಲಕನ ಸ್ವಚ್ಛಂದ ವರ್ತನೆಯನ್ನು ನಿಯಂತ್ರಿಸಲು ಅಲ್ಲೊಂದು ಕ್ಯಾಮರಾ ಇದೆ. ಗಾಡಿಯ ಮೇಲೆ ಹೋಗುವ ಸವಾರನು ಹೆಲ್ಮೆಟ್ಟನ್ನು ಧರಿಸಿಯೇ ಹೋಗಬೇಕು. ಇಲ್ಲವಾದರೆ ಪೊಲೀಸ್ ಹಿಡಿಯುತ್ತಾರೆ, ದಂಡ ವಿಧಿಸುತ್ತಾರೆ ಎಂಬ ಭಯವೂ ಶಿಸ್ತು ಪಾಲನೆಗೆ ಕಾರಣವಾಗುತ್ತದೆ. ಶಾಲೆಯಲ್ಲಿ ಮಕ್ಕಳು ಗಲಾಟೆ ಮಾಡದೇ ಗಂಭೀರವಾಗಿ ಒಂದು ಕಡೆ ಕುಳಿತುಕೊಳ್ಳಲಿಲ್ಲವೆಂದರೆ ಶಿಕ್ಷಕಿ ಬೈಯುತ್ತಾರೆ ಅಥವಾ ಹೊಡೆಯುತ್ತಾರೆ ಅಥವಾ ಪ್ರಿನ್ಸಿಪಾಲರಿಗೆ ಹೇಳುತ್ತಾರೆ. ಕೋಪಗೊಂಡು ಯಾರಿಗಾದರೂ ಹೊಡೆದರೆ ಅಥವಾ ದುರಾಸೆಯಿಂದ ಯಾರಿಂದಲಾದರೂ ಏನಾದರೂ ಕಸಿದುಕೊಂಡರೆ, ಕದ್ದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಹಾಗಾಗಿ ವ್ಯಕ್ತಿ ತನ್ನನ್ನು ತಾನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಿರಂಗದ ಶಿಸ್ತು.

ಬಹಿರಂಗದ ಶಿಸ್ತು ಒಂದಲ್ಲ ಒಂದು ಸಮಯದಲ್ಲಿ ವಿಫಲವಾಗುವಂತವು. ಅದಕ್ಕೆ ಸದಾ ಕಣ್ಗಾವಲು ಬೇಕು. ಶಿಕ್ಷೆಯ ಭಯವಿರಬೇಕು. ಅಲ್ಲದೆ ಅದು ಅತ್ಯಧಿಕವಾದ ಶ್ರಮವನ್ನು ಬೇಡುತ್ತದೆ. ಯಾರನ್ನಾದರೂ ಒಂದೇ ಸಮನೆ ಅಧೀನದಲ್ಲಿ ಇಟ್ಟುಕೊಂಡು, ನಿಯಂತ್ರಣಕ್ಕೆ ಒಳಪಡಿಸಿಕೊಂಡು ಇರುವುದು ಅಸಾಧ್ಯದ ಮಾತು.

ಆದರೆ ಆಂತರಿಕ ಶಿಸ್ತು ಅಥವಾ ಸ್ವಯಂಶಿಸ್ತನ್ನು ರೂಢಿಸಿದರೆ ಅಥವಾ ರೂಢಿಸಿಕೊಂಡರೆ ಅದು ಸ್ವಯಿಚ್ಛೆಯಿಂದ ಆಗುತ್ತದೆ. ಅಲ್ಲಿ ಆಗ್ರಹವೋ ಅಥವಾ ಒತ್ತಡವೋ ಇರುವುದಿಲ್ಲ. ಆಂತರಿಕ ಶಿಸ್ತನ್ನು ರೂಢಿಸಿದ್ದೇ ಆದರೆ ಅದು ಸಹಜ ಶಿಸ್ತಾಗಿ ರೂಪುಗೊಳ್ಳುತ್ತದೆ. ಒತ್ತಡದ ಬಹಿರಂಗದ ಶಿಸ್ತಾಗಿದ್ದಲ್ಲಿ ಅದು ಯಾವಾಗಲೂ ಪ್ರತಿಭಟಿಸಲು ಹಾತೊರೆಯುತ್ತಿರುತ್ತದೆ. ಅದು ಯಾವಾಗಲಾದರೂ ದಂಗೆ ಏಳಬಹುದು.

ಸಮಾಜ, ಸಾಮಾಜಿಕ ವ್ಯವಸ್ಥೆಗಳು, ಆಡಳಿತ ಯಂತ್ರಗಳು ಎಲ್ಲವೂ ಹೊರಗಿನ ಶಿಸ್ತಿಗೇ ಒತ್ತುಕೊಟ್ಟು ವ್ಯಕ್ತಿಗಳನ್ನು ಗಲಭೆಕೋರರನ್ನಾಗಿ ಮಾಡುತ್ತದೆ. ವಾಹನ ಚಾಲಕನು ತನ್ನ ಅರಿವಿನಿಂದ ಸಿಗ್ನಲ್ ಜಂಪ್ ಮಾಡಬಾರದು, ಎಲ್ಲರ ಅನುಕೂಲಕ್ಕಾಗಿ ಅದು ಇರುವುದು, ಆ ನಿಯಮವನ್ನು ಸ್ವೀಕರಿಸಬೇಕು ಮತ್ತು ಅನುಸರಿಸಬೇಕು ಎನ್ನುವುದಾದರೆ ಅದು ಆಂತರಿಕ ಶಿಸ್ತಿನ ಪ್ರತಿಫಲವಾಗಿರುತ್ತದೆ. ಅನಗತ್ಯವಾಗಿ ನಾವು ಗಲಾಟೆ ಮಾಡಬಾರದು ಮತ್ತು ಕಲಿಕೆಯ ವಿಷಯದಲ್ಲಿ ನಾವು ಅಗತ್ಯವಿರುವ ಶಿಸ್ತನ್ನು ಪಾಲಿಸಬೇಕು ಎನ್ನುವಂತಹ ಸ್ವಯಂಶಿಸ್ತಿಗೆ ಒಳಗಾಗುವುದರಲ್ಲಿ ಮಕ್ಕಳಿಗೆ ಉತ್ತಮ ಮತ್ತು ಸರಾಗವಾದಂತಹ ವರ್ತಮಾನದ ಮತ್ತು ಭವಿಷ್ಯದ ಬದುಕು ಇರುತ್ತದೆ.

ಒಟ್ಟಾರೆ ಬಹಿರಂಗದ ಶಿಸ್ತಿನ ಹೇರಿಕೆ ದಂಗೆಕೋರರನ್ನೂ, ಸ್ವಯಂಶಿಸ್ತು ಅಥವಾ ಆಂತರಿಕ ಶಿಸ್ತು ವ್ಯಕ್ತಿಗಳಲ್ಲಿ ಸಹಜ ಶಿಸ್ತಾಗಲು ಅದು ವ್ಯಕ್ತಿಯನ್ನು ಸಂಯಮಿ ಮತ್ತು ಸಹಕಾರಿಯನ್ನಾಗಿ ಕುಟುಂಬ ಮತ್ತು ಸಮಾಜದಲ್ಲಿ ರೂಪಿಸುತ್ತದೆ ಎಂಬುದನ್ನಷ್ಟನ್ನೇ ಹೇಳುವುದು ಈ ಲೇಖನದ ಉದ್ದೇಶ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು