ಮುಕ್ತಮನಸ್ಸು

Update: 2024-08-11 09:00 GMT

ಯಾರೊಬ್ಬರ ಮನಸ್ಸು ಮುಕ್ತವಾಗಿರಬೇಕೆಂದರೆ, ಅಂದರೆ ಬಂಧನವಿಲ್ಲದೆ ಇರಬೇಕೆಂದರೆ, ಆ ಮನಸ್ಸು ಯಾರದೊಬ್ಬರದಾಗಿರುತ್ತದೆಯೋ ಅವರೇ ಮುಕ್ತಗೊಳಿಸಿಕೊಳ್ಳಬೇಕು. ಇಡೀ ಜಗತ್ತಿನಲ್ಲಿ ಇನ್ಯಾರೂ ಮುಕ್ತಗೊಳಿಸಲಾರರು.

ವ್ಯಕ್ತಿಯೊಡನೆಯ ಸಂಬಂಧಗಳು, ಕುಟುಂಬ, ಸಮಾಜ, ಸಂಸ್ಕೃತಿ, ರಾಜಕೀಯ ವ್ಯವಸ್ಥೆ, ಧಾರ್ಮಿಕತೆ, ಶಿಕ್ಷಣ, ಗುರು, ಅಧ್ಯಾತ್ಮವೂ ಸೇರಿದಂತೆ; ಹೀಗೆ ಯಾವುದನ್ನೇ ತೆಗೆದುಕೊಳ್ಳಿ, ಅವೆಲ್ಲವೂ ವ್ಯಕ್ತಿಯನ್ನು ಒಂದು ಬಂಧನದಿಂದ ಮತ್ತೊಂದು ಬಂಧನಕ್ಕೆ ಒಳಮಾಡುವುದಲ್ಲದೆ ಮತ್ತೇನೂ ಇಲ್ಲ. ಅವೆಲ್ಲವೂ ನಿಬಂಧನೆಗಳನ್ನು ಒದಗಿಸುತ್ತಾ ಬಂಧನದಲ್ಲೇ ಇಟ್ಟಿರುವವು. ವ್ಯಕ್ತಿ ಕಠೋರವಾದ ಬಂಧನದಿಂದ ಕೋಮಲವಾದ ಬಂಧನಕ್ಕೆ ಒಳಗಾಗುವುದು ಲೇಸೆಂದು ಅಥವಾ ಕಬ್ಬಿಣದ ಸರಪಳಿಗಿಂತ ಚಿನ್ನದ ಸರಪಳಿಯ ಬಂಧನದಲ್ಲಿರಲು ತನ್ನನ್ನು ತಾನು ಸಮಾಧಾನಿಸಿಕೊಂಡುಬಿಡುವನು. ಆದರೆ ಜಗತ್ತಿನ ಯಾವುದೇ ಜೀವಿಯೂ ಬಂಧನದಲ್ಲಿ ಇರಲು ಇಚ್ಛಿಸದು.

ವ್ಯಕ್ತಿಗಳು ಸಂಘಜೀವಿ, ಸಮಾಜದ ಪ್ರಾಣಿಗಳಾದ್ದರಿಂದ ಅವರು ಮಗುವಿನ ರೂಪದಲ್ಲಿ ಭೂಮಿಗೆ ಬರುತ್ತಲೇ ಬಂಧನಕ್ಕೆ ಒಳಗಾಗುವ ಪ್ರಕ್ರಿಯೆಗೆ ಒಳಗಾಗುತ್ತಾರೆ. ಆದರೂ ಅಂತರಾಳದಲ್ಲಿ ಇರುವ ಬಯಕೆ ಎಂದರೆ ಅದು ಸ್ವಾತಂತ್ರ್ಯದ್ದೇ! ವ್ಯಕ್ತಿ ತಾನು ಸ್ವತಂತ್ರನಾಗಿರಲು ಅಗಾಧವಾಗಿ ಬಯಸುತ್ತಲೇ ಮತ್ತೆ ಮತ್ತೆ ಬಂಧನಕ್ಕೇ ಸಿಲುಕಿಕೊಳ್ಳುತ್ತಿರುತ್ತಾನೆ.

ಸಾಮಾಜಿಕ ಮತ್ತು ಸಾಂಘಿಕ ವ್ಯವಸ್ಥೆಯಿಂದ ಮುಕ್ತವಾಗಲು ಸಾಧ್ಯವೇ ಇಲ್ಲದಿದ್ದರೂ ತನ್ನ ಮನಸ್ಸನ್ನು ಮುಕ್ತವಾಗಿರಿಸಿಕೊಳ್ಳುವ ಮೂಲಕ ವ್ಯಕ್ತಿ ನಿರ್ಬಂಧವನ್ನು ಅನುಭವಿಸಲು ಸಾಧ್ಯ. ಅದೆಂತೆಂದರೆ ತೆರೆದ ಮನಸ್ಸನ್ನು ಹೊಂದಿರುವುದು ಮತ್ತು ತನ್ನ ಮನಸ್ಸಿನ ಸಾಮರ್ಥ್ಯವನ್ನು ಅರಿಯುವುದು. ಯಾರಿಗೆ ತಮ್ಮ ಮನದ ಬಲವನ್ನು ಅರಿಯಲು ಸಾಧ್ಯವೋ, ಯಾರಿಗೆ ತನ್ನ ಆನಂದವನ್ನು ತಾನು ಕಂಡುಕೊಳ್ಳಲು ಸಾಧ್ಯವೋ, ಯಾರಿಗೆ ತನ್ನ ಏಳು ಬೀಳುಗಳ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳಲು ಸಾಧ್ಯವಾಗುವುದೋ; ಅವರು ಮಾನಸಿಕವಾಗಿ ಪರಾವಲಂಬಿಗಳಾಗುವುದಿಲ್ಲ.

ಪರಾವಲಂಬತನವೆಂಬುದು ಮಾನಸಿಕವಾದದ್ದು. ಸಾಂಘಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಇರುವುದಲ್ಲ.

ನಟಿ ಮತ್ತು ಗಾಯಕಿ ಮಡೋನ್ನ ಹೇಳುವಂತೆ, ‘‘ಯಾವುದೇ ವ್ಯಕ್ತಿಗಳು ತಾವು ಹೊಂದಬೇಕಾಗಿರುವ ಆನಂದವನ್ನು ಹೊಂದಲು ಅನ್ಯರ ಅನುಮತಿಗಾಗಿ ಕಾಯಬೇಕಾಗುತ್ತದೆಯೋ ಅವರೇ ದರಿದ್ರರು’’.

ಮನುಷ್ಯನಿಗೆ ಬಂಧನದಲ್ಲಿರಲು ಎಷ್ಟು ರೂಢಿಯಾಗಿಬಿಟ್ಟಿದೆಯೆಂದರೆ ಪಂಜರದ ಬಾಗಿಲನ್ನು ತೆರೆದಿದ್ದರೂ ತನ್ನ ರೆಕ್ಕೆಯನ್ನು ತೆರೆಯಲಾರ, ಬಯಲಿನಲ್ಲಿ ಹಾರಲಾರ.

ಎಷ್ಟೋ ಯುವಜನರು ಮನೆಯಿಂದ, ಕುಟುಂಬದ ಸದಸ್ಯರಿಂದ ಬಿಡುಗಡೆ ಬಯಸುತ್ತಾರೆ. ಆದರೆ ಹೊರಗೆ ಹೋದ ಮೇಲೆ ಇನ್ಯಾರದೋ ಅಧೀನಕ್ಕೆ ಒಳಗಾಗುತ್ತಾರೆ. ಒಂದು ವ್ಯವಸ್ಥೆಯಿಂದ ಮತ್ತೊಂದು ವ್ಯವಸ್ಥೆಯಲ್ಲಿ ಬಂಧಿತರಾಗುತ್ತಾರೆ. ಸ್ವಾತಂತ್ರ್ಯವನ್ನು ಬಯಸುತ್ತಾ ಬಯಸುತ್ತಾ ಕಠೋರವಾದ ಬಂಧನದಲ್ಲಿ ಒಳಗಾಗುವರು. ಮುಕ್ತವಾಗಿ ಸಿಗರೇಟು ಸೇದುವ, ಕುಡಿಯುವ ಬಯಕೆಯನ್ನು ಪೂರೈಸಿಕೊಳ್ಳುತ್ತಲೇ ಅದರ ಚಟಕ್ಕೆ ಬಂಧಿತರಾಗುತ್ತಾರೆ. ಅದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವು ಕ್ಷೀಣಿಸುವುದಲ್ಲದೆ, ಆರ್ಥಿಕವಾಗಿಯೂ ಕೂಡಾ ಮತ್ತಷ್ಟು ಕುಗ್ಗುತ್ತಾರೆ. ಅದನ್ನು ಸಂಭಾಳಿಸಲು ಇನ್ಯಾರನ್ನೋ ಅವಲಂಬಿಸುವುದು, ಇನ್ನೇನೇನೋ ಕೆಲಸ ಮಾಡುವುದು; ಹೀಗೆ ತಮ್ಮನ್ನು ತಾವು ಬಂಧಿಸುವ ಪದರಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಲೇ ಹೋಗುತ್ತಾರೆ. ಇದೊಂದು ಉದಾಹರಣೆಯಷ್ಟೇ. ಇದೇ ರೀತಿಯಲ್ಲಿ ವಿವಿಧ ವಯೋಮಾನದವರು ಬೇರೆ ಬೇರೆ ರೀತಿಯಲ್ಲಿ ತಮ್ಮ ಬಂಧನಗಳ ಬಗೆಗಳನ್ನು ಬದಲಿಸಿಕೊಳ್ಳುತ್ತಾ ಹೋಗುತ್ತಾರೆ.

ವಿವಾಹಿತ ವ್ಯಕ್ತಿಗಳು ತಮ್ಮ ಸಂಗಾತಿಯ ವಿಷಯದಲ್ಲಿ ಒತ್ತಡವನ್ನು ಅನುಭವಿಸುತ್ತಿದ್ದೇವೆಂದು ಭಾವಿಸಿದಾಗ ಪರಸಂಗವು ಒಂದಷ್ಟು ಸಾಂತ್ವನ ನೀಡುವಂತೆ ಭಾಸವಾಗುತ್ತದೆ. ಆದರೆ ಬರುಬರುತ್ತಾ ಅದು ವಿವಾಹಿತ ಸಂಬಂಧಕ್ಕಿಂತ ಇನ್ನೂ ಉಸಿರುಗಟ್ಟಿಸುವಷ್ಟು ಒತ್ತಡಗಳನ್ನು ಮತ್ತು ಆತಂಕಗಳನ್ನು ನಿರ್ಮಿಸುತ್ತಾ ಹೋಗುತ್ತದೆ. ಅದೆಷ್ಟರ ಮಟ್ಟಿಗೆಂದರೆ ತಮ್ಮ ಏಕಾಂತದಲ್ಲಿ ತಾವೇ ತಮ್ಮನ್ನು ಹಳಿದುಕೊಳ್ಳುವಂತೆ, ಯಾರೊಂದಿಗೂ ವಿಷಯವನ್ನು ಹಂಚಿಕೊಳ್ಳಲಾರದಷ್ಟು ಸಂಕಟ ಮತ್ತು ಅವಮಾನಗಳನ್ನು ಅನುಭವಿಸುವಂತಾಗುತ್ತದೆ. ತಮ್ಮ ಅಸ್ತಿತ್ವದ ಮೌಲ್ಯವನ್ನು ಯಾರೋ ಒಬ್ಬರಿಂದ ತಾವಾಗಿ ಕಡೆಗಣಿಸಿಕೊಳ್ಳುವಂತೆ ಮಾಡಿಕೊಂಡಂತಾಗುತ್ತದೆ. ತಾಂಬೂಲ ಕೊಟ್ಟು ಉಗುಳಿಸಿಕೊಂಡಂತೆ. ಸ್ವಯಂಕೃತ ಅಪರಾಧವಾದ್ದರಿಂದ ಯಾರನ್ನೂ ದೂರಲಾಗದೆ ತಮ್ಮನ್ನು ತಾವೇ ದೂರಿಕೊಳ್ಳುವಂತಾಗುತ್ತದೆ.

ಹೀಗೆ ಬಂಧನಗಳ ಆವರಣಗಳನ್ನು ಅಥವಾ ಚೌಕಟ್ಟುಗಳನ್ನು ಬದಲಿಸಿಕೊಳ್ಳುವುದು ಸ್ವಾತಂತ್ರ್ಯವಲ್ಲ ಎಂಬ ಅರಿವಿಲ್ಲದೇ ವ್ಯಕ್ತಿಗಳು ಬಳಲುತ್ತಿರುತ್ತಾರೆ ಮತ್ತು ತಮ್ಮ ಅದಮ್ಯ ಬಯಕೆಯಾದ ಆನಂದವನ್ನು ಕಳೆದುಕೊಳ್ಳುತ್ತಿರುತ್ತಾರೆ. ಇದರಿಂದಾಗುವುದೇನೆಂದರೆ, ಆ ವ್ಯಕ್ತಿಯು ತಮಗೆ ಮತ್ತು ತಮ್ಮ ಸಾಮರ್ಥ್ಯಕ್ಕೆ ಏನು ಅರ್ಹವಾಗಿರುತ್ತಾರೆಯೋ ಅದನ್ನು ಪಡೆದುಕೊಳ್ಳುವುದಿಲ್ಲ. ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಾರೆ. ಅವರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದೆ ಹಿನ್ನಡೆ ಅನುಭವಿಸುತ್ತಾರೆ. ತಮಗಿರುವ ಮೌಲ್ಯವನ್ನು ತಾವೇ ಪರಿಗಣಿಸಲಾಗದ ಸ್ಥಿತಿಯಲ್ಲಿ ಇರುತ್ತಾರೆ. ತಮ್ಮ ಅಗತ್ಯವನ್ನು ಪೂರೈಸಿಕೊಳ್ಳುವ ಬದಲು ಇತರರ ಅಗತ್ಯಗಳನ್ನು ಪೂರೈಸಲೆಂದೇ ಹೆಣಗಾಡುವ ಪರಿಸ್ಥಿತಿಯನ್ನು ತಂದುಕೊಳ್ಳುತ್ತಾರೆ. ತಮಗೆ ತಾವು ಹೇಳಿಕೊಳ್ಳುವ ಮಾತುಗಳು ನಕಾರಾತ್ಮಕವಾಗಿರುತ್ತದೆ. ವ್ಯಕ್ತಿಗಳು ತಮ್ಮ ಮುಂದಿನ ದಿನಗಳನ್ನು ಊಹಿಸಿಕೊಳ್ಳಲು ಹೆದರುತ್ತಾರೆ.

ಸ್ವತಂತ್ರ ಮನಸ್ಥಿತಿ ಎಂದರೆ, ಪ್ರಸಕ್ತಕ್ಕೆ ಹೆದರದಿರುವುದು ಮತ್ತು ದೂರದೃಷ್ಟಿ ಇಲ್ಲದೆ ಭ್ರಮಾಧೀನವಾದಂತಹ ಬಯಕೆಗಳಿಗೆ ಮಾರುಹೋಗಿ ಮತ್ತೆ ಬಂಧನದಲ್ಲಿ ಸಿಲುಕದಿರುವುದು. ಇದೊಂದು ಬಹುದೊಡ್ಡ ಮತ್ತು ಸೂಕ್ಷ್ಮ ಸಂವೇದನೆಯ ವಿಷಯ. ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಪರಿಸ್ಥಿತಿಯಿಂದ ಪರಿಸ್ಥಿತಿಗೆ ಭಿನ್ನವಾಗುತ್ತದೆಯಾದರೂ ಒಬ್ಬ ವ್ಯಕ್ತಿ ತನ್ನ ಆನಂದವನ್ನು ತನ್ನಿಂದ ಕಂಡುಕೊಳ್ಳಬೇಕೇ ಹೊರತು, ಒಂದು ಅವಲಂಬನದಿಂದ ಮತ್ತೊಂದು ಅವಲಂಬನಕ್ಕೆ ಹೋದರೆ ಅದು ಮಾನಸಿಕವಾಗಿ ಮತ್ತೆ ಮತ್ತೆ ಬಂಧನಕ್ಕೆ ಒಳಗಾಗುತ್ತಲೇ ಇರುತ್ತಾರೆಂಬುದು ನಿಜ. ಅದರಿಂದ ಮುಕ್ತವಾಗುವ ಬಗೆಗಳಂತೂ ಇವೆ. ಅವುಗಳು ಕೂಡಾ ಮತ್ತೊಂದು ಬಂಧನವೋ ಅಲ್ಲವೋ ಎಂದು ನೋಡುವಷ್ಟರ ಮಟ್ಟಿಗೆ ಸಂವೇದನೆ ಮತ್ತು ಪ್ರಜ್ಞೆಯನ್ನಂತೂ ಹೊಂದಿರಬೇಕಷ್ಟೆ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು