ಸುನೀತಿ

Update: 2024-05-26 06:39 GMT

ಮನಸ್ಸನ್ನು ನಿಗ್ರಹಿಸುವುದೋ, ಅಧೀನದಲ್ಲಿಟ್ಟುಕೊಳ್ಳುವುದೋ ಅಲ್ಲ; ಅದಕ್ಕೆ ಸೂಕ್ತವಾದ ತರಬೇತಿಯನ್ನು ನೀಡುವುದು ಎಂಬುದು ಸ್ಪಷ್ಟವಾಯಿತು. ಆದರೆ ಅದಕ್ಕೆ ತರಬೇತಿಯನ್ನು ಹೇಗೆ ನೀಡುವುದು? ಮಗುವಿಗಾಗಲಿ, ಪಶುವಿಗಾಗಲಿ ಅಥವಾ ಮನಸ್ಸಿಗಾಗಲಿ ತರಬೇತಿಯನ್ನು ನೀಡುವಾಗ ದೃಢವಾದ ನಿಲುವನ್ನು ಹೊಂದಿರಬೇಕು. ಆದರೆ ಕಠೋರ ನಿಲುವನ್ನು ಹೊಂದಿರಬಾರದು. ತರಬೇತುದಾರರ ಯಶಸ್ಸಿಗೆ ಮೊದಲನೆಯ ಸೂತ್ರವಿದು.

ಮನಸ್ಸನ್ನು ಹದಗೊಳಿಸುವ ಅಥವಾ ತರಬೇತಿಗೊಳಿಸುವ ನಮ್ಮ ಉಪಕರಣವೆಂದರೆ ಆಲೋಚನೆಗಳು. ಉದ್ದೇಶ ಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಮತ್ತು ಸ್ಪಷ್ಟ ಗುರಿಯಿರಿಸಿಕೊಂಡು ಮಾಡುವ ಆಲೋಚನೆಗಳು. ಅವುಗಳನ್ನು ಲಯಬದ್ಧವಾದ ಲಹರಿಗೆ ತಂದರೆ ಮನಸ್ಸು ಮತ್ತು ಮೆದುಳು ಹದಗೊಳ್ಳುವುದು. ಮೆದುಳು ಮತ್ತು ಮನಸ್ಸು ಒಂದೇ ಅಲ್ಲ. ಆದರೆ, ಮೆದುಳು ಕೆಲಸ ಮಾಡದೇ ಮನಸಿಲ್ಲ, ಮನಸ್ಸಿಲ್ಲದೆ ಮೆದುಳಿನ ಕಾರ್ಯಗಳಿಲ್ಲ. ಮನಸ್ಸು ಮತ್ತು ಮೆದುಳು; ಎರಡೂ ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ.

ಮೆದುಳು ಭೌತಿಕ ಮತ್ತು ಮೂರ್ತ, ಮನಸ್ಸು ಮಾನಸಿಕ ಮತ್ತು ಅಮೂರ್ತ. ಎರಡೂ ಸಜೀವ. ಮೆದುಳಿನ ಕೋಶಗಳನ್ನು, ನರಗಳನ್ನು, ಒಟ್ಟಾರೆ ರಚನೆಯನ್ನು ಮುಟ್ಟಲು ಸಾಧ್ಯ. ಆದರೆ ಮನಸ್ಸನ್ನು ಭೌತಿಕವಾಗಿ ಸ್ಪರ್ಶಿಸಲು ಆಗದು.

ಮೆದುಳಿನ ಮೂಲಕ ಕೆಲಸ ಮಾಡುವ ಮನಸ್ಸನ್ನು ಚಂಚಲವೆಂದೂ, ಕುಟಿಲತೆಯಲ್ಲಿ ಅಥವಾ ವಂಚಕತನದಲ್ಲಿ ಎತ್ತಿದ ಕೈ ಎಂದೂ ಸಾಮಾನ್ಯವಾಗಿ ಹೇಳುವರು. ಏಕೆಂದರೆ ಅದರಲ್ಲಿನ ಭಾವನೆಗಳನ್ನು, ಆಲೋಚನೆಗಳನ್ನು ಹೊರಗೆ ಕಾಣಲಾಗದು. ಹೊರಗೆ ನುಡಿಯುವುದು, ನಡೆಯುವುದು ಅದರಂತೆ ಇರುವುದೋ ಇಲ್ಲವೋ ಕಣ್ಣಿಗೆ ಕಾಣದು. ಆದ್ದರಿಂದ ಈ ಷರಾ.

ಆದರೆ ಚಂಚಲ ಎಂದು ನಿರ್ಣಯಿಸುವ ಬದಲು ಚಲನಶೀಲ ಎನ್ನುವುದು ಹೆಚ್ಚು ಸಮಂಜಸ. ಕ್ರಿಯಾಶೀಲತೆಯೇ ಅದರ ಗುಣವಾಗಿರುವಾಗ ಅದನ್ನು ನಕಾರಾತ್ಮಕವಾಗಿ ಚಂಚಲ ಎನ್ನುವುದಾದರೂ ಏಕೆ? ಹಾಗೆಯೇ ಮನಸ್ಸಿನೊಳಗಿನ ಚಟುವಟಿಕೆಗಳು ಕಾಣದೇ ಇರುವುದರಿಂದ, ಒಳಗೊಂದು ಹೊರಗೊಂದು ಎಂದು ನಿರ್ಣಯಕ್ಕೆ ಬಂದು ಕುಟಿಲತೆ ಅಥವಾ ವಂಚಕತನ ಎನ್ನುವುದು ಅರ್ಥವಿಲ್ಲದ್ದು. ಅದರ ರಚನೆಯೇ ಹಾಗಿದೆ. ಅದು ಅಮೂರ್ತ. ಒಳಗಿನ ಚಟುವಟಿಕೆಗಳನ್ನು ವಿವೇಕವು ಅಳೆದು ತೂಗಿ ಅದನ್ನು ಸೂಕ್ತ ರೀತಿಯಲ್ಲಿ ಹೊರಗೆ ಅಭಿವ್ಯಕ್ತಗೊಳಿಸುವುದು ಒಳ್ಳೆಯ ವಿಷಯವೇ ಆಗಿದೆ. ತರಬೇತಿಯ ಉದ್ದೇಶವೂ ಕೂಡಾ ಅದೇ ಆಗಿದೆ ಮತ್ತು ಸಾಮಾಜಿಕವಾಗಿ ನಿರೀಕ್ಷಿಸುವುದೂ ಅದೇ ಆಗಿದೆ.

ಒಬ್ಬನಿಗೆ ಯಾರೋ ಒಬ್ಬನ ಮೇಲೆ ಕೆಟ್ಟ ಕೋಪ ಬಂದಾಗ, ಅಷ್ಟೇ ತೀವ್ರವಾಗಿ ತೋರಿ ಆರ್ಭಟಿಸಿ ಆವೇಶವನ್ನು ತೋರಿಸುವ ಬದಲು ತನ್ನ ಅಸಮ್ಮತಿಯನ್ನು ಮತ್ತು ಕೋಪವನ್ನು ನಿಯಂತ್ರಿತ ಪ್ರಮಾಣದಲ್ಲಿ ತೋರುವುದು, ಕಿಚ್ಚಾಗದಿರುವಂತೆ ಸಂಯಮದಿಂದ ವರ್ತಿಸುವುದು ಅಪ್ರಮಾಣಿಕವಲ್ಲ. ಬದಲಾಗಿ ತರಬೇತಿಗೊಂಡಿರುವ ಮನಸ್ಸಿನ ಲಕ್ಷಣವದು. ಇದ್ದುದನ್ನು ಇದ್ದಂಗೇ ಹೇಳುವುದು, ಮೂಡಿದ ಭಾವನೆಗಳನ್ನು ಯಾವ ಸೋಸುವಿಕೆ ಇಲ್ಲದೆ ಅಂತೆಯೇ ಹೊರಗೆಡಹುವುದು ಪ್ರಾಮಾಣಿಕತೆಯ ಪ್ರತಿಫಲನವೇನಲ್ಲ. ಕೆರಳಿದ ಮನಸ್ಸು ತರಬೇತಿ ಇಲ್ಲದೆ ಕಾರಿಕೊಳ್ಳುವುದರ ಲಕ್ಷಣವದು.

ಹಾಗಾಗಿ ಮನಸ್ಸಿನ ವಿಷಯದಲ್ಲಿ ಚಿಂತಿಸುವಾಗ, ಮಾತಾಡುವಾಗ ಮತ್ತು ವಿವರಿಸುವಾಗ ನಮ್ಮ ಪದಸಂಪತ್ತಿನ ಬಗ್ಗೆ ಎಚ್ಚರವಾಗಿರಬೇಕು. ಯಾವುದನ್ನು ಮೌಲ್ಯ ಎನ್ನುತ್ತೇವೆಯೋ ಆ ಮೌಲ್ಯದ ಅಳವಡಿಕೆ ಮನಸ್ಸಿನ ವಿಷಯದಲ್ಲಿ ಬೇರೊಂದು ಅರ್ಥವನ್ನೇ ಪಡೆದುಕೊಂಡುಬಿಡುತ್ತದೆ. ಆದ್ದರಿಂದ ಮನಸ್ಸಿನ ವಿಷಯದಲ್ಲಿ ನಮಗಿರುವ ಶಬ್ದಕೋಶದ ಪದಗಳು ಅದರದೇ ಅರ್ಥವನ್ನು ವಿವರಿಸಬೇಕು ಎಂಬ ನಿರ್ಧಾರದಲ್ಲಿ ಇರಬಾರದು. ಮೊದಲನೆಯದಾಗಿ ನಾವು ನಮ್ಮ ಮನಸ್ಸನ್ನು ನೋಡುವ ಬಗೆಯಲ್ಲೇ ಮೆದುತನ, ಅದನ್ನು ನಡೆಸಿಕೊಳ್ಳುವ ವಿಷಯದಲ್ಲಿಯೂ ಕೂಡಾ ಸಲಿಲತೆಯುಳ್ಳ ಸರಳತೆ ಇರಬೇಕು.

ನಮ್ಮ ಮನಸ್ಸು ಮನುಷ್ಯ ಸಮೂಹದಲ್ಲಿ ವಿವಿಧ ವಿಷಯಗಳನ್ನು ಎದುರುಗೊಳ್ಳುತ್ತಿರುತ್ತದೆ. ಎದುರುಗೊಂಡಾಗೆಲ್ಲಾ ಸದಾ ಆಜ್ಞೆಗಳನ್ನು ಪಡೆಯುತ್ತಿರುತ್ತದೆ ಮತ್ತು ಪ್ರತಿಕ್ರಿಯೆಗಳನ್ನು ನೀಡುತ್ತಿರುತ್ತದೆ. ಮಾನಸಿಕವಾಗಿ ಪಡೆಯುವ ನೀಡುವ ಈ ಚಟುವಟಿಕೆಗಳು ಸದಾ ರಚನಾತ್ಮಕವಾದ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ನಿಲುವನ್ನು ಅಥವಾ ಧೋರಣೆಯನ್ನು ತಳೆಯುವುದೇ ಸರಳತೆ.

ತಳೆಯುವ ನಿಲುವು ಅಥವಾ ಹೊಂದುವ ಧೋರಣೆ ವ್ಯಕ್ತಿಯ ಬದುಕಿನ ದಿಕ್ಕನ್ನೇ ಬದಲಿಸಬಲ್ಲದು. ಯಾವುದನ್ನು ಆಲೋಚಿಸಬೇಕೆಂದು ನಾವು ಮಾಡುವ ಆಯ್ಕೆಯ ಹಿಂದಿನ ಬಲವೇ ಧೋರಣೆ. ಹಾಗೆಯೇ ಮಾಡುವ ಆಲೋಚನೆಗಳ ಆಯ್ಕೆಗಳೂ ಧೋರಣೆಗಳನ್ನು ನಿರ್ಮಿಸುವುದರಲ್ಲಿ ಪಾತ್ರವಹಿಸುವುದು. ಆಲೋಚನೆಗಳ ಆಯ್ಕೆ ಮತ್ತು ಧೋರಣೆ ಎರಡೂ ಪರಸ್ಪರ ಪೂರಕ.

ಆಲೋಚನೆಗಳೇ ಧೋರಣೆಗಳನ್ನು ನಿರ್ಮಿಸುವುದಾದರೂ ದೀಪ ಮತ್ತು ಅದರ ಕಿರಣಗಳಂತೆ ಧೋರಣೆ ಎಂಬುದು ಕೇಂದ್ರ ಸ್ಥಾನವನ್ನು ಹೊಂದುತ್ತಾ ಆಲೋಚನೆಗಳು ಮತ್ತು ವರ್ತನೆಗಳು ಚಲನಶೀಲವಾಗಿದ್ದು ಪ್ರದರ್ಶಕ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುತ್ತವೆ.

ಒಟ್ಟಾರೆ ಧೋರಣೆ ಎನ್ನುವುದು ವ್ಯಕ್ತಿಯ ನಡವಳಿಕೆಗಳಲ್ಲಿ, ಚಟುವಟಿಕೆಗಳಲ್ಲಿ ಮತ್ತು ಪ್ರತಿಕ್ರಿಯೆಗಳಲ್ಲಿ ಪ್ರತಿಫಲಿಸುತ್ತಿರುತ್ತದೆ. ವ್ಯಕ್ತಿಯ ಬದುಕಿನ ನಡೆಗಳಲ್ಲಿ ಮತ್ತು ಸಂಬಂಧಗಳಲ್ಲಿ ನೇರ ಪ್ರಭಾವ ಬೀರುತ್ತಿರುತ್ತದೆ. ಕೈಗೆತ್ತಿಕೊಳ್ಳುವ ಕೆಲಸ, ಅದನ್ನು ಪೂರೈಸುವುದರಲ್ಲಿ ಇರುವ ಹೊಣೆಗಾರಿಕೆ, ಬದ್ಧತೆಗೆಲ್ಲಾ ಧೋರಣೆಯೇ ಮೊದಲನೆಯ ಕ್ರಿಯಾಶೀಲ ಅಂಶ. ಅದೇ ನಮ್ಮ ಸಂತೋಷ, ಬೇಸರ, ಗೆಲುವು ಅಥವಾ ಸೋಲು ಅನುಭವಿಸುವುದರ ನಿರ್ಣಾಯಕ ಅಂಶ.

ಧೋರಣೆ ಎನ್ನುವುದಾದರೂ ಏನು? ಯಾವುದೇ ಒಂದು ವಿಷಯವನ್ನು ಅಥವಾ ವ್ಯಕ್ತಿಯನ್ನು ಅಥವಾ ವಸ್ತುವನ್ನು ಅಥವಾ ಸಂಗತಿಗಳನ್ನು ನಾವು ನೋಡುವ, ಗ್ರಹಿಸುವ ಮತ್ತು ಉಪಚರಿಸುವ (ಅದರ ವಿಚಾರವಾಗಿ ನಡೆದುಕೊಳ್ಳುವ) ರೀತಿಯನ್ನು ನಿರ್ಧರಿಸುವ ಮನಸ್ಥಿತಿಯ ಒಂದು ಬಗೆ. ಈ ರೀತಿಯನ್ನೇ ವ್ಯಕ್ತಿಯು ವ್ರತವನ್ನಾಗಿ ಅಳವಡಿಸಿಕೊಂಡಾಗ ಅದೇ ನೀತಿಯಾಗುತ್ತದೆ. ಆ ನೀತಿಯು ರಚನಾತ್ಮಕವಾಗಿದ್ದರೆ, ಪ್ರಜ್ಞಾವಂತಿಕೆಯಿಂದ ಕೂಡಿದ್ದರೆ, ಸಂಯಮ ಮತ್ತು ಕರುಣೆಯಿಂದ ಕೂಡಿದ್ದರೆ ಸುನೀತಿ ಎಂದು ಎನಿಸಿಕೊಳ್ಳುತ್ತದೆ.

ವ್ಯಕ್ತಿಯ ಧೋರಣೆಯು ಒಂದು ನಿರ್ದಿಷ್ಟ ಬಗೆಯ ಭಾವನೆಗಳನ್ನು, ನಂಬುಗೆಗಳನ್ನು ಮತ್ತು ನಡವಳಿಕೆಗಳನ್ನು ಹೊಂದಿರುತ್ತದೆ. ಹಾಗಾಗಿ ಯಾವುದೇ ವ್ಯಕ್ತಿಗೆ ಅಥವಾ ವಸ್ತುವಿಗೆ ಅಥವಾ ಸಂಗತಿಗಳಿಗೆ ಮೌಲ್ಯವನ್ನು ನೀಡುವುದು ಅಥವಾ ಬಿಡುವುದು ಆಯಾ ವ್ಯಕ್ತಿಯ ಧೋರಣೆಯ ಮೇಲೆ ಅವಲಂಬಿತವಾಗಿರುತ್ತದೆ. ವ್ಯಕ್ತಿ ಪ್ರತಿಕ್ರಿಯಿಸುವ ರೀತಿ ನಕಾರಾತ್ಮಕ ಅಥವಾ ಸಕಾರಾತ್ಮಕವಾಗಿರಬಹುದು. ವ್ಯಕ್ತಿಯೊಬ್ಬನ ಚಟುವಟಿಕೆಗಳು ರಚನಾತ್ಮಕ ಅಥವಾ ವಿನಾಶಾತ್ಮಕವಾಗಿರಬಹುದು. ಒಟ್ಟಾರೆ ಅದು ಅವನು ಹೊಂದಿರುವ ಧೋರಣೆಯು ಹೊರ ಸೂಸುವ ಕಿರಣಗಳೇ ಆಗಿರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ