ತಿಳಿಗೇಡಿತನದ ತಿಮಿರು
ಮನುಷ್ಯ ಮನುಷ್ಯನ ನಡುವಿನ ಸಂವಹನ ಎಂದರೇನೇ ಅದು ಇರುವುದು ಸಹಬಾಳ್ವೆಯ ಬೆಸುಗೆಗೆ. ಆದರೆ ಸಂಘಜೀವನದ ಮೂಲ ಸತ್ವದ ಅರಿವಿಲ್ಲದೆ ಇರುವ ವ್ಯಕ್ತಿಗಳು ತಮ್ಮ ಸಂವಹನದ ಸಂಭಾಷಣೆಗಳನ್ನು ಮೊನಚುಗೊಳಿಸಿಕೊಂಡು ಬೆಸೆಯುವ ಬದಲು ಇರಿಯುವರು. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಜೊತೆ ಮಾತಾಡುವಾಗ ಮಾತುಕತೆಯ ಫಲವಾಗಿ ವ್ಯಕ್ತಿಗಳು ಸಮಾಧಾನ, ಭರವಸೆ, ಭದ್ರತೆ ಮತ್ತು ಗೌರವಕ್ಕೆ ಒಳಗಾದ ಭಾವ ಉಂಟಾಗಬೇಕು. ಯಾವಾಗ ವ್ಯಕ್ತಿಗಳು ತಮ್ಮ ಮಾತುಗಳಿಂದ ಅಸಮಾಧಾನ, ಭಯ, ಅಭದ್ರತೆ, ಅವಮಾನ ಮತ್ತು ಅಗೌರವ ಉಂಟು ಮಾಡುತ್ತಿರುವರೋ ಅವರು ಮನಶಾಸ್ತ್ರದ ಪ್ರಕಾರ ಅಥವಾ ವರ್ತನಾ ಶಾಸ್ತ್ರದ ಪ್ರಕಾರ ಆ ವ್ಯಕ್ತಿಯು ಆತ್ಮರತಿ ಅಥವಾ ಸ್ವಮೋಹದ ಸಮಸ್ಯೆಗೆ ಈಡಾಗಿರುವವರು ಎಂದರ್ಥ.
ತೀವ್ರವಾಗಿ ತನಗೆ ತಾನು ಪ್ರಾಮುಖ್ಯತೆಯನ್ನು ಕೊಟ್ಟುಕೊಳ್ಳುವವನು, ಸ್ವಪ್ರಶಂಸೆಯ ಗೀಳಿಗೆ ಒಳಗಾಗಿರುವವನು, ಎಲ್ಲದಕ್ಕಿಂತ ಮುಖ್ಯವಾಗಿ ಸಹಾನುಭೂತಿ ಇಲ್ಲದವನಾಗಿರುತ್ತಾನೆ.
ಹಾಗೆಯೇ ಜ್ಞಾನಮದ ಎಂಬುದೊಂದಿದೆ, ತನಗಿರುವ ತಿಳುವಳಿಕೆ, ಅರಿವು ಅಥವಾ ಜ್ಞಾನವನ್ನು ಬಳಸಿಕೊಂಡು ಮತ್ತೊಬ್ಬರನ್ನು ಹೆದರುವಂತೆ ಮಾಡುವುದು, ಇತರರಲ್ಲಿ ಕೀಳರಿಮೆಯನ್ನು ಉಂಟು ಮಾಡುವುದು, ಇತರರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳುವಂತೆ ಮಾಡುವುದೇ ಇತ್ಯಾದಿ ಅರಿವಿನ ಅಹಂಕಾರದ ಲಕ್ಷಣಗಳು.
ಕೆಣಕುಗೇಡಿತನ ಎಂದರೆ ಟ್ರೋಲ್ ಮಾಡುವುದು. ಉದ್ದೇಶಪೂರ್ವಕವಾಗಿ ಪ್ರತಿಕ್ರಿಯೆಗಳನ್ನು ಪ್ರಚೋದಿಸಲು ವಿಷಯಗಳನ್ನು ಹುಟ್ಟಿಸುವುದು. ನಕಾರಾತ್ಮಕವಾದ ವಿಷಯಗಳನ್ನು ಹರಡುವುದು, ತಮ್ಮ ದೃಷ್ಟಿಗೆ ಕಂಡದ್ದನ್ನು ವಿಪರೀತವಾಗಿ ಅಥವಾ ಅಸಂಬದ್ಧವಾಗಿ ವ್ಯಾಖ್ಯಾನ ಮಾಡುತ್ತಾ ತಪ್ಪು ಸಂದೇಶಗಳನ್ನು ಹರಡುತ್ತಾ, ಅವಹೇಳನ ಮಾಡುವುದನ್ನು ಮತ್ತು ಸಂಘರ್ಷಗಳನ್ನು ಸೃಷ್ಟಿಸುತ್ತಾ ಅಂತಹ ವಿಷಯಗಳಲ್ಲಿ ಆನಂದಪಡುವುದು.
ಇನ್ನೂ ಕೆಲವು ಬಗೆಯ ವ್ಯಕ್ತಿಗಳಿರುತ್ತಾರೆ; ಅವರ ಕೆಲಸವೆಂದರೆ, ವ್ಯಂಗ್ಯ, ಕುಟಿಲೋಕ್ತಿ, ಅಪಹಾಸ್ಯಗಳಿಂದ ಯಾವಾಗಲೂ ಇನ್ನೊಬ್ಬರನ್ನು ಕೆಳಗೆ ತಳ್ಳಲು ನೋಡುತ್ತಿರುವುದು. ಕೆಲವೊಮ್ಮೆ ನೇರವಾಗಿಯೂ, ಕೆಲವೊಮ್ಮೆ ಪರೋಕ್ಷವಾಗಿಯೂ ವ್ಯಕ್ತಿಗಳನ್ನು, ಸಮುದಾಯಗಳನ್ನು, ಸಮೂಹಗಳನ್ನು ಅಪಮಾನಿಸಲು ಮತ್ತು ಅನುಮಾನಿಸಲು ಯತ್ನಿಸುತ್ತಲೇ ಇರುತ್ತಾರೆ. ಇವರಂತೂ ಸಕಾರಾತ್ಮಕವಾಗಿ ವರ್ತಿಸಲೂ ಬಾರರು ಅಥವಾ ಇತರರಲ್ಲಿ ಒಳಿತನ್ನು ಹೆಕ್ಕಿ ಕಾಣುವುದಂತೂ ಇಲ್ಲವೇ ಇಲ್ಲ. ಇವರಿಗೆ ಜಡೋಗ್ರ ಕೇಡಿಗರು ಅಥವಾ ಪ್ಯಾಸಿವ್ ಅಗ್ರೆಸಿವ್ ವ್ಯಕ್ತಿಗಳೆಂದು ಕರೆಯುವರು.
ಇನ್ನು ಕೆಲವರಂತೂ ತಮಗಿರುವ ಅತ್ಯದ್ಭುತವಾದ ಜ್ಞಾನ ಪ್ರದರ್ಶನದಿಂದ ತಮ್ಮ ನಡೆ, ನುಡಿಗಳಿಂದ ತಮ್ಮ ಜ್ಞಾನಬಲದ ಪ್ರಹಾರವನ್ನು ಮಾಡುತ್ತಾ ನಿನಗೇನೂ ತಿಳಿಯದು, ಸುಮ್ಮನಿರು ಎಂದು ಹೆಜ್ಜೆ ಹೆಜ್ಜೆಗೂ ತಮ್ಮ ಬಲಪ್ರದರ್ಶನ ಮಾಡುತ್ತಿರುತ್ತಾರೆ. ಎಲ್ಲಾ ಬಲ್ಲ ಮದೋನ್ಮತ್ತ ತಿಮಿರದು.
ಒಟ್ಟಾರೆ ತಿಳಿಗೇಡಿತನದ ತಿಮಿರೆಂದರೆ ವ್ಯಕ್ತಿಗೆ ನಿಜವಾದ ತಿಳುವಳಿಕೆ ಇದೆ ಎಂದರ್ಥವಲ್ಲ. ಆ ವ್ಯಕ್ತಿ ತನಗೆ ತಿಳುವಳಿಕೆ ಇದೆ ಎಂದು ಭಾವಿಸುವುದು. ತಿಳಿಗೇಡಿತನದ ತಿಮಿರಿನ ವ್ಯಕ್ತಿಯ ಸಾಮಾನ್ಯ ಲಕ್ಷಣಗಳೆಂದರೆ ತನಗೇನೋ ಒಂದು ಹಂತಕ್ಕೆ ಇರುವ ಅರಿವನ್ನೇ ಅಂತಿಮ ಅರಿವೆಂಬಂತೆ ಭಾವಿಸಿ ಇತರರನ್ನು ಸದಾ ವಿಮರ್ಶಿಸುತ್ತಲೇ ಇರುವುದು, ಅಣಕಿಸುತ್ತಿರುವುದು ಮತ್ತು ಕಡೆಗಣಿಸಿ ಮಾತಾಡುತ್ತಿರುವುದು. ಇತರರು ತಾನು ಹೇಳುವ ವಿಷಯಕ್ಕೆ ಪ್ರತಿಯಾಗಿ ಅಥವಾ ಸರಿಯಿಲ್ಲ ಎಂದು ತೋರ್ಪಡಿಸಿದ ಪಕ್ಷದಲ್ಲಿ ಅದನ್ನು ಖಂಡಿಸುವುದು ಅಥವಾ ಅವಹೇಳನ ಮಾಡುವುದು.
ಈ ತಿಳಿಗೇಡಿತನದ ತಿಮಿರಿರುವ ವ್ಯಕ್ತಿಗಳು ಇತರರ ತಿಳುವಳಿಕೆಗಳಿಗೆ ಕಿವಿಕೊಡುವುದಿಲ್ಲ ಮತ್ತು ಪರ್ಯಾಯ ಗ್ರಹಿಕೆಗಳು ಇವೆ ಎಂಬುದನ್ನೇ ಒಪ್ಪುವುದಿಲ್ಲ. ತನ್ನನ್ನು ತಾನು ಮುನ್ನೆಲೆಗೆ ತಂದುಕೊಳ್ಳುತ್ತಿರುವುದು ಮತ್ತು ತನ್ನ ವಿಷಯವನ್ನೇ ಅಥವಾ ತನ್ನನ್ನು ಮಾತ್ರವೇ ಇತರ ಎಲ್ಲರದಕ್ಕಿಂತ ಮೇಲ್ಮಟ್ಟದಲ್ಲಿಟ್ಟು ತೂಗುವುದು.
ಕುಚೋದ್ಯದ ಮತ್ತು ನಿರಾಕರಣೆಯ ದನಿಯಲ್ಲಿ ಅಥವಾ ಧೋರಣೆಗಳಲ್ಲಿ ತಮ್ಮ ಭಾಷೆಯನ್ನು ಬಳಸುವುದು. ತಮ್ಮ ತಪ್ಪನ್ನು ಎಂದಿಗೂ ಒಪ್ಪಿಕೊಳ್ಳರು ಮತ್ತು ತಿದ್ದುಪಡಿಗೆ ತೆರೆದುಕೊಳ್ಳರು.
ಇಂತಹ ವ್ಯಕ್ತಿಗಳೊಂದಿಗೆ ಸಂವಹನ ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ನಮ್ಮ ವಿಷಯಗಳನ್ನು ಒಪ್ಪಿಸಲೂ ಆಗುವುದಿಲ್ಲ, ಇನ್ನು ಅವರದ್ದಂತೂ ಒಪ್ಪಿಕೊಳ್ಳಲು ಆಗುವುದೇ ಇಲ್ಲ. ಹಾಗಿರುವಾಗ ಮಾಡಬಹುದೇನೆಂದರೆ, ಸೌಜನ್ಯಪೂರಿತವಾಗಿ, ಆದರೆ ದೃಢವಾಗಿ ನಮ್ಮ ಮತ್ತು ಅವರ ನಡುವೆ ಎಲ್ಲೆಗಳನ್ನು ನಿಶ್ಚಯಪಡಿಸಿಕೊಂಡು ಅವರ ನಕಾರಾತ್ಮಕ ಮತ್ತು ನಮ್ಮ ಚೈತನ್ಯ ಹೀರುವ ಅವರ ಬರಡು ಟೀಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸುವುದು ಮೊದಲನೆಯ ಕೆಲಸ.
ನಾವು ನೊಂದರೂ, ಶೋಕಿಸಿದರೂ, ಬೇಸರಗೊಂಡರೂ, ಕೋಪಿಸಿಕೊಂಡರೂ ಮತ್ತು ಅಸಮಾಧಾನ ಹೊಂದಿದರೂ ಅವರಿಗೆ ವಿಜಯವೇ ಆಗಿರುವುದರಿಂದ, ಅವರ ಇರುವನ್ನೇ ಸಂಪೂರ್ಣ ತಿರಸ್ಕರಿಸುವ ಮೂಲಕ ಅವರನ್ನು ನಿರ್ಲಕ್ಷಿಸಬೇಕು. ಅವರನ್ನು ನಿರ್ಲಕ್ಷಿಸುವುದು ಮತ್ತು ಅವರನ್ನು ಅಸಡ್ಡೆಯಿಂದ ಕಾಣುವುದೇ ಅವರಿಗೆ ಮುಟ್ಟಿಸುವ ಸೋಲು. ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಅವರಿಗೆ ಪ್ರತಿಕ್ರಿಯೆ ಕೊಡಲು ಹೋಗಲೇ ಬಾರದು. ರೋಗಿಷ್ಟರಾಗಿರುವ ಅವರ ಬಗ್ಗೆ ಕರುಣೆ ಇರಲಿ. ಏಕೆಂದರೆ ಅವರಿಗಿರುವ ಹಲವು ಬಗೆಯ ಅಭದ್ರತೆಯ ಮನಸ್ಥಿತಿಯಿಂದ ಅವರು ಹಾಗೆ ವರ್ತಿಸುವುದು. ಆದರೆ ಅವರ ವರ್ತನೆಗಳನ್ನು ಮನ್ನಿಸುವುದು ಬೇಡ. ಅವರ ನಕಾರಾತ್ಮಕ ನಳಿಗೆಗಳಿಗೆ ಗುರಿಯಾಗಿ ನಾವು ನಲುಗದಿರಲು ಸಕಾರಾತ್ಮಕವಾದ ಮನಸ್ಥಿತಿಯ ವ್ಯಕ್ತಿತ್ವದ ಸಮೂಹವನ್ನು ಹೊಂದಿರಬೇಕು. ಏಕೆಂದರೆ ಮನೋಸಹಜವಾಗಿ ವ್ಯಕ್ತಿ ಕುಸಿದಾಗ ನಮ್ಮನ್ನು ಬೀಳದಂತೆ ತಡೆಯಲು ಬೆಂಬಲಿಸುವ ಸಕಾರಾತ್ಮಕ ಮನಸ್ಥಿತಿಯ ವ್ಯಕ್ತಿಗಳ ಸಹವಾಸ ಖಂಡಿತ ಅವಶ್ಯಕತೆ ಇರುತ್ತದೆ.
ತಿಳಿಗೇಡಿತನದ ತಿಮಿರಿನ ವ್ಯಕ್ತಿಗಳು ಕ್ರೂರ ಹಾಸ್ಯದಲ್ಲಿ, ಅವಹೇಳನದ ಛಾಯೆಯಲ್ಲಿ ಎಷ್ಟೇ ವರ್ತಿಸಿದರೂ ಮತ್ತು ಮಾತಾಡಿದರೂ ಆರೋಗ್ಯಕರವಾದ ಮತ್ತು ಸಮತೂಕದ ಮಾತುಕತೆಯನ್ನಷ್ಟೇ ಆಡುತ್ತಾ ನಮ್ಮ ಪ್ರಜ್ಞಾಪೂರ್ಣ ಮನಸ್ಥಿತಿಯನ್ನು ಅಭಿವ್ಯಕ್ತ ಪಡಿಸುವುದು ಅತ್ಯಂತ ಮಾದರಿ ನಡವಳಿಕೆ.