ಒಳ ಹೊರಗಿನ ಕರುಣೆ

Update: 2024-06-09 08:44 GMT

ಕರುಣೆ ಎಂಬುದು ಕೂಡಾ ಒಂದು ನೋಡುವ ಬಗೆ ಅಥವಾ ಹೊಂದಿರುವ ಧೋರಣೆ. ಮನಸ್ಸನ್ನು ತರಬೇತಿಗೊಳಿಸುವಲ್ಲಿ ಕರುಣೆ ಎಂಬುದು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಕರುಣೆಯನ್ನು ಒಳಗೂ ಮತ್ತು ಹೊರಗೂ ಹೊಂದಿರು ವವರು ಮಾತ್ರವೇ ತಮ್ಮ ವರ್ತನೆಗಳನ್ನು ಸಂಘರ್ಷರಹಿತವಾಗಿ ಪ್ರದರ್ಶಿಸಬಲ್ಲರು. ಹೊರ ಕರುಣೆ ಎಂದರೆ ಸಂಬಂಧಗಳನ್ನು, ವ್ಯಕ್ತಿಗಳನ್ನು ಅನುಕಂಪದಿಂದ ಕಾಣುವುದು ಅಥವಾ ಸಹಾನುಭೂತಿಯಿಂದ ಉಪಚರಿಸುವುದು.

ಯಾವ ವ್ಯಕ್ತಿಗಳು ಅಸಹಾಯಕ ರಾಗಿರುವರೋ, ದೀನಾವಸ್ಥೆಯಲ್ಲಿ ಇರುವರೋ, ಒತ್ತಡ ಮತ್ತು ಕುಸಿತಗಳನ್ನು ಅನುಭವಿಸುತ್ತಾ ಜರ್ಜರಿತರಾಗಿರುತ್ತಾರೋ ಅವರಿಗೆ ನಮ್ಮ ಭಾವನಾತ್ಮಕ, ನೈತಿಕ ಮತ್ತು ಲೌಕಿಕ ನೆರವನ್ನು ನೀಡಲು ಸ್ವಯಂಪ್ರೇರಿತವಾಗಿ ಮುಂದಾಗುವುದೇ ಕರುಣೆ.

ವ್ಯಕ್ತಿಗಳ ಆ ಸ್ಥಿತಿಗೆ ಕಾರಣಗಳಿರುತ್ತವೆ. ಆ ವ್ಯಕ್ತಿಗಳದ್ದೇ ತಪ್ಪಾಗಿರಬಹುದು, ಅಹಂಕಾರದಿಂದ ಪತನ ಹೊಂದಿದ್ದಿರಬಹುದು, ಅವರದ್ದೇ ಸ್ವಯಂಕೃತ ಅಪರಾಧವಾಗಿರಬಹುದು, ಅನೈತಿಕ ಹಾಗೂ ಅಕ್ರಮ ನಡವಳಿಕೆಯಿಂದ ಆ ಸ್ಥಿತಿಯನ್ನು ಹೊಂದಿ ದ್ದಿರಬಹುದು, ಮೂರ್ಖತನದಿಂದ ಆ ಮಟ್ಟವನ್ನು ಹೊಂದಿರಬಹುದು; ಏನೇ ಆಗಿದ್ದರೂ ಕರುಣೆ ಎಂಬುದು ಬರಿಯ ಆ ವ್ಯಕ್ತಿಯ ದೀನಾವಸ್ಥೆಯನ್ನು ಮತ್ತು ನೋವನ್ನು ಮಾತ್ರ ಪರಿಗಣಿಸುವುದು ಹಾಗೂ ಅದಕ್ಕೆ ಅಗತ್ಯವಾಗಿರುವುದನ್ನು ಅನಿರ್ಬಂಧಿತವಾಗಿ ಅಂದರೆ ಯಾವುದೇ ಕಂಡೀಶನ್‌ಗಳು ಇಲ್ಲದೆ ಒದಗಿಸುವುದು. ಜೊತೆಗೆ ಉಪಕಾರಕ್ಕೆ ಪ್ರತ್ಯುಪಕಾರವನ್ನು ಅಥವಾ ಯಾವುದನ್ನೂ ಪ್ರತಿಯಾಗಿ ನಿರೀಕ್ಷಿಸದೆ ನೆರವಾಗುವುದು. ನೆರವಾದ ಮೇಲೆ ಅಥವಾ ಅಗತ್ಯಗಳನ್ನು ಮತ್ತು ಸೇವೆಗಳನ್ನು ಒದಗಿಸಿದ ಮೇಲೆ ಅದನ್ನು ಪ್ರಚಾರ ಮಾಡುತ್ತಾ, ಕರುಣೆಗೆ ಪಾತ್ರರಾದವರನ್ನು ಮುಜುಗರಕ್ಕೆ ಒಳ ಮಾಡದಿರುವುದು. ಅವರನ್ನು ತಮ್ಮ ಅಧೀನದಲ್ಲಿ ಇದ್ದೀರೆಂಬಂತೆ ವರ್ತಿಸದಿರುವುದು. ಅಷ್ಟೇಕೆ ನಮ್ಮ ಕರುಣೆಯ ಸೇವೆಯನ್ನು ಪಡೆದವರು ನಮಗೆ ಕೃತಜ್ಞರಾಗಿರಬೇಕು ಮತ್ತು ಅವರು ಅದನ್ನು ಸ್ಮರಿಸಬೇಕು, ಅಗತ್ಯ ಬಿದ್ದಾಗ ನಮ್ಮ ಉದ್ದೇಶಕ್ಕೆ ತಕ್ಕಂತೆ, ಆಣತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದೆಲ್ಲಾ ಆಲೋಚನೆಗಳನ್ನು ಮತ್ತು ನಿರೀಕ್ಷೆಗಳನ್ನು ಹೊಂದಿದ್ದರೂ ಅದು ಕರುಣೆಯಾಗಿರುವುದಿಲ್ಲ. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಇಷ್ಟೆಲ್ಲಾ ಧೋರಣೆಗಳನ್ನು ಹೊಂದಿದ್ದರೆ ಮಾತ್ರವೇ ಕರುಣೆ ಒಂದು ಮೌಲ್ಯವಾಗುತ್ತದೆ. ಇಲ್ಲದೇ ಇದ್ದರೆ ಕರುಣೆ ಎಂಬುದು ಸೇವೆಯ ಸಾಲವಾಗಿರುತ್ತದೆ.

ಕೆಲವೊಮ್ಮೆ ದಾರಿ ತಪ್ಪಿರುವವರಿಗೆ, ಆರೋಗ್ಯಪೂರ್ಣವಾದ ಜೀವನ ಮತ್ತು ನೈತಿಕತೆಗೆ ಬದ್ಧವಾದ ನಡವಳಿಕೆಯನ್ನು ಹೊಂದಲು ಕೆಲವು ನಿರ್ಬಂಧಗಳನ್ನು ಹೇರಬೇಕಾಗುತ್ತದೆ. ಅಂತಹ ನಿರ್ಬಂಧಗಳು ಅವರನ್ನು ತಮ್ಮ ಅಧೀನಕ್ಕೆ ಒಳಪಡಿಸಲು ಅಲ್ಲದೆ ಅವರದ್ದೇ ಬದುಕಿನ ಉನ್ನತೀಕರಣ ಕ್ಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ದೃಢವಾದ, ಸ್ವಹಿತಾಸಕ್ತಿಯಲ್ಲದ ಮತ್ತು ಸ್ವಾರ್ಥರಹಿತವಾದ ನಿರ್ಬಂಧಗಳನ್ನು ಹೇರುವ ಅಗತ್ಯವಿರುತ್ತದೆ. ಅದು ಕರುಣೆಯ ಕಾಳಜಿಯ ಭಾಗವೇ ಆಗುತ್ತದೆ. ಕರುಣೆ ಎಂಬುದು ಹೇಗಾದರೂ ಮಾಡಿಕೊಳ್ಳಲಿ ನಾವು ಮಾಡುವುದನ್ನು ಮಾಡಿದ್ದೇವೆ ಎನ್ನುವ ಉಡಾಫೆಯಾಗಬಾರದು. ಕರುಣೆಯ ಸೇವೆಗಳಿಗೆ, ಕರುಣೆಗೆ ಪಾತ್ರವಾದವರ ಉನ್ನತೀಕರಣದ ಹೊಣೆಗಾರಿಕೆಯೂ ಇರುತ್ತದೆ.

ಹೊರ ಕರುಣೆಯ ಬಗ್ಗೆ ತಿಳಿದುಕೊಂಡಂತೆ ಇನ್ನು ಒಳ ಕರುಣೆಯ ಬಗ್ಗೆ ಗಮನ ಹರಿಸಿದರೆ, ಅದು ನಮ್ಮನ್ನು ನಾವು ಕರುಣೆಯಿಂದ ಕಾಣುವುದು. ನಮ್ಮ ದೇಹ, ಅನೈಚ್ಛಿಕವಾಗಿ ದುಡಿಯುತ್ತಲೇ ಇರುವ ದೇಹದೊಳಗಿನ ಮತ್ತು ಹೊರಗಿನ ಭಾಗಗಳು, ನಮ್ಮ ಭಾವನೆಗಳು, ನಮ್ಮ ಮನಸ್ಸು; ಈ ಎಲ್ಲವೂ ಕೂಡಾ ನಮ್ಮದೇ ಕರುಣೆಗೆ ಪಾತ್ರವಾಗಲು ಖಂಡಿತ ಅರ್ಹ.

ದೇಹವನ್ನು ದಂಡಿಸಬೇಕು ಎಂಬ ಮಾತನ್ನು ಧಾರ್ಮಿಕಾಚರಣೆಗಳಲ್ಲಿ ಅಥವಾ ಆಧ್ಯಾತ್ಮಿಕ ಸಾಧನೆಗಳಲ್ಲಿ ಕೇಳುತ್ತೇವೆ. ದಂಡಿಸಬೇಕು ಎನ್ನುವುದೇ ನಕಾರಾತ್ಮಕ ಧೋರಣೆ. ಅದು ದೇಹವನ್ನು ಬಾಗಿಸುವುದು ಅಥವಾ ಪೆಡಸುಗೊಳ್ಳದಂತೆ ಸಲಿಲತೆಯನ್ನು ಹೊಂದುವಂತೆ ನೋಡಿಕೊಳ್ಳುವುದು. ಫ್ಲೆಕ್ಸಿಬಲ್ ಆಗಿರುವುದು. ದೇಹವು ತನ್ನ ಚಲನವಲನಗಳಲ್ಲಿ, ಭಂಗಿಗಳಲ್ಲಿ, ಸ್ಥಿತಿಗಳಲ್ಲಿ ಸಲಿಲತೆಯನ್ನು ಸಾಧಿಸುವಂತೆ, ಪೆಡಸುತನ ಇಲ್ಲದಂತೆ, ಬಹಳ ಮುಖ್ಯವಾಗಿ ಹೊರಗಿನ ಹವಾಮಾನ ಮತ್ತು ವಾತಾವರಣಗಳಿಗೆ ಕಷ್ಟವಿಲ್ಲದೆ ಹೊಂದಿಕೊಳ್ಳುವಂತೆ ಮಾಡುವುದು.

ಹೃದಯ, ಮೆದುಳು, ಶ್ವಾಸಕೋಶ, ಮೂತ್ರಜನಕಾಂಗ, ಕರುಳು, ಜಠರ, ಪಿತ್ತಜನಕಾಂಗವೇ ಮೊದಲಾದ ದೇಹದೊಳಗಿನ ಭಾಗಗಳನ್ನು, ಕಣ್ಣು, ಕಿವಿ, ನಾಲಗೆ, ಚರ್ಮ, ಮೂಗಿನಂತಹ ಹೊರಗಿನ ಭಾಗಗಳನ್ನು, ಲೈಂಗಿಕಾಂಗಗಳನ್ನು ಕೂಡಾ ಕರುಣೆಯಿಂದ ಕಾಣಬೇಕು. ಅವುಗಳಿಗೆ ಅಗತ್ಯವಿರುವ ಸೇವೆಗಳನ್ನು ಮತ್ತು ಪೋಷಣೆಗಳನ್ನು ನೀಡಬೇಕು. ಅವುಗಳನ್ನು ನಿರ್ಲಕ್ಷಿಸುವುದೋ ಅಥವಾ ಹಾನಿಯಾಗುವಂತಹ ಅಭ್ಯಾಸಗಳನ್ನು ಮಾಡಿಕೊಳ್ಳು ವುದೋ ಖಂಡಿತ ಸಲ್ಲದು. ನಮ್ಮದೇ ದೇಹದಲ್ಲಿ ಐಚ್ಛಿಕ ಮತ್ತು ಅನೈಚ್ಛಿಕ ಭಾಗಗಳ ಮೇಲೆ ನಾವೇ ದೌರ್ಜನ್ಯ ಮಾಡಬಾರದು. ಅದೆಷ್ಟು ಕಾಲ ಬದುಕಿರುತ್ತೇವೆಯೋ ಅಷ್ಟೂ ಕಾಲ ಒಂದೇ ಸಮನೆ ಕೆಲಸ ಮಾಡುವ ಹೃದಯ, ಮೂತ್ರಜನಕಾಂಗ, ಶ್ವಾಸಕೋಶಗಳೇ ಮೊದಲಾದವುಗಳಿಗೆ ಹಾನಿ ಮಾಡುವಂತಹ ವಿಷಯಗಳಿಂದ ದೂರವಿರುವುದೇ ಅವುಗಳ ಮೇಲೆ ತೋರುವ ಮೊದಲ ಕರುಣೆ. ನಂತರ ದೇಹಕ್ಕೆ ಅಗತ್ಯವಿರುವಂತಹ ಪೋಷಕಾಂಶಗಳನ್ನು, ತೊಂದರೆಗೊಳಗಾದಾಗ ಔಷಧೋಪಚಾರಗಳನ್ನು ಮಾಡುವುದು ಕೂಡಾ ನಾವು ನಮ್ಮ ದೇಹದ ಮೇಲೆ ತೋರುವ ಕರುಣೆಯಾಗಿದೆ.

ನಮ್ಮ ಮಕ್ಕಳಿಗಾಗಿಯೋ ಅಥವಾ ಸಮಾಜಕ್ಕಾಗಿಯೋ ಅಥವಾ ಇನ್ನಾವುದೋ ಕಾರಣಕ್ಕಾಗಿಯೋ ನಮ್ಮ ದೇಹವನ್ನು ಅಲಕ್ಷ್ಯ ಮಾಡುವುದು ಮತ್ತು ಆಹಾರ ಹಾಗೂ ಔಷಧಗಳನ್ನು ಬಿಡುವುದು ಒಂದು ಮಾನಸಿಕ ರೋಗವೇ ಆಗಿರುತ್ತದೆ. ಅದು ತ್ಯಾಗವಲ್ಲ, ಬಲಿಗೊಟ್ಟುಕೊಳ್ಳುವುದರ ಅರಿಮೆ ಅಥವಾ ಮಾರ್ಟಿರ್ ಕಾಂಪ್ಲೆಕ್ಸ್.

ಹಾಗೆಯೇ ಮನಸ್ಸು ನಮ್ಮದು. ಅದರ ಬಗ್ಗೆ ನಾವೇ ಕಠೋರವಾದ ನಿಲುವನ್ನು ಹೊಂದಬಾರದು. ನಮ್ಮ ಮನಸ್ಥಿತಿ ರೂಪುಗೊಂಡಿರುವುದಕ್ಕೆ ಕಾರಣ ನಾವೇ ಅಲ್ಲ. ನಮ್ಮ ವಂಶವಾಹಿ, ಸಂಸ್ಕೃತಿ, ಕುಟುಂಬ, ಶಿಕ್ಷಣ; ಹೀಗೆ ಯಾವುದ್ಯಾವುದೋ ಪ್ರಭಾವಶಾಲಿ ಕಾರಣಗಳಿರುತ್ತವೆ. ಹಾಗಾಗಿ ನಮ್ಮದೇ ಮನಸ್ಥಿತಿಯನ್ನು ನಾವೇ ನಿಂದಿಸಿಕೊಂಡು, ದಂಡಿಸಿಕೊಂಡು, ನಕಾರಾತ್ಮಕವಾಗಿ ಟೀಕೆಗಳನ್ನು ಮಾಡುವುದರಿಂದ ಮನಸ್ಸು ಇನ್ನಷ್ಟು ಹದಗೆಡುತ್ತದೆಯೇ ಹೊರತು ಒಳಿತೇನೂ ಆಗುವುದಿಲ್ಲ. ನಮ್ಮ ಮನಸ್ಥಿತಿಯನ್ನು, ವರ್ತನೆಗಳನ್ನು ಆತ್ಮಾವಲೋಕನದ ಮೂಲಕ ಗಮನಿಸಿಕೊಂಡು ಹಂತಹಂತವಾಗಿ ತರಬೇತಿಯನ್ನು ನೀಡುತ್ತಾ ನಿರೀಕ್ಷಿತ ಮಟ್ಟವನ್ನು ತಲುಪಬಹುದು. ಮನಸ್ಸನ್ನು ಖಂಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದನ್ನು ಒಲಿಸುವುದರಿಂದ ಖಂಡಿತ ಪ್ರಯೋಜನಗಳುಂಟು.

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ