ಗೀಳಿಗರು

Update: 2024-09-15 09:00 GMT

ನಮ್ಮ ಲಿಂಗ, ವಯಸ್ಸು, ಶಿಕ್ಷಣ, ಉದ್ಯೋಗ, ಹುದ್ದೆ, ಅಧಿಕಾರ, ಸಂಬಂಧ, ಆರ್ಥಿಕತೆ, ಸಾಮಾಜಿಕ ಸ್ಥಾನಮಾನ ಏನೇ ಇರಲಿ, ಒಂದು ವಿಷಯದಲ್ಲಿ ನಮ್ಮನ್ನು ನಾವು ಗಮನಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದೇನೆಂದರೆ ನಮಗಿರುವ ಗೀಳು ಯಾವುದು?

ನಮ್ಮ ಆಲೋಚನೆಗಳನ್ನು, ವರ್ತನೆಗಳನ್ನು, ಚಟುವಟಿಕೆಗಳನ್ನು, ಇಷ್ಟಗಳನ್ನು, ನಿರಾಕರಣೆಗಳನ್ನು, ಸಹಿಸಲಾರದ ವಿಷಯಗಳನ್ನು ಗಮನಿಸುತ್ತಾ ಹೋದರೆ ನಾವು ಯಾವ ವಿಷಯಗಳಲ್ಲಿ ಗೀಳಿಗರು ಎಂದು ತಿಳಿಯಬಹುದು.

ಮಕ್ಕಳಲ್ಲಾಗಲಿ, ದೊಡ್ಡವರಲ್ಲಾಗಲಿ ಇರುವಂತಹ ಸಾಮಾನ್ಯ ಮಾನಸಿಕ ಸಮಸ್ಯೆ ಈ ಗೀಳುಗೇಡಿತನ. ಹದವಾಗಿ, ಇತಿಮಿತಿಯಲ್ಲಿ ಇದ್ದಾಗ ಅದೇನೂ ಅಷ್ಟು ಗೊತ್ತಾಗುವುದಿಲ್ಲ. ಅತಿಯಾಗಿ ತಮಗೂ ಮತ್ತು ಎಲ್ಲರಿಗೂ ಸಮಸ್ಯೆಯಾಗುವ ಹಂತಕ್ಕೆ ಬರುತ್ತಿರುವಾಗ ಅಪಾಯದ ಮಟ್ಟಕ್ಕೆ ಏರುತ್ತಿದೆ ಎಂದು ತಿಳಿಯಬಹುದು, ಅಣೆಕಟ್ಟಿನಲ್ಲಿ ನದಿಯ ನೀರಿನ ಮಟ್ಟ ಹೆಚ್ಚು ಸಂಗ್ರಹವಾದಂತೆ. ಆಗಲಾದರೂ ಎಚ್ಚೆತ್ತುಕೊಂಡು ತೂಬುಗಳನ್ನು ತೆರೆಯಬಿಟ್ಟರೆ ಒಳಿತು. ಅಪಾಯದ ಮಟ್ಟವನ್ನು ಮೊದಲೇ ಗ್ರಹಿಸಿ, ಒತ್ತಡ ಉಂಟಾಗುವ ಮುನ್ನವೇ ದ್ವಾರಗಳನ್ನು ತೆಗೆದು ಮುನ್ನೆಚ್ಚರಿಕೆಯ ತೆಗೆದುಕೊಳ್ಳುವುದರಿಂದ ನದಿ ಸರಾಗವಾಗಿ ಮತ್ತು ಉಪಯುಕ್ತವಾಗಿ ಹರಿಯುವಂತಾಗಬಹುದು.

ಹೇಗೋ, ಎಂತೋ ತಾಗುವ ಗೀಳುಗಳ ಕಾರಣಗಳಿಂದಲೇ ವ್ಯಕ್ತಿತ್ವದಲ್ಲಿ, ಮಾನಸಿಕ ಮತ್ತು ಭಾವನಾತ್ಮಕ ವಿಷಯಗಳಲ್ಲಿ, ನಡವಳಿಕೆ ಮತ್ತು ಧೋರಣೆಗಳಲ್ಲಿ ದೋಷಗಳ ಸೋಂಕಿಗೆ ವ್ಯಕ್ತಿಗಳು ಒಳಗಾಗುತ್ತಾರೆ. ಗೀಳುಗಳ ಸೋಂಕು ಯಾವಾಗಲಾದರೂ ತಗಲಬಹುದು. ಆದರೆ ಸಣ್ಣ ವಯಸ್ಸಿನಲ್ಲಿಯೇ ಗೀಳು ತಗಲಿರುವ ಗುಣಲಕ್ಷಣಗಳನ್ನು ಗುರುತಿಸಬಹುದು. ಆಗ ಮಕ್ಕಳು ಒಂದು ಹಂತಕ್ಕೆ ದೈಹಿಕವಾಗಿ, ಸಾಂದರ್ಭಿಕವಾಗಿ ಮತ್ತು ಅನಿವಾರ್ಯವಾಗಿಯಾದರೂ ಅಧೀನದಲ್ಲಿ ಇರುವರು. ಹಾಗಾಗಿ ಅವರ ಗೀಳಿನ ಸೋಂಕನ್ನು ನಿವಾರಿಸಲು ಯತ್ನಿಸಬಹುದು. ದೇಹ ಮತ್ತು ಮನಸ್ಸು ರೂಪುಗೊಳ್ಳುವಷ್ಟು ಹದದಲ್ಲಿ ಇರುವುದರಿಂದ ತಜ್ಞರ ಸಲಹೆ ಸೂಚನೆಗಳಂತೆ ಕೆಲವು ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಇಲ್ಲವಾದರೆ ಅವರು ಹದಿಹರೆಯಕ್ಕೆ ಬರುವ ಹೊತ್ತಿಗೆ ದೈಹಿಕವಾಗಿ ಬಲವುಳ್ಳವರಾಗುವುದಲ್ಲದೇ, ಮಾನಸಿಕವಾಗಿ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಮತ್ತು ಆಲೋಚನಾ ಲಹರಿಗಳನ್ನು ಗಟ್ಟಿಗೊಳಿಸಿಕೊಂಡಿರುತ್ತಾರೆ.

ಬಹಳಷ್ಟು ಪೋಷಕರು ಮಾಡುವ ತಪ್ಪೆಂದರೆ, ಮಗು ಬೆಳೆೆಯುತ್ತಾ ಬೆಳೆಯುತ್ತಾ ಸರಿ ಹೋಗುತ್ತದೆ ಎಂದು ಉದಾಸೀನ ಮಾಡುವುದು. ಹಾಗೆಯೇ ಮಗು ಶಾಲೆಗೆ ಹೋದರೆ, ಹೆಚ್ಚಿನ ವಿದ್ಯಾಭ್ಯಾಸಕ್ಕೆಲ್ಲಾ ಹೋದಾಗ ಶಿಸ್ತಿಗೆ ಒಳಪಡುವಂತಹ ಅನಿವಾರ್ಯತೆ ಒದಗಿ ಸರಿಹೋಗುತ್ತಾನೆ/ಳೆ ಎಂದು ಭಾವಿಸುವರು. ಆದರೆ ಅದು ಹಾಗಾಗದು. ನಂತರ ಆ ಮಗುವಿನ ಗೀಳು ರೋಗದ ಲಕ್ಷಣಗಳು ಮತ್ತಷ್ಟು ಬಲವಾಗಿಯೂ ಮತ್ತು ಗಾಢವಾಗಿಯೂ ಕಾಣುತ್ತಾ ಬಂದು, ಕೆಲಸಕ್ಕೆ ಹೋದರೆ ಸರಿ ಹೋಗುವುದು ಎಂದೋ, ಮದುವೆಯಾದರೆ ಸರಿ ಹೋಗುವುದು ಎಂದೋ ಕನವರಿಸುತ್ತಲೇ ಚಿಕಿತ್ಸೆಯನ್ನು ಮಾತ್ರ ತಪ್ಪಿಸುತ್ತಲೇ ಹೋಗುವರು. ಮದುವೆಯಾದ ಮೇಲೂ ಸರಿ ಹೋಗದಿರುವಾಗ, ‘‘ನೀನೇ ನಿನ್ನ ಲೈಫ್ ಪಾರ್ಟನರ್‌ನ್ನು ಸರಿ ಮಾಡಬೇಕು’’ ಎಂದು ಹೊಸ ಸಂಗಾತಿಗೇ ಹೇಳಿಬಿಡುವರು. ಬಾಲ್ಯದಿಂದ ತಾವು ಮಾಡಿರದ್ದನ್ನು ಈಗ ಹೊಸದಾಗಿ ಬಂದಿರುವ ಜೀವನ ಸಂಗಾತಿಗೇ ಹೊಣೆ ಹೊರಿಸಿಬಿಡುವರು. ಮಲ್ಲಮ್ಮನ ಪವಾಡ ಅಲ್ಲಿ ನಡೆಯದಿದ್ದಾಗ ‘‘ಮೊದಲಿನಿಂದಲೂ ಅವನು ಅಥವಾ ಅವಳು ಹಾಗೆಯೇ, ನೀನೇ ಅನುಸರಿಸಿಕೊಂಡುಬಿಡು’’ ಎಂದುಬಿಡುವರು. ಆದರೆ ಇನ್ನೂ ಭರವಸೆಯನ್ನು ಬಿಟ್ಟಿರುವುದಿಲ್ಲ. ಒಂದು ಮಗುವಾದರೆ ಜವಾಬ್ದಾರಿ ಬಂದು ಎಲ್ಲಾ ಸರಿ ಹೋಗುವುದು ಎಂದು ಭಾವಿಸಿ, ಮಗುವನ್ನು ಹೊಂದಲು ಪ್ರೇರೇಪಿಸುವರು. ಆಮೇಲೆ ಮಗುವಾದ ಮೇಲೂ ಯಾವ ಬದಲಾವಣೆಯೂ ಕಾಣದೆ ಸಮಸ್ಯೆಗಳು ಮತ್ತಷ್ಟು ಹೆಚ್ಚಾದಾಗ, ಮಗುವಿನ ಮುಖವನ್ನು ನೋಡಿಕೊಂಡು ಸುಮ್ಮನಿರಿಸುವ ಯತ್ನ ಮಾಡುವರು. ಗೀಳುಗಳನ್ನೂ ಒಳಗೊಂಡಂತೆ ಬಹಳಷ್ಟು ಮಾನಸಿಕ ಸಮಸ್ಯೆಗಳನ್ನು ಹೊರಗಿನಿಂದ ಅಧೀನದಲ್ಲಿಡಲು ಪ್ರಯತ್ನ ಮಾಡುವರು. ಅದರಿಂದ ಹೆಚ್ಚೇನೂ ಪ್ರಯೋಜನವಾಗದು. ವ್ಯಕ್ತಿಗಳಲ್ಲಿ ಆಂತರಿಕವಾಗಿ ಬದಲಾವಣೆ ತರುವಂತಾದರೆ ಮಾತ್ರ ರೋಗಮುಕ್ತವಾಗಲು ಸಾಧ್ಯ.

ಅಡಿಕ್ಷನ್ ಅಥವಾ ವ್ಯಸನ ಮತ್ತು ಗೀಳಿಗೂ ವ್ಯತ್ಯಾಸ ಇರುವುದಾದರೂ ಕೆಲವು ಸಾಮಾನ್ಯ ಲಕ್ಷಣಗಳನ್ನು ಧಾರಾಳವಾಗಿ ಹಂಚಿಕೊಳ್ಳುತ್ತವೆ. ಎರಡೂ ಸಮಸ್ಯೆಗಳಲ್ಲಿ ಕೆಲವು ವಿಷಯಗಳಲ್ಲಿ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಲಾಗದೆ ತುಡಿತಕ್ಕೆ ಒಳಗಾಗಿ ಮನಸ್ಸು ಮಾರು ಹೋಗುವುದಂತೂ ಇದ್ದೇ ಇದೆ.

ಆದರೆ ಗೀಳು ಅಥವಾ ಗೀಳುಗೇಡಿತನ ಎಂದರೇನು? ಗೀಳಿಗರು ಹೇಗಾಗುತ್ತಾರೆ? ತಿಳಿಯುತ್ತಲೇ ನಮ್ಮನ್ನು ನಾವು ನೋಡಿಕೊಳ್ಳಲು ಪ್ರಾರಂಭಿಸೋಣ. ನಂತರ ವ್ಯಸನವನ್ನು ತಿಳಿಯಲು ಸಾಧ್ಯವಾಗುತ್ತದೆ.

ಯಾವುದೋ ಒಂದು ನಡವಳಿಕೆ, ಆಲೋಚನೆ, ಚಟುವಟಿಕೆಗಳು ಪುನರಾವರ್ತಿತವಾಗುತ್ತಲೇ ಇರುವುದು ಅದರ ಮೂಲ ಲಕ್ಷಣ. ಅದು ಪುನರಾವರ್ತಿತವಾಗಬಾರದು ಎಂದು ಯತ್ನಿಸಿದರೂ ತಮ್ಮ ಎಚ್ಚರಿಕೆಯನ್ನು ಮೀರಿ ಅವುಗಳು ಮರುಕಳಿಸುವಂತಾಗುತ್ತಿರುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಗೀಳುಗಳು ಪ್ರಮಾಣದಲ್ಲಿಯೂ, ಪರಿಣಾಮದಲ್ಲಿಯೂ ಮತ್ತು ಪ್ರಭಾವಿಸುವ ತೀವ್ರತೆಯಲ್ಲಿಯೂ ವ್ಯತ್ಯಾಸವಿರುತ್ತವೆ.

ಅನಗತ್ಯವಾಗಿರುವ ಮತ್ತು ಸಂಬಂಧಪಡದೇ ನುಸುಳುವಂತಹ ಆಲೋಚನೆಗಳು ಮತ್ತು ವರ್ತನೆಗಳು ಗೀಳಿಗರಿಗೂ ಮತ್ತು ಜೊತೆಯಲ್ಲಿರುವವರಿಗೂ ಗೊಂದಲ ಮಾಡುತ್ತಾ ತೊಂದರೆಗೀಡು ಮಾಡುತ್ತವೆ. ಇದರಿಂದ ಮಾನಸಿಕವಾಗಿ ವ್ಯಕ್ತಿಗಳು ಬಳಲುವುದಲ್ಲದೆ ಒತ್ತಡ ಮತ್ತು ಆತಂಕಗಳಿಗೆ ಈಡಾಗುವರು. ಎಷ್ಟೋ ಬಗೆಯ ತೊಂದರೆಗಳನ್ನು ಅನುಭವಿಸಿದರೂ ಅದರಿಂದ ಹೊರಕ್ಕೆ ಬರಲು ಸಾಧ್ಯವೇ ಇಲ್ಲವೇನೋ ಎಂಬಂತೆ ಮತ್ತೆ ಮತ್ತೆ ಅವರಿಗೇ ಅರಿವಿಲ್ಲದಂತೆ ಆಲೋಚನೆಗಳು ಮತ್ತು ವರ್ತನೆಗಳು ಮರುಕಳಿಸಿಬಿಡುತ್ತವೆ.

ಗೀಳುಗಳಲ್ಲಿ ಪದೇ ಪದೇ ಶುಚಿಗೊಳಿಸುವ, ಎಣಿಸಿ ಪರೀಕ್ಷಿಸುವಂತಹ ಹೊರಗಿನ ಚಟುವಟಿಕೆಗಳಿಂದ ಹಿಡಿದು, ಧಾರ್ಮಿಕ ಆಚರಣೆಗಳ ಮೂಲಕ ಹಾಯುತ್ತಾ, ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಇತರರಿಗೆ ಹಾನಿ ಮಾಡಿ ಅಪರಾಧಿಗಳನ್ನಾಗಿಸುವವರೆಗೂ ನಾನಾ ಬಗೆಗಳಿವೆ.

ಯಾವುದೇ ಬಗೆಯ ಗೀಳುಗಳಿಂದಾಗಲಿ, ವ್ಯಸನಗಳಿಂದಾಗಲಿ ಹೊರ ಬರಲು ಸಾಧ್ಯವಿದೆ. ಆದರೆ ಗೀಳಿಗರೂ ಮತ್ತು ಅವರ ಸಹಜೀವಿಗಳಿಬ್ಬರಿಗೂ ಇಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳಿರುತ್ತವೆ. ಒಟ್ಟಿನಲ್ಲಿ ತಮಗೆ ಎಂತಹದ್ದೋ ಒಂದು ಗೀಳು ಇದೆ ಎಂದು ಅರಿವಿಗೆ ಬಂದು, ಅದನ್ನು ಸಮರ್ಥಿಸಿಕೊಳ್ಳದೆ, ಅದರಿಂದ ಗುಣಮುಖರಾಗಬೇಕೆಂದು ನಿರ್ಧರಿಸುವುದೇ ಮೊದಲ ಹೆಜ್ಜೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು