ಶಿಸ್ತಿನ ಬಯಕೆ

Update: 2024-07-21 05:03 GMT

ಹೊರಗಿನಿಂದ ಯಾರೋ ಒಬ್ಬರು ತನ್ನನ್ನು ನಿಯಂತ್ರಿಸುತ್ತಾರೆ ಎಂದರೆ ವ್ಯಕ್ತಿಯ ಮನಸ್ಸು ಕನಲುತ್ತದೆ. ತನ್ನ ತಪ್ಪುಗಳನ್ನು ಹೇಳಿದಾಗ ದೂಷಿಸುತ್ತಿದ್ದಾರೆ ಎಂದು ಭಾವಿಸುತ್ತದೆ. ತಿದ್ದಲು ಬಂದಾಗ ತಮ್ಮ ಬಗ್ಗೆ ಕೀಳರಿಮೆಯನ್ನೂ ಮತ್ತು ತಿದ್ದಲು ಬಂದವರ ಬಗ್ಗೆ ಮೇಲರಿಮೆಯನ್ನೂ ಗಮನಿಸುವಂತಾಗುತ್ತದೆ.

ವಾಸ್ತವವಾಗಿ ಬೋಧಿಸಲು ಬರುವವರು ಒಂದು ಹಂತದ ಅಧಿಕಾರದಿಂದಲೇ ವರ್ತಿಸುತ್ತಾರೆ. ತಾವು ನಿನಗಿಂತ ಮೇಲು ಮತ್ತು ನಿನ್ನನ್ನು ‘ನಾನು’ ತಿದ್ದುತ್ತಿದ್ದೇನೆ ಎಂಬ ಅಹಂಭಾವವಿರುತ್ತದೆ. ಎಷ್ಟೋ ಜನರು ವರ್ತಿಸುವುದೂ ಕೂಡಾ ಹಾಗೆಯೇ ಇರುತ್ತದೆ. ತಿದ್ದುವಿಕೆಯಲ್ಲಿ, ಇತರರನ್ನು ಶಿಸ್ತಿಗೆ ಒಳಪಡಿಸುವುದರಲ್ಲಿ ತಮ್ಮ ಅಧಿಕಾರ, ಅಹಂಕಾರ ಮತ್ತು ಅತಿರೇಕ ವರ್ತನೆಗಳನ್ನು ತೋರುವುದರಿಂದ ತಿದ್ದುವಿಕೆಗೆ ಒಳಪಡುವ ವ್ಯಕ್ತಿಗಳಿಗೆ ತಮ್ಮನ್ನು ಅಧೀನದಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ಭಾಸವಾಗುತ್ತದೆ. ಜೊತೆಗೆ ತಮ್ಮನ್ನು ಖಂಡಿಸುತ್ತಿದ್ದಾರೆ, ಅಪಮಾನಿಸುತ್ತಿದ್ದಾರೆ, ತನ್ನನ್ನು ಕುಬ್ಜಗೊಳಿಸಿ ಕಾಣುತ್ತಿದ್ದಾರೆ ಎಂದೇ ಅನಿಸುತ್ತದೆ. ಹಾಗಾಗಿಯೇ ಅವರು ತಮ್ಮ ತಪ್ಪುಗಳನ್ನು ಅರಿಯುವುದಕ್ಕಿಂತ ತಮ್ಮನ್ನು ತುಚ್ಛೀಕರಿಸುತ್ತಿದ್ದಾರೆ ಎಂದೇ ಭಾವಿಸುವುದು. ತಮ್ಮ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುತ್ತಿದ್ದಾರೆ ಎಂದೇ ವ್ಯಾಖ್ಯಾನಿಸುವುದು.

ಮನೆಯಲ್ಲಿ ತಂದೆ ತಾಯಿಯರಾಗಲಿ, ಶಾಲೆಯಲ್ಲಿ ಶಿಕ್ಷಕರಾಗಲಿ, ಸಮಾಜದ ಹಿರಿಯರಾಗಲಿ, ಕೆಲಸ ಮಾಡುವ ಕಡೆಗಳಲ್ಲಿ ಮೇಲಧಿಕಾರಿಗಳಾಗಲಿ; ತಮ್ಮ ಅಧೀನದಲ್ಲಿರುವ ಮಕ್ಕಳನ್ನು ಅಥವಾ ಸಹೋದ್ಯೋಗಿಗಳ ಜೊತೆಗೆ ನಡೆದುಕೊಳ್ಳುವಾಗ ‘ನೀನು ನನಗಿಂತ ಕೆಳಗೆ, ನಾನು ನಿನಗಿಂತ ಮೇಲೆ ಮತ್ತು ಅಧಿಕಾರವನ್ನು ಹೊಂದಿದ್ದೇನೆ’ ಎಂಬ ಸಂಕೇತಗಳನ್ನೇ ಬಹುಪಾಲು ಜನ ತಮ್ಮ ನಡೆ ಮತ್ತು ನುಡಿಗಳಲ್ಲಿ ರವಾನೆ ಮಾಡುವುದು.

ಕೌಟುಂಬಿಕ, ಔದ್ಯೋಗಿಕ, ಆರ್ಥಿಕವೇ ಮೊದಲಾದ ಅನಿವಾರ್ಯ ಕಾರಣಗಳಿಂದ ತಮಗಾಗುತ್ತಿರುವ ಶಿಸ್ತಿನ ಒತ್ತಡವನ್ನು ಸಹಿಸಿಕೊಳ್ಳುವರೇ ಹೊರತು ಶಿಸ್ತಿನ ಮೌಲ್ಯವನ್ನು ಅವರಿಗೆ ಗ್ರಹಿಸಲು ಸಾಧ್ಯವೇ ಆಗುವುದಿಲ್ಲ. ಏಕೆಂದರೆ ಮನಸ್ಸು ಪ್ರಭಾವಕ್ಕೆ ಒಳಗಾಗುವುದು ಭಾವನೆಗಳಿಂದಲೇ ಹೊರತು ವಿಚಾರಗಳಿಂದ ಅಲ್ಲ. ಹೀಗಾಗಿಯೇ ನೋಯುವ, ಅಪಮಾನಕ್ಕೊಳಗಾದಂತೆ, ಖಂಡನೆ, ನಿಂದನೆಗಳಿಗೆ ಒಳಗಾದಂತೆ ಭಾವಿಸುವ ಜೀವಗಳು ಬಹಿರಂಗ ಶಿಸ್ತಿನ ಒತ್ತಡದಲ್ಲಿ ಅಧೀನಕ್ಕೊಳಗಾದಂತೆ ವರ್ತಿಸುತ್ತಾರೆ. ಆದರೆ ಅವರಲ್ಲಿ ಅದೇ ಆಂತರಿಕ ಶಿಸ್ತಿನ ಪರಿಚಯ ಆಗುವುದೇ ಇಲ್ಲ. ಅವರಿಗೆ ಅಂತಹ ಶಿಸ್ತಿನ ಪ್ರಸ್ತಾಪ ಬಂದಾಗೆಲ್ಲಾ ತಮ್ಮ ನೋವು ಅಥವಾ ಅವಮಾನಗಳ ಸಂಗತಿಗಳೇ ಮುನ್ನೆಲೆಗೆ ಬರುತ್ತಾ ಶಿಸ್ತಿನ ಮಹತ್ವವನ್ನು ವ್ಯಕ್ತಿಗಳು ಗ್ರಹಿಸುವುದೇ ಇಲ್ಲ.

ಮಕ್ಕಳಾಗಲಿ, ವಿದ್ಯಾರ್ಥಿಗಳಾಗಲಿ, ಸಹೋದ್ಯೋಗಿಗಳಾಗಲಿ ಅಥವಾ ತಮ್ಮ ಜೊತೆಯವರಾರೇ ಆಗಲಿ; ಅವರಲ್ಲಿ ಶಿಸ್ತನ್ನು ಮೂಡಿಸಬೇಕೆಂದರೆ ಅವರಲ್ಲಿ ಆ ಶಿಸ್ತಿನ ಬಗ್ಗೆ ಆಕರ್ಷಣೆ ಉಂಟಾಗಬೇಕು. ಆ ಶಿಸ್ತಿನ ಅಗತ್ಯ ಮತ್ತು ಲಾಭದ ಅರಿವು ಉಂಟಾಗುವಂತಹ ಮಾದರಿಗಳನ್ನು ಅವರಿಗೆ ಪ್ರದರ್ಶಿಸಬೇಕು. ಆ ಶಿಸ್ತಿನ ಕೊರತೆಯನ್ನು ಅವರೇ ತಮ್ಮಲ್ಲಿ ಕಂಡುಕೊಳ್ಳುವ ಹಾಗಾದಲ್ಲಿ, ಅವರು ಆ ಶಿಸ್ತನ್ನು ತಮ್ಮದಾಗಿಸಿಕೊಳ್ಳಲು ಬಯಸುವರು. ಅಂತಹ ಪ್ರೇರಣೆ ಅವರಲ್ಲಿ ಉಂಟಾದಲ್ಲಿ, ಅವರು ಆ ಶಿಸ್ತನ್ನು ಅಳವಡಿಸಿಕೊಳ್ಳಲು ಸಹಕಾರ ಕೊಡುವವರಂತೆ ತಮ್ಮ ಜೊತೆಗಾರರು ಕಂಡಲ್ಲಿ ವ್ಯಕ್ತಿಗಳು ಶಿಸ್ತನ್ನು ಆಲಂಗಿಸುವರು. ಹಾಗಾದರೆ ಮಾತ್ರವೇ ಆಂತರಿಕ ಶಿಸ್ತು ಮೂಡಲು ಸಾಧ್ಯ. ಸ್ವಯಂಶಿಸ್ತು ಮೂಡಿದ್ದಲ್ಲಿ ಆಯಾಸದಲ್ಲೂ ಆನಂದವಿರುವುದು.

ಆದರೆ ಬಹುತೇಕ ಹಿರಿಯರು ಮತ್ತು ಮಾರ್ಗದರ್ಶಿಗಳು ಮಾಡುವ ಮೊದಲನೆಯ ತಪ್ಪೆಂದರೆ ವ್ಯಕ್ತಿಗಳನ್ನು ಖಂಡಿಸುವುದು, ತಾವು ನಿಮಗಿಂತ ಮೇಲು ಎಂಬ ಭಾವವನ್ನು ಪ್ರದರ್ಶಿಸುವುದು ಮತ್ತು ಮಾರುದ್ದದ ಬೋಧನೆಗಳನ್ನು ಕೊಡುವುದು. ಎಷ್ಟೋ ಬಾರಿ ತಮ್ಮ ಜೀವನದ್ದೇ ನಿದರ್ಶನಗಳನ್ನು ಕೊಟ್ಟುಕೊಳ್ಳುವ ಭರದಲ್ಲಿ ಆತ್ಮರತಿಯು ಅತಿಯಾಗಿ ಕೇಳುವವರಿಗೆ ಈ ತುತ್ತೂರಿ ಸಾಕೆನೆಸಿ ತಮ್ಮ ಕಿವಿಗಳನ್ನು ಆಂತರಿಕವಾಗಿ ಮುಚ್ಚಿಕೊಂಡು ಬಿಡುತ್ತಾರೆ.

ಶಿಸ್ತನ್ನು ಒಪ್ಪಿಕೊಳ್ಳು ವಂತಹ ವಾತಾವರಣ ಉಂಟಾಗಬೇಕು. ಅದಕ್ಕೆ ಪೂರಕವಾದ ಮನಸ್ಥಿತಿ ಉಂಟಾದರೆ ಪರಿಸ್ಥಿತಿಗೆ ಅನುಗುಣವಾಗಿ ಶಿಸ್ತನ್ನು ಗುರುತಿಸಲು ಮತ್ತು ಅನುಸರಿಸಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ. ಶಿಸ್ತನ್ನು ಹೇರುವುದೂ ಅಲ್ಲ ಮತ್ತು ಶಿಸ್ತು ಎಂಬುದು ವ್ಯಕ್ತಿಯ ವಿಕಾಸ ಹಾಗೂ ಉತ್ತಮ ಜೀವನ ನಿರ್ವಹಣೆಗೇ ಹೊರತು ವ್ಯಕ್ತಿಯೊಬ್ಬನು ಮತ್ತೊಬ್ಬ ವ್ಯಕ್ತಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡು ಆಳಲಂತೂ ಖಂಡಿತ ಅಲ್ಲ. ಶಿಸ್ತಿಗೆ ಒಳಪಡಬೇಕಾದವರು ಶಿಸ್ತಿಗೆ ಒಳಪಡಿಸುವ ವ್ಯಕ್ತಿಗಳನ್ನು ದ್ವೇಷಿಸುವಂತಾದರೆ ಅಥವಾ ಅವರಿಂದ ಬಿಡುಗಡೆ ಪಡೆಯಲು ಬಯಸುತ್ತಿದ್ದರೆ ಆ ನಿರ್ದಿಷ್ಟ ಶಿಸ್ತು ಅವರಿಗೆ ದಕ್ಕದೇ ಹೋಗಿಬಿಡುತ್ತದೆ.

ಬಹಳಷ್ಟು ಜನರ ಮನಸ್ಥಿತಿಯೇ ಶಿಸ್ತು ಎಂದರೆ ಕಠೋರವಾಗಿರುವುದು. ಆದರೆ ಶಿಸ್ತು ಎಂದರೆ ಉದ್ದೇಶಿತ ಗಮನಕ್ಕೆ ಬದ್ಧವಾಗಿರುವುದು. ಈ ಬದ್ಧತೆ ಎಂಬುದು ಸ್ವಯಂ ಪ್ರೇರಣೆಯಿಂದಾದರೆ ಒಳಿತು ಅಥವಾ ಮತ್ತೊಬ್ಬರಿಂದ ಪರಿಚಿತವಾಗಬೇಕು. ಆದರೆ ಈ ಪರಿಚಯ ಎನ್ನುವುದು ಆಕರ್ಷಣೀಯವಾಗಿಯೂ, ಲಾಭದಾಯಕವಾಗಿಯೂ ಇರಬೇಕಿದೆ. ತನಗೆ ಸಂತೋಷ ಕೊಡುವಂತಹ ಮತ್ತು ಯಾವುದೋ ಆಸೆಯನ್ನು ಪೂರೈಸುವಂತಹ ಭರವಸೆ ಇಲ್ಲದೇ ಹೋದರೆ ಆ ಶಿಸ್ತಿಗೆ ಏಕಾದರೂ ಒಳಪಡಬೇಕು? ಬಯಕೆ ಪೂರೈಕೆಯ ಭರವಸೆ ಇದ್ದಲ್ಲಿ ಮಾತ್ರವೇ ಶಿಸ್ತಿನ ಅಗತ್ಯವೂ ತೋರುವುದು.

ಯಾರೋ ಒಬ್ಬರಿಗೊಸ್ಕರ ಅಥವಾ ಯಾವುದೋ ವ್ಯವಸ್ಥೆಯಲ್ಲಿ ಒಳಪಟ್ಟಿರುವ ಕಾರಣಕ್ಕೆ ಶಿಸ್ತನ್ನು ಹೇರಲು ಹೋದರೆ ವ್ಯಕ್ತಿಗಳ ಖಾಸಗಿ ಬಂಡಾಯಗಳು ಭುಗಿಲೇಳುತ್ತಲೇ ಇರುವವು. ವ್ಯಕ್ತಿಯೊಬ್ಬನು ತನ್ನ ವ್ಯಕ್ತಿತ್ವದ ಕಾರಣದಿಂದ ತನ್ನ ಜೀವನವನ್ನು ಉತ್ತಮವಾಗಿಸಿಕೊಂಡು ಸಂತೋಷದಿಂದಲೂ ಮತ್ತು ಸರಾಗದಿಂದಲೂ ಇರುವಂತಹ ಬಯಕೆಯನ್ನು ಪೂರೈಸಿಕೊಳ್ಳುವ ಸಾಧನವೇ ಈ ಶಿಸ್ತು ಎಂಬುದು ಅರಿವಿಗೂ ಎಟುಕಬೇಕು ಮತ್ತು ಆನಂದಕ್ಕೂ ಕಾರಣವಾಗಬೇಕು. ಆಗಲೇ ವ್ಯಕ್ತಿ ಸ್ವಯಂಶಿಸ್ತಿಗೆ ಒಳಗಾಗುವ ಪ್ರೇರಣೆಯನ್ನು ಹೊಂದುವುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು