ಸುರಕ್ಷತೆಗೆ ಲೈಂಗಿಕ ಶಿಕ್ಷಣ

Update: 2024-10-20 04:57 GMT
ಸುರಕ್ಷತೆಗೆ ಲೈಂಗಿಕ ಶಿಕ್ಷಣ
  • whatsapp icon

ನಮ್ಮ ಮಕ್ಕಳು ಪೋರ್ನ್ ವೀಡಿಯೊಗಳನ್ನು ನೋಡುತ್ತಿದ್ದಾರೆ, ನಮ್ಮ ಮಕ್ಕಳು ಡೇಟಿಂಗ್, ಬ್ರೇಕ್ ಅಪ್ ಎನ್ನುತ್ತಿದ್ದಾರೆ ಎಂದೆಲ್ಲಾ ಪೋಷಕರು ಮತ್ತು ಶಿಕ್ಷಕರು ಕಂಗಾಲಾಗುತ್ತಿದ್ದಾರೆ.

ಯಾವುದೇ ಒಂದು ಮಗುವು ತಾನು ಲೋಕ ಗ್ರಹಿಸುವ ಸಮಯದಲ್ಲಿ ಪರಿಚಿತವಾಗುವ ಮಾಹಿತಿ ಮತ್ತು ತಂತ್ರಜ್ಞಾನದ ಪ್ರಭಾವಕ್ಕೆ ಒಳಗಾಗುತ್ತದೆ ಮತ್ತು ತನಗೆ ದೊರಕುವ ಅವನ್ನು ಪೂರ್ಣಪ್ರಮಾಣದಲ್ಲಿ ಶೋಧಿಸುತ್ತಲೇ ಸಂಪೂರ್ಣ ಬಳಸಲೂ ನೋಡುತ್ತದೆ. ಆಗ ತನ್ನಿಂದ ಮುಚ್ಚಲ್ಪಟ್ಟಿರುವ ವಿಷಯಗಳನ್ನು ಅಥವಾ ತನಗೆ ನಿಷೇಧಿತವೆಂದು ನಿರ್ಬಂಧಿಸಿರುವ ವಿಷಯಗಳನ್ನು ಸಹಜ ಕುತೂಹಲದಿಂದ ಅನ್ವೇಷಿಸುತ್ತದೆ. ಮಾಹಿತಿ ತಂತ್ರಜ್ಞಾನಗಳ ಪ್ರಭಾವ ಮತ್ತು ಬಳಕೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅವರು ದಾರಿ ತಪ್ಪದೇ ಇರುವ ಹಾಗೆ ನೋಡಿಕೊಳ್ಳಲು ಸಾಧ್ಯವಿದೆ.

ಬೆಂಕಿ ಮತ್ತು ಮೊನಚಾದ ವಸ್ತುಗಳಿಂದ, ಎತ್ತರವಾದ ಅಥವಾ ಜಾರಿಕೆಯ ಸ್ಥಳದಲ್ಲಿ, ರಸ್ತೆಯಲ್ಲಿ ನಡೆಯುವಾಗ ಅಥವಾ ವಾಹನಗಳಲ್ಲಿ ಓಡಾಡುವ ಸಂದರ್ಭಗಳಲ್ಲಿ, ಅಪರಿಚಿತ ವ್ಯಕ್ತಿಗಳು ಕಳ್ಳತನ ಅಥವಾ ಮೋಸಗೊಳಿಸಲು ಬಂದಾಗ ಎಚ್ಚರಿಕೆಯನ್ನು ತೆಗೆದುಕೊಳ್ಳಲು ಮಕ್ಕಳಿಗೆ ಪಾಠ ಮಾಡಬೇಕಾದಂತೆ ಲೈಂಗಿಕತೆಯ ವಿಚಾರದಲ್ಲಿಯೂ ಕೂಡ ಮಕ್ಕಳಿಗೆ ಅಷ್ಟೇ ಸಹಜವಾಗಿ ಹೇಳಿಕೊಡುವ ಅಗತ್ಯವಿದೆ.

ಮಕ್ಕಳಿಗೆ ಲೈಂಗಿಕ ಶಿಕ್ಷಣದ ಮೊದಲ ಮತ್ತು ಮುಖ್ಯ ಉದ್ದೇಶವೇ ಎಳೆಯ ವಯಸ್ಸಿನಲ್ಲಿ ಲೈಂಗಿಕತೆಯ ಕಾರಣ ಮತ್ತು ಪರಿಣಾಮಗಳಿಂದ ತಮ್ಮನ್ನು ತಾವು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬುದೇ ಆಗಿದೆ. ಲೈಂಗಿಕತೆ ಅಥವಾ ಅದರಷ್ಟೇ ಸೂಕ್ಷ್ಮವಾದ ವಿಷಯವು ಯಾವುದೇ ಆಗಲಿ, ಜೈವಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ತೀವ್ರವಾದ ಪ್ರಭಾವವನ್ನು ಉಂಟುಮಾಡುವುದರಿಂದ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದಲೇ ವ್ಯಕ್ತಿಯ ಸಮಗ್ರ ಆರೋಗ್ಯಪೂರ್ಣವಾದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಲೈಂಗಿಕತೆಯ ಬಗ್ಗೆ ಮುಕ್ತ ತಿಳುವಳಿಕೆ ಬೇಕಾಗುತ್ತದೆ.

ಆ ಕಡೆ ಈ ಕಡೆ ನೋಡಿಕೊಂಡು ರಸ್ತೆ ದಾಟುವುದನ್ನು ಹೇಳಿಕೊಡುವ ಪೋಷಕರು ಮತ್ತು ಶಿಕ್ಷಕರು ಲೈಂಗಿಕತೆಯ ಬಗ್ಗೆ ತಿಳುವಳಿಕೆಯನ್ನು ಕೊಡುವುದರಲ್ಲಿ ಎಷ್ಟರಮಟ್ಟಿಗೆ ಎಡವುತ್ತಾರೆಂದರೆ, ತಮ್ಮದೇ ವಿಸರ್ಜನಾಂಗಗಳು ಅಥವಾ ಗುಪ್ತಾಂಗಗಳ ಬಗ್ಗೆ ತಿಳುವಳಿಕೆಯನ್ನು ಕೊಡದೇ ಹೋಗುತ್ತಾರೆ. ಅವರು ಅದರ ಬಗ್ಗೆ ತಿಳಿಸುವ ವೇಳೆಗೆ ಕೆಲವೊಮ್ಮೆ ತೀರಾ ತಡವಾಗಿಬಿಟ್ಟಿರುತ್ತದೆ. ಲೈಂಗಿಕ ದೌರ್ಜನ್ಯ, ವ್ಯಸನ ಅಥವಾ ಗೀಳು ಯಾವುದೇ ಆಗಲಿ, ವ್ಯಕ್ತಿಗಳ ವಿಷಯದಲ್ಲಿ ಬರಿಯ ದೇಹಕ್ಕೆ ಸಂಬಂಧಿಸಿರುವುದು ಮಾತ್ರವಲ್ಲದೇ ಶಾಶ್ವತವಾದ ಮಾನಸಿಕ ಮತ್ತು ಭಾವನಾತ್ಮಕ ವ್ಯಕ್ತಿತ್ವದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂಬುದನ್ನು ಎಂದಿಗೂ ಮರೆಯಲೇಬಾರದು.

ಭಾರತದಲ್ಲಿ ಶಿಕ್ಷಣ ಇಲಾಖೆಯೂ ಮತ್ತು ಸಾಮಾಜಿಕ ವ್ಯವಸ್ಥೆಯೂ ಹೊಂದಿರುವ ಮಡಿವಂತಿಕೆಯಿಂದಾಗಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವುದೇ ಇಲ್ಲ. ಆದರೆ ಗಂಭೀರ ಕ್ರಮಗಳನ್ನು ತೆಗೆದುಕೊಂಡಿರುವ ಅಮೆರಿಕದಂತಹ ದೇಶದಲ್ಲಿ ಅಲ್ಲಿನ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮಾಡಿರುವ ಸರ್ವೇಕ್ಷಣೆಯ ಪ್ರಕಾರ ಹದಿನೆಂಟರ ಪ್ರಾಯದೊಳಗಿನ ಮಕ್ಕಳಲ್ಲಿ ಆರರಲ್ಲಿ ಒಬ್ಬ ಹುಡುಗ, ನಾಲ್ಕರಲ್ಲಿ ಒಬ್ಬ ಹುಡುಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. ಮಕ್ಕಳಿಗೆ ಲೈಂಗಿಕ ದೌರ್ಜನ್ಯವನ್ನು ಎಸಗುವ ವ್ಯಕ್ತಿಗಳನ್ನು ತೀವ್ರವಾಗಿ ಮತ್ತು ಬಹುಬೇಗನೇ ವಿಚಾರಣೆಗೆ ಒಳಪಡಿಸಿ, ಸಾರ್ವಜನಿಕವಾಗಿ ನೇಣಿಗೇರಿಸುವಂತಹ ಇಸ್ಲಾಮಿಕ್ ದೇಶಗಳಲ್ಲೂ ಅಲ್ಲಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವರದಿಗಳಾಗುತ್ತವೆ. ಆದರೆ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತಾಡಲು ಅಥವಾ ತಿಳುವಳಿಕೆಯನ್ನು ನೀಡಲು ಮಡಿವಂತಿಕೆ ತೋರುವ ಭಾರತದಂತಹ ದೇಶದಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯಗಳು ಬಹುಪಾಲು ವರದಿಯಾಗುವುದೇ ಇಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ವರದಿಯಾದರೆಷ್ಟು ಬಿಟ್ಟರೆಷ್ಟು, ದೌರ್ಜನ್ಯವೆಸಗುವ ಅಪರಾಧಿಗೆ ಶಿಕ್ಷೆಯಾದರೆಷ್ಟು ಬಿಟ್ಟರೆಷ್ಟು; ನಮ್ಮ ಮಕ್ಕಳು ಲೈಂಗಿಕತೆಯ ಕಾರಣದಿಂದಾಗಿ ಬದುಕು ಮತ್ತು ಭವಿಷ್ಯಗಳನ್ನು ಹಾಳುಗೆಡವಿಕೊಳ್ಳಬಾರದು ಅಷ್ಟೇ.

ಇನ್ನೂ ಹೆದರಿಕೆಯ ವಿಷಯವನ್ನು ಗಮನಿಸಿ. ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್ (ಎನ್‌ಎಸ್‌ಒಪಿಡಬ್ಲ್ಯು) ಪ್ರಕಾರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಮಾಡುವವರಲ್ಲಿ ಮಕ್ಕಳಿಗೆ ಅಪರಿಚಿತರು ಬರಿಯ ಶೇ. ಹತ್ತು. ಅವರಲ್ಲಿ ಲೈಂಗಿಕತೆಯ ದೌರ್ಜನ್ಯಕ್ಕೆ ಒಳಪಡಿಸುವವರು ಅವರದೇ ಓರಗೆಯ ಮಕ್ಕಳೇ ಶೇ. ಇಪ್ಪತ್ತಮೂರು ಇದ್ದಾರೆ. ನಮ್ಮ ಭಾರತದಲ್ಲಿ ಹೀಗಿರುವುದಿಲ್ಲ ಎಂದು ಭಾವಿಸಲಾಗುವುದಿಲ್ಲ. ಏಕೆಂದರೆ ಕಾನೂನು ಮತ್ತು ವ್ಯವಸ್ಥೆಯ ಗಮನಕ್ಕೆ ಬರದಂತೆ ಹೋಗುವ ಅನೇಕ ಪ್ರಕರಣಗಳು ನಮ್ಮ ಸುತ್ತಮುತ್ತ ಬೇಕಾದಷ್ಟು ನಡೆಯುತ್ತಿವೆ.

ಮಕ್ಕಳು ತಮ್ಮ ಮೇಲೆ ಉಂಟಾಗುವ ಮಾಹಿತಿ ಮತ್ತು ತಂತ್ರಜ್ಞಾನದ ಪ್ರಭಾವಕ್ಕೆ ಒಳಗಾಗುವುದಾದರೂ ಮಕ್ಕಳ ಪೋಷಕರು ಅವರೊಂದಿಗೆ ಲೈಂಗಿಕತೆ ಮತ್ತು ಅವುಗಳ ಸಹಜ ಪ್ರಭಾವಗಳ ಬಗ್ಗೆ ಮುಕ್ತವಾಗಿ ಹಾಗೂ ಸಾಮಾನ್ಯ ಸಂಗತಿಗಳು ಎಂಬಂತೆ ಮಾತಾಡುವುದಾದರೆ ಎಷ್ಟೋ ಪ್ರಮಾದಗಳನ್ನು ತಡೆಯಲು ಸಾಧ್ಯವಾಗುತ್ತದೆ. ಮಕ್ಕಳು ಕುತೂಹಲ ಮತ್ತು ಸೆಳೆತದಿಂದ ಪ್ರಯೋಗಕ್ಕೆ ಒಳಗಾಗುವುದನ್ನು ತಡೆಯಲಾಗುತ್ತದೆ. ಯಾವುದು ಕುತೂಹಲ ಕೆರಳಿಸುವುದಿಲ್ಲವೋ, ಯಾವುದು ರಹಸ್ಯ ಎಂದು ಮುಚ್ಚಿಡಲ್ಪಡುವುದಿಲ್ಲವೋ ಅದನ್ನು ಪ್ರಯೋಗಿಸಲು ಅಷ್ಟೇನು ಸ್ವಾರಸ್ಯವಿರುವುದಿಲ್ಲ ಎಂಬ ಸಣ್ಣ ಜಾಣತನ ಪೋಷಕರಿಗೆ ಮತ್ತು ಶಿಕ್ಷಕರಿಗೆ ಇದ್ದರೆ ಸಾಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು