ಇದು ಮನಸುಗಾಲ

Update: 2024-04-07 06:08 GMT

ಮನುಷ್ಯ ತನ್ನ ಅನುಭವದ ಬದುಕಿನ ಪರಿಸರವನ್ನು ಮತ್ತು ಸಮಯವನ್ನು ವಿವಿಧ ಹೆಸರುಗಳಿಂದ ಕರೆದುಕೊಳ್ಳುತ್ತಿರುತ್ತಾನೆ. ಚರಿತ್ರೆ ಪೂರ್ವ, ಶಿಲಾಯುಗ, ಲೋಹಯುಗ, ಕಬ್ಬಿಣದ ಯುಗಗಳಿಂದ ಹಿಡಿದು ಡಿಜಿಟಲ್‌ಏಜ್, ಮಿಲೇನಿಯಮ್; ಹೀಗಿವೆ ನಾನಾ ಬಗೆಯ ಹೆಸರುಗಳು. ಈ ಹೆಸರುಗಳೆಲ್ಲವೂ ಬದಲಾಗುವ ಆಯಾ ಕಾಲದ ತಂತ್ರಜ್ಞಾನ, ಮಾಹಿತಿ ಮತ್ತು ಜೀವನ ಕ್ರಮವನ್ನು ಸೂಚಿಸುತ್ತವೆ. ಆದರೆ ಎಲ್ಲಾ ಕಾಲದಲ್ಲಿಯೂ ಮನುಷ್ಯನನ್ನು ಆ ಹೊತ್ತಿನ ಬದುಕಿಗೆ ಸಿದ್ಧಪಡಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸುವುದು ಅವನ ಮನಸ್ಸೇ. ಎಲ್ಲಾ ಕಾಲಗಳಿಗೂ ಪ್ರೇರಕ ಮತ್ತು ಪೂರಕವಾಗಿ ಕೆಲಸ ಮಾಡುವುದು ಕಾಲರಹಿತವಾದ ಮನಸ್ಸು.

ವ್ಯಕ್ತಿ ತಾನು ಮನಸ್ಸು ಮಾಡಿದರೆ ಎನ್ನುವುದು ಸಾಮಾನ್ಯವಾದ ಕೇಳಿಕೆ ಮತ್ತು ಹೇಳಿಕೆ. ಆದರೆ ಅದನ್ನೂ ಹೇಳುವಂತೆ ಪ್ರೇರೇಪಿಸುವುದು ಮನಸ್ಸೇ. ಹಾಗಾಗಿ ಮನಸ್ಸು ಎಂಬುದನ್ನು ಅರಿಯಲೂ ಕೂಡಾ ಮನಸ್ಸನ್ನೇ ಅವಲಂಬಿಸ ಬೇಕಾಗಿರುವುದು ಅನಿವಾರ್ಯ.

ಇಷ್ಟನ್ನಂತೂ ಗಟ್ಟಿಗೊಳಿಸಿಕೊಳ್ಳೋಣ. ನಾವು ಯಾವುದೇ ವ್ಯಕ್ತಿ, ಸಮೂಹ, ಸಮುದಾಯ, ಸಂಸ್ಕೃತಿ ಮತ್ತು ಧರ್ಮಗಳ ವ್ಯವಸ್ಥೆಗಳೊಡನೆ ವ್ಯವಹರಿಸುವುದಲ್ಲ. ನಮ್ಮೆಲ್ಲಾ ವ್ಯವಹಾರಗಳು ನಡೆಯುವುದು ಮನಸ್ಸು ಮತ್ತು ಮನಸ್ಸುಗಳ ಸಮೂಹದೊಂದಿಗೆ. ನಾವು ಒಬ್ಬ ವ್ಯಕ್ತಿಯನ್ನು ಉಪಚರಿಸುತ್ತೇವೋ, ತಿರಸ್ಕರಿಸುತ್ತೇವೋ, ಮನ್ನಿಸುತ್ತೇವೋ, ಮಾನ್ಯ ಮಾಡುತ್ತೇವೋ; ಅದೆಲ್ಲವೂ ಆ ವ್ಯಕ್ತಿಯ ಮನಸ್ಸಿಗೇ ನೇರಾನೇರ ಸಂಬಂಧಿಸಿರುವುದು.

ವ್ಯಕ್ತಿಯೊಬ್ಬ ಯಾವುದೋ ಧರ್ಮೀಯನೋ, ದೇಶಿಯನೋ, ಭಾಷಿಗನೋ ಆಗಿದ್ದರೂ ನೀವು ಮುಟ್ಟುವುದು ಆ ಎಲ್ಲಾ ಉಡುಪುಗಳ ಒಳಗಿನ ಮನಸ್ಸನ್ನೇ. ಹೌದು, ನಾವು ಸದಾ ವ್ಯವಹರಿಸುತ್ತಿರುವುದು ಮನಸ್ಸುಗಳೊಂದಿಗೆ. ಹಾಗಾಗಿಯೇ ಮನಸ್ಸು ಮಾನವ ಜಗತ್ತಿನಲ್ಲಿ ಕಾಲಾತೀತವಾದ ಕರಣ.

ಇದೇ ಕಾರಣದಿಂದ ನಾವು ನಮ್ಮನ್ನು ಅರಿತುಕೊಳ್ಳುವುದಕ್ಕೂ, ಇತರರೊಂದಿಗೆ ವ್ಯವಹರಿಸುವುದಕ್ಕೂ ಅಗತ್ಯವಿರುವ ಈ ಮನಸ್ಸನ್ನು ಒಂದು ಕ್ರಮದಲ್ಲಿ ತಿಳಿಯಬೇಕಾಗಿದೆ. ಅದರ ಸ್ವರೂಪ ಮತ್ತು ಚಟುವಟಿಕೆ, ಪ್ರಭಾವ ಮತ್ತು ಪ್ರತಿಕ್ರಿಯೆ ಎಲ್ಲವನ್ನೂ ವೈಜ್ಞಾನಿಕವಾಗಿಯೂ ಮತ್ತು ತಾತ್ವಿಕವಾಗಿಯೂ ಅರಿಯಬೇಕಿದೆ. ಅದೇ ಮನಶಾಸ್ತ್ರ.

ನಮ್ಮ ಸುತ್ತಮುತ್ತಲ ಮಾನವಜಗತ್ತಿನಲ್ಲಿ ಎಲ್ಲಾ ಕಡೆಯೂ ಈ ಮನಶಾಸ್ತ್ರದ ಅಗತ್ಯ ನಮಗೆ ಇದ್ದೇ ಇದೆ. ಯೌವನ, ಮುದಿತನ, ಮರೆಯುವುದು, ನೆನಪಿನಲ್ಲಿಡುವುದು, ನಿದ್ರಿಸುವುದು, ಕನಸು ಕಾಣುವುದು, ಪ್ರೀತಿಸುವುದು, ದ್ವೇಷಿಸುವುದು, ಸಂತೋಷವಾಗಿರುವುದು, ದುಃಖಿಸುವುದು, ಒತ್ತಡಗಳು, ಆತಂಕಗಳು, ಭಯಗಳು, ಆಸೆಗಳು, ಪ್ರೇರಣೆಗಳು, ಧೋರಣೆಗಳು, ನಡವಳಿಕೆಗಳು, ಅರ್ಥವಾಗುವುದು, ಅರ್ಥವಾಗದಿರುವುದು, ಕ್ರಿಯೆಗಳು, ಪ್ರತಿಕ್ರಿಯೆಗಳು, ಅಪರಾಧಗಳು, ಶೋಷಣೆಗಳು, ದೌರ್ಜನ್ಯಗಳು, ಶಿಕ್ಷೆಗಳು, ಸಂಧಾನಗಳು, ಕಲಿಕೆಗಳು, ಸಂಬಂಧಗಳು, ಮಾಧ್ಯಮಗಳು, ಸುದ್ದಿಗಳು, ರಾಜಕಾರಣಗಳು, ಸರಸಗಳು, ವಿರಸಗಳು, ದೂರುಗಳು, ದುಮ್ಮಾನಗಳು, ಸಂಘರ್ಷಗಳು; ಹೀಗೆ ಯಾವುದನ್ನು ಯಾರು ಎದುರುಗೊಳ್ಳದೇ ಇರುವರು? ಇವೆಲ್ಲಕ್ಕೂ ಅಕ್ಷರಶಃ ಮನಶಾಸ್ತ್ರದ ಅಗತ್ಯವಿದೆ.

ಯಾವುದೇ ಕಾಲಘಟ್ಟವೂ ಅದು ಮನಸುಗಾಲವೇ. ಮನುಷ್ಯ ಪ್ರಪಂಚದಲ್ಲಿ ಎಲ್ಲವೂ ಕೂಡಾ ಮನಸ್ಸಿನ ಪ್ರೇರಣೆಗಳೇ ಮತ್ತು ಮನಸ್ಸಿನ ಮೇಲಿನ ಪರಿಣಾಮಗಳೇ. ಮನಸ್ಸನ್ನು ನಿರ್ಲಕ್ಷಿಸಿ ನೀವು ಯಾವ ಕಾಲಘಟ್ಟದಲ್ಲಿಯೂ ಯಾವ ಮಾನುಷ ಪ್ರಸಂಗವನ್ನೂ ನೋಡಲಾರಿರಿ.

ಮನುಷ್ಯನ ಖಾಸಗಿ ಮತ್ತು ಸಾಮಾಜಿಕ ಬದುಕಿನ ವೈಫಲ್ಯಗಳಿಗೆ ಬಹುಮುಖ್ಯ ಕಾರಣವೊಂದಿದೆ. ಮನುಷ್ಯ ಜಗತ್ತಿನ ಮೂಲ ಕಾರಣವಾಗಿರುವ ಮನಸ್ಸನ್ನು ಗುರುತಿಸುವ ಮತ್ತು ಅದರ ವಿಚಾರಗಳನ್ನು ಗ್ರಹಿಸುವ ಬದಲು, ಅದು ಬಳಸುವ ವಸ್ತುಗಳನ್ನು ಮಾತ್ರವೇ ಗಮನಿಸುವುದು ಮತ್ತು ಪರಿಗಣಿಸುವುದು. ಇದರಿಂದಾಗಿ ಮನುಷ್ಯನ ಸಮಸ್ಯೆ ಯಾವ ಕಾಲಕ್ಕೂ ಬಗೆ ಹರಿಯುವುದೇ ಇಲ್ಲ. ವಿಪರ್ಯಾಸ ಎಂದರೆ ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ, ವಿವಿಧ ಕಾಲಘಟ್ಟಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನಗಳ ಪರಿಸರಗಳು ಬದಲಾಗುತ್ತಿವೆ. ಅವಕ್ಕೆ ತಕ್ಕ ಬದುಕುವ ಕ್ರಮವನ್ನು ಅನುಸರಿಸಿ ಮನುಷ್ಯನ ಎಲ್ಲಾ ಸಮಸ್ಯೆಗಳು ರೂಪಾಂತರಗೊಳ್ಳುತ್ತಿವೆಯೇ ಹೊರತು, ಯಾವುವೂ ಬಗೆ ಹರಿದಿಲ್ಲ.

ಪ್ರಯಾಣದಲ್ಲಿ ಎದುರಿಸುವ ತೊಡಕುಗಳನ್ನು ನಿವಾರಿಸುವ ಸಲುವಾಗಿ ಇನ್ನಷ್ಟು ಆವಿಷ್ಕಾರಗಳಾಗಿ ರಸ್ತೆ, ವಾಹನ, ಅವುಗಳ ಸುತ್ತುವರಿಯುವ ವಿಷಯಗಳು ಸುಗಮವಾಗುತ್ತಾ ಬಂದವು. ಆದರೆ ಮನಸ್ಸು ಕುರಿತಾದ ವಿಷಯಗಳು ಸರಾಗವೂ ಆಗಲಿಲ್ಲ ಮತ್ತು ಸುಗಮವೂ ಆಗಲಿಲ್ಲ. ಇದು ಇಡೀ ವಿಶ್ವಕ್ಕೆ ಅಥವಾ ಎಲ್ಲಾ ದೇಶಗಳಿಗೆ ಅನ್ವಯಿಸುವುದೇನಲ್ಲ. ಒಂದೊಂದು ಪ್ರದೇಶಗಳಿಗೂ ವೈರುಧ್ಯತೆಗಳಿವೆ.

ಮನಸ್ಸನ್ನು ಸರಳ ಮತ್ತು ಸಲಿಲಗೊಳಿಸಿಕೊಂಡು ಜೀವನ ನಿರ್ವಹಣೆಯನ್ನು ಸರಾಗಗೊಳಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ರೂಪುರೇಶೆಗಳನ್ನೇ ರೂಪಿಸಿಕೊಂಡ ಜನ ಸಮೂಹಗಳು ವಿವಿಧ ಭೂಭಾಗಗಳಲ್ಲಿ ಇವೆ. ಆದರೆ ನಾನು ಇಲ್ಲೇನು ಉಲ್ಲೇಖಿಸುತ್ತಿದ್ದೇನೋ ಅದು ನೇರವಾಗಿ ಮತ್ತು ಸ್ಪಷ್ಟವಾಗಿ ನಮ್ಮ ಸಮಾಜದ ಕುರಿತಾಗಿ ಮಾತ್ರವೇ.

ನಮ್ಮ ಸಮಾಜ ಜೀವಗಳನ್ನು ಅರಿತುಕೊಳ್ಳಲು ವಿಫಲವಾಗಿರುವ ಕಾರಣಗಳಿಂದ ಜೀವನವನ್ನು ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಜೀವ ಮತ್ತು ಜೀವನ; ಇವೆರಡನ್ನೂ ಹೊರತು ಪಡಿಸಿದ ವಿಷಯಗಳಿಂದಲೇ ಮನುಷ್ಯರನ್ನು ಅಳೆಯುವ ಮತ್ತು ನಿರ್ಣಯಿಸುವ ರೂಢಿಯಾಗಿಬಿಟ್ಟಿದೆ. ಇದು ಬಹಳ ಅಪಾಯಕರ. ಎಷ್ಟು ಅಪಾಯಕರ ಮತ್ತು ಅವೈಜ್ಞಾನಿಕವೆಂದರೆ ರೋಗಿಯೊಬ್ಬನು ತೊಟ್ಟಿರುವ ಬಟ್ಟೆಯನ್ನು ಪರಿಶೀಲಿಸಿ ಕಾಯಿಲೆಗೆ ಔಷಧಿಯನ್ನು ಕೊಟ್ಟಂತೆ.

ಈ ಕಾಲ ಮನಸುಗಾಲವಾಗಬೇಕಿದೆ. ಧಾರ್ಮಿಕನೊಬ್ಬನದು, ರಾಜಕಾರಣಿಯೊಬ್ಬನದು, ನಟನೊಬ್ಬನದು, ಸಾಹಿತಿಯೊಬ್ಬನದು, ಕಲಾವಿದನೊಬ್ಬನದು, ಕೂಲಿಕಾರ್ಮಿಕನೊಬ್ಬನದು, ಮಗುವೊಂದರದು, ಹೆಣ್ಣೊಂದರದು, ಗಂಡೊಂದರದು ಸಮಸ್ಯೆಗಳನ್ನು ನೋಡುತ್ತಿದ್ದೇವೆಂದರೆ, ಆ ಸಮಸ್ಯೆಗಳು ಧರ್ಮದ್ದಲ್ಲ, ರಾಜಕಾರಣದಲ್ಲ, ನಟನೆಯದ್ದಲ್ಲ, ಸಾಹಿತ್ಯದ್ದಲ್ಲ, ಕಲೆಯದ್ದಲ್ಲ, ಕೆಲಸದ್ದಲ್ಲ; ಅವುಗಳ ಪೋಷಾಕಿನಲ್ಲಿರುವ ವ್ಯಕ್ತಿಯ ಮನಸ್ಸಿನದು. ಪೋಷಾಕಿನ ವಿಷಯಗಳೆಲ್ಲವನ್ನೂ ತಾಂತ್ರಿಕವಾಗಿ ಖಂಡಿತ ಬಗೆಹರಿಸಿಕೊಳ್ಳಬಹುದು. ಆದರೆ ಈಗ ಅವನ್ನು ತಮ್ಮ ಮೂಲಕ ಪ್ರಕಟಗೊಳಿಸುವ ವ್ಯಕ್ತಿಗಳ ಮನಸ್ಸುಗಳಷ್ಟೇ ಸರಿ ಹೋಗಬೇಕಿರುವುದು. ಆಗಷ್ಟೇ ಸಂಘರ್ಷ ರಹಿತ ಸಮಾಜದಲ್ಲಿ ಸರಾಗವಾದ ಬದುಕು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ