ಮನದರಿವು

Update: 2024-10-13 08:56 GMT

ವ್ಯಕ್ತಿಯೊಬ್ಬರ ಜೊತೆ ನಾವು ಮಾತಾಡುತ್ತಿದ್ದೇವೆ, ವ್ಯವಹರಿಸುತ್ತಿದ್ದೇವೆ ಅಥವಾ ಆ ವ್ಯಕ್ತಿಯ ಕ್ರಿಯೆಗೆ ಪ್ರತಿಕ್ರಿಯಿಸುತ್ತಿದ್ದೇವೆ ಎಂದರೆ; ನಮ್ಮ ವ್ಯವಹಾರ ನಡೆಯುತ್ತಿರುವುದು ಅವರ ಮನಸ್ಸಿನೊಂದಿಗೆ ಎಂದೇ ಅರ್ಥ.

ವ್ಯಕ್ತಿಯ ಹೆಸರಿಡಿದು ಕರೆದರೂ ಪ್ರತಿಕ್ರಿಯಿಸುವುದು ಆ ವ್ಯಕ್ತಿಯ ಮನಸ್ಸೇ! ವ್ಯಕ್ತಿಯ ಬಗ್ಗೆ ಏನೇ ಹೇಳಿದರೂ, ಹೇಗೇ ಮಾತಾಡಿದರೂ, ಹೇಗೇ ವರ್ತಿಸಿದರೂ ಅದನ್ನೆಲ್ಲಾ ಗ್ರಹಿಸುವುದು, ಪ್ರಭಾವಕ್ಕೊಳಗಾಗುವುದು, ಭಾವಿಸುವುದು ಮನಸ್ಸೇ ಆಗಿರುತ್ತದೆ. ಪರಿಣಾಮ ಬೀರುವುದು ಮನಸ್ಸಿನ ಮೇಲೆಯೇ ಆಗಿರುತ್ತದೆ.

ನಾವು ವ್ಯವಹರಿಸುವುದು ಹೆಸರು, ಲಿಂಗ, ವಯಸ್ಸು ಇವೇ ಮೊದಲಾದ ವ್ಯಕ್ತಿಯ ಕಾಣುವ ವಿಷಯಗಳ ಜೊತೆಗಲ್ಲ, ಆದರೆ ಆ ವ್ಯಕ್ತಿಯ ಮನಸ್ಸಿನೊಂದಿಗೆ ಎಂಬ ಎಚ್ಚರಿಕೆಯನ್ನು ಹೊಂದಿರುವುದು ಮತ್ತು ಆ ಎಚ್ಚರಿಕೆಯಿಂದಲೇ ನಮ್ಮ ಮಾತು, ವರ್ತನೆ, ಪ್ರತಿಕ್ರಿಯೆಗಳನ್ನೆಲ್ಲಾ ಪ್ರದರ್ಶಿಸುವುದನ್ನೇ ಮನದರಿವು ಎಂದು ಕರೆಯುವುದು.

ಯಾವುದೇ ವ್ಯಕ್ತಿಯೊಂದಿಗೆ, ಅದರಲ್ಲೂ ಮಕ್ಕಳೊಂದಿಗೆ ನಮ್ಮ ನಡವಳಿಕೆ ಎಚ್ಚರಿಕೆಯಿಂದ ಕೂಡಿರಬೇಕು. ನಮ್ಮ ಒಂದೊಂದು ಮಾತು, ನಡವಳಿಕೆ, ಧ್ವನಿಯ ಏರಿಳಿತ; ಹೀಗೆ ಪ್ರತಿಯೊಂದು ಅಭಿವ್ಯಕ್ತಿಯೂ ಕೂಡಾ ಅವರಲ್ಲಿ ಭಾವನಾತ್ಮಕವಾದ, ಮಾನಸಿಕವಾದ ಮತ್ತು ವೈಚಾರಿಕವಾದ ಪ್ರಭಾವಗಳನ್ನು ಉಂಟುಮಾಡುತ್ತಿರುತ್ತವೆ. ನಕಾರಾತ್ಮಕ ಅಥವಾ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಹಾಗೆಯೇ ಮಾನಸಿಕವಾಗಿ ಸೂಕ್ಷ್ಮವಾಗಿರುವ ಮತ್ತು ಬಾಧೆಗೊಳಗಾಗಿರುವವರ ಬಗ್ಗೆಯೂ ಇದೇ ರೀತಿ ಎಚ್ಚರಿಕೆಯನ್ನು ವಹಿಸಬೇಕು.

ಮನದರಿವಿನ ಮೊದಲನೆಯ ಅಭ್ಯಾಸವೇ ನಾವು ವ್ಯವಹರಿಸುವ ವ್ಯಕ್ತಿಯ ಜೊತೆಗೆ ಸಹಾನುಭೂತಿಯಿಂದ ವರ್ತಿಸುವುದು. ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಅವರು ಏನನ್ನು ಹೇಳುತ್ತಿದ್ದಾರೆ ಎಂದು ಕ್ರಿಯಾಶೀಲವಾಗಿ ಆಲಿಸುವುದು. ಹಾಗೆ ಗಮನ ಕೊಟ್ಟು ಆಲಿಸುತ್ತಾ ಯಾವ ನೆಲೆಗಟ್ಟಿನಿಂದ ಹೇಳುತ್ತಿದ್ದಾರೆಂದು ಅರ್ಥ ಮಾಡಿಕೊಳ್ಳಲು ಯತ್ನಿಸುವುದು.

ಅದರ ನಂತರದ ಎರಡನೆಯ ಅಭ್ಯಾಸವೆಂದರೆ, ಮನಪೂರ್ತಿಯಾಗಿ ಕೇಳಿದ ನಂತರ ಯಾವ ಪದಗಳನ್ನು ಬಳಸಬೇಕು, ಎಂತಹ ವಾಕ್ಯ ಸಂಯೋಜಿಸಬೇಕು ಎಂದು ಗಮನಿಸಿಕೊಳ್ಳುವುದಲ್ಲದೆ ಧ್ವನಿಯ ಏರಿಳಿತದ ಬಗ್ಗೆಯೂ ಎಚ್ಚರಿಕೆಯನ್ನು ಹೊಂದಿರಬೇಕು. ಇದು ತನ್ನೆದುರಿಗಿರುವ ವ್ಯಕ್ತಿಯ ಭಾವನೆಯ ಬಗ್ಗೆ ಕಳಕಳಿ ಮತ್ತು ಗೌರವವನ್ನು ಹೊಂದಿರುವುದನ್ನು ಸೂಚಿಸುವುದು.

ವ್ಯಕ್ತಿ ಮತ್ತು ವ್ಯಕ್ತಿಗಳ ನಡುವಿನ ಸಲುಗೆ, ಒಡನಾಟವೇ ಮೊದಲಾದ ಆಪ್ತತೆಗಳ ಆಧಾರದಲ್ಲಿ ಅಂತರವನ್ನೂ ಮತ್ತು ವ್ಯಕ್ತಿಗತವಾದ ಎಲ್ಲೆಯನ್ನೂ ಗುರುತಿಸಿಕೊಳ್ಳಬೇಕು. ನಮ್ಮ ಕಡೆಯಿಂದ ಎಂದಿಗೂ ಅತಿಕ್ರಮಣ ಆಗಕೂಡದು ಎಂಬ ಜಾಗೃತಿ ಸದಾ ಇರಬೇಕು. ಜೊತೆಗೆ ತಮ್ಮಲ್ಲಿ ಉಂಟಾಗುವ ಭಾವನೆಗಳ ಬಗ್ಗೆ ಮತ್ತು ಯಾವ ವಿಷಯಗಳಿಗೆ ತಾವು ಪ್ರಚೋದಿತರಾಗುತ್ತೇವೆ ಅಥವಾ ಕೆರಳುತ್ತೇವೆ ಎಂಬುದನ್ನು ಗುರುತಿಸಿಕೊಳ್ಳಬೇಕು.

ನೇರವಾಗಿ ಹೇಳುವುದಾದರೆ ಮನಶಾಸ್ತ್ರದ ಬಗ್ಗೆ ಸಾಮಾನ್ಯ ತಿಳುವಳಿಕೆಯಂತೂ ಖಂಡಿತ ಹೊಂದಿರಬೇಕು. ಮಾನಸಿಕ ಆರೋಗ್ಯ, ಭಾವನೆಗಳ ಒತ್ತಡ ಮತ್ತು ಸಾಮಾನ್ಯ ದೋಷಗಳ ಬಗ್ಗೆ ಅರಿವಿರಬೇಕು.

ಯಾರದೇ ವ್ಯಕ್ತಿಯೊಂದಿಗೆ ವರ್ತಿಸುವಾಗ ಮಾದರಿ ವರ್ತನೆಗಳನ್ನು ತೋರುವಂತಹ ವ್ಯಕ್ತಿ ತಾನಾಗಿರಬೇಕು ಎಂಬ ಎಚ್ಚರಿಕೆಯೇ ಮನದರಿವಿನ ಕನ್ನಡಿ.

ತಿಳುವಳಿಕೆಯ ಮನಸ್ಸು ಎಂಬುವುದಕ್ಕೆ ನಿದರ್ಶನವಾಗಿ ಕೆಲವು ಸೂಕ್ಷ್ಮತೆಗಳನ್ನು ಗುರುತಿಸಬಹುದು.

ಮನದರಿವಿನ ತಿಳುವಳಿಕಸ್ತರು ನುಡಿಯುವಾಗ ಬಹು ಎಚ್ಚರಿಕೆಯಿಂದ ಇರುವರು. ಎಲ್ಲರನ್ನೂ ಒಳಗೊಳ್ಳುವ ಮಾತುಗಳನ್ನಾಡುವರು. ವ್ಯಕ್ತಿಯನ್ನು ಹೊರಗಿಡುವ ಅಥವಾ ಕಳಂಕ ಹೊರಿಸುವಂತಹ ಮಾತನ್ನಾಡುವುದಿಲ್ಲ. ಧ್ವನಿಯನ್ನು ಸರಳವಾಗಿಯೂ ಮತ್ತು ಮೆದುವಾಗಿಯೂ ಇಟ್ಟುಕೊಳ್ಳುವರೇ ಹೊರತು ದರ್ಪದ ಅಥವಾ ಅಧಿಕಾರ ಮದದಲ್ಲಿ ಎತ್ತರಿಸುವುದಿಲ್ಲ. ಗೌರವ, ಮುಕ್ತತೆ ಮತ್ತು ಸಹಾನುಭೂತಿ ಅವರ ಧ್ವನಿಯಲ್ಲಿ ಅಡಕವಾಗಿರುತ್ತದೆ. ಇತರ ವ್ಯಕ್ತಿಗಳ ಮಾತುಗಳನ್ನು ಸಂಪೂರ್ಣ ಗಮನವಿಟ್ಟು ಕೇಳಿಸಿಕೊಳ್ಳುವುದೇ ಅಲ್ಲದೇ, ಅವರ ಮಾತನ್ನು ತುಂಡರಿಸುತ್ತಾ ಮಧ್ಯೆ ಮಧ್ಯೆ ಮಾತಾಡಲು ಯತ್ನಿಸುವುದಿಲ್ಲ. ವ್ಯಕ್ತಿಗಳಿಗೆ ಹಣೆಪಟ್ಟಿ ಕಟ್ಟುತ್ತಾ ಟೀಕಿಸುವುದಿಲ್ಲ. ಇವರು ಹೀಗೇ ಎಂದು ತೀರ್ಮಾನಕ್ಕೆ ಬಂದವರಂತೆ ಮಾತಾಡುವುದಿಲ್ಲ. ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ಬಗ್ಗೆ ಗೌರವವನ್ನು ಹೊಂದಿರುವುದಲ್ಲದೆ, ಅದರ ಬಗ್ಗೆ ತಿಳಿದಿದ್ದರೆ ಗೋಪ್ಯತೆಯನ್ನು ಕಾಪಾಡುತ್ತಾರೆ ಮತ್ತು ಅವರ ವಿಶ್ವಾಸಕ್ಕೆ ಚ್ಯುತಿ ತರುವುದಿಲ್ಲ. ತಮ್ಮ ಮಾತು ಮತ್ತು ನಡೆಗಳಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂವೇದನೆಗಳನ್ನು ಹೊಂದಿದ್ದು ಇತರರ ಬದುಕು, ಸಂಸ್ಕೃತಿಗಳನ್ನು ಅಪಮಾನಿಸುವುದಿಲ್ಲ. ಇವೆಲ್ಲ ಮಾಡುವುದರ ಮೂಲಕ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮನದರಿವಿನ ಆದ್ಯತೆಯಾಗಿರುವುದೂ ಕೂಡಾ.

ಮನದರಿವು ಉಳ್ಳವರು ಮರೆಯಲೇ ಬಾರದಾಗಿರುವ ವಿಷಯಗಳೆಂದರೆ, ಆಡುವ ಮಾತುಗಳಿಗೆ ಬಲವಿದೆ. ಅವುಗಳನ್ನು ಕೌಶಲ್ಯದಿಂದ ಉಪಯೋಗಿಸಬೇಕೇ ಹೊರತು ನುಡಿಬಲದ ದುರುಪಯೋಗ ಮಾಡಿಕೊಳ್ಳಬಾರದು ಮತ್ತು ಅದರಿಂದ ಇತರರನ್ನು ದುರ್ಬಲಗೊಳಿಸಬಾರದು.

ಯಾರೊಟ್ಟಿಗೇ ಆಗಲಿ ನಾವು ತೋರುವ ವರ್ತನೆ ಅವರಲ್ಲಿ ಪರಿಣಾಮ ಬೀರುತ್ತದೆ ಮತ್ತು ಪ್ರಭಾವಿಸುತ್ತದೆ. ನಮ್ಮ ನಡೆ ನುಡಿಯ ಪ್ರಭಾವ ಮತ್ತು ಪರಿಣಾಮಗಳು ಅವರಿಗೆ ಉಪಯುಕ್ತವೂ, ವಿಕಾಸಪರವೂ ಆಗಿರಬೇಕೇ ಹೊರತು, ಎಂತೂ ಹೇಗೂ ವಿನಾಶಕಾರಿಯಾಗಿರಕೂಡದು.

ನಮ್ಮೆದುರಿಗಿರುವ ವ್ಯಕ್ತಿಯ ಮನಸ್ಸನ್ನು ಗೌರವಿಸಬೇಕು, ಅವರ ತನ್ನತನವನ್ನು ಬಲಗೊಳಿಸಬೇಕು. ನಾವು ಆಡುವ ಪ್ರತಿಯೊಂದು ಮಾತೂ, ನಡೆಯೂ ನಮ್ಮೆದುರಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವಂತದ್ದು ಎಂಬ ಪ್ರಜ್ಞೆ ಇರುವುದೇ ಮನದರಿವು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಬಯಲರಿವು
ಬಯಲರಿವು