ಕ್ರೌರ್ಯದ ನಡುವೆ ತೊಟ್ಟಿಕ್ಕುವ ಬದುಕಿನ ಒಸರು 'ಟೋಬಿ’

Update: 2023-08-26 09:50 GMT
Editor : Thouheed | By : ಸತ್ಯಾ

‘ಸೈತಾನ’ನನ್ನು ನಂಬಿದರೆ ದೇವರಂತೆ ಕಾಯ್ತಾನೆ, ಆದರೆ ಉಸಿರು ಗಟ್ಟಿ ಸಾಯೋ ತನಕ....

ಹೌದು.. ಅಷ್ಟೇ ಅಷ್ಟೇ. ಸೈತಾನನಿಂದ ಮಾರಿಯ ದಾರಿಯೇ ‘ಟೋಬಿ’!

ಹೆತ್ತವರೇ ಇಲ್ಲದೆ, ಹೆಸರೂ ಗೊತ್ತಿಲ್ಲದೆ ಮೂಗ ಬಾಲಕ ಅಸಹಾಯಕತೆಯ ವಿರುದ್ಧ ಸೆಟೆದು ನಿಲ್ಲಲು ತನ್ನೊಳಗಿನ ಅಸಹನೆಯನ್ನೇ ಆಯುಧವನ್ನಾಗಿಸಿ ‘ಸೈತಾನ’ನಾಗಿ ಸಾಗುತ್ತಾ, ಕೊನೆಗೆ ಕ್ರೌರ್ಯದ ಕಟ್ಟೆಯೊಡೆದಾಗ ‘ಮಾರಿ’ಯಾಗಿ ರೂಪಾಂತರಗೊಳ್ಳುವ ಸರಳ, ಆದರೆ ಥಿಯೇಟರ್‌ನಲ್ಲಿ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಬಲ್ಲ ಕಥಾ ಹಂದರವೇ ‘ಟೋಬಿ’!

‘ಸೈತಾನ’ನನ್ನು ನಂಬಿದರೆ ದೇವರಂತೆ ಕಾಯ್ತಾನೆ, ಉಸಿರು ಗಟ್ಟಿ ಸಾಯೋ ತನಕ! ಎಂಬ ಚಿತ್ರದ ಆರಂಭದಲ್ಲಿ ಪಾತ್ರಧಾರಿ ಚರ್ಚ್ ಫಾದರ್‌ನಿಂದ ಹೇಳಲ್ಪಡುವ ಮಾತು ಚಿತ್ರದ ಸಂಪೂರ್ಣ ಕಥಾಹಂದರವನ್ನು ಪೋಣಿಸುತ್ತಾ ಸಾಗುತ್ತದೆ. ಸೈತಾನನೂ ತನ್ನವರ ರಕ್ಷಣೆ ಮಾಡಬಲ್ಲ. ಆದರೆ, ಆತ ದೇವರಾಗಲಾರ ಎಂಬ ನೈಜ ಸಂದೇಶ ‘ಟೋಬಿ’ಯದ್ದು!

ಚಿತ್ರ ನಿರ್ದೇಶಕ, ಮುಖ್ಯ ಪಾತ್ರಧಾರಿ ರಾಜ್ ಬಿ. ಶೆಟ್ಟಿಯವರು ಚಿತ್ರದಲ್ಲಿ ಟೋಬಿಯಾಗಿ, ಮಾರಿಯಾಗಿ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಕರೆತರುವಲ್ಲಿ ಈ ಬಾರಿಯೂ ಯಶಸ್ವಿಯಾಗುವುದು ಗ್ಯಾರಂಟಿ. ಸೌಂಡ್ಸ್, ಗ್ರಾಫಿಕ್ಸ್ ಇಫೆಕ್ಟ್ ನ ಅಬ್ಬರವಿಲ್ಲದೆಯೂ, ಚಿತ್ರದ ಜೀವಾಳ ನಾಯಕ ನಟನೇ ವಿಲನ್ ಆಗಿ ‘ಡಯಲಾಗೇ’ ಇಲ್ಲದೆಯೂ ಮನರಂಜನೆ ಸಾಧ್ಯ ಎಂಬುದನ್ನು ತೋರಿಸಲೆತ್ನಿಸಿರುವ ‘ಟೋಬಿ’ಯನ್ನು ನೋಡಬೇಕಾದರೆ ಥಿಯೇಟರ್‌ನತ್ತ ಹೆಜ್ಜೆ ಹಾಕಬೇಕಾಗುತ್ತದೆ.

ಚಿತ್ರದುದ್ದಕ್ಕೂ ಕ್ರೌರ್ಯ, ಮಚ್ಚು, ಲಾಂಗ್ ಮೇಳೈಸಿದೆ ಎಂದೆನಿಸಿದರೂ ಇಲ್ಲಿ ‘ಟೋಬಿ’ ಸೈತಾನನಾಗಿರುವ ಕಾರಣ ಅತಿಯಾದ ಕ್ರೌರ್ಯವೂ ಸಹ್ಯವಾಗಬೇಕಾಗುತ್ತದೆ. ಅಸಹಾಯಕ, ಅನಾಥನ ‘ಬದುಕು’ ಕಟ್ಟಿಕೊಳ್ಳಲು ಕ್ರೌರ್ಯದ ಬೆನ್ನು ಹತ್ತಿ ಸಾಗುವ ಸರಳ ಕಥೆಯನ್ನು ಸರಳವಾಗಿ ತೆರೆಯ ಮೇಲಿಳಿಸುವಲ್ಲಿ ರಾಜ್ ಬಿ. ಶೆಟ್ಟಿ ಅವರ ನಿರ್ದೇಶನ ಸಫಲವಾಗಿದೆ. ಚಿತ್ರ ಕಥೆ ಹಾಗೂ ಪ್ರಮುಖ ಪಾತ್ರ(ಟೋಬಿ, ಜೆನ್ನಿ)ಗಳೇ ಚಿತ್ರದ ಹೈಲೈಟ್ಸ್ ಆಗಿದ್ದು, ಕರಾವಳಿಯ ಬದುಕು, ನಂಬಿಕೆಯ ಜತೆಗೆ ಚಿತ್ರದ ಉಳಿದ ಪಾತ್ರಗಳೆಲ್ಲವೂ ತೆರೆಯ ಮೇಲೆ ಮೂಡಿ ಮರೆಯಾಗುತ್ತವೆ.

ಚಿತ್ರದಲ್ಲಿ ಮಿತಿ ಮೀರಿದ ಕ್ರೌರ್ಯದ ನಡುವೆಯೂ ಪ್ರೀತಿ, ಸ್ನೇಹ, ಮಮತೆಯ ತಲ್ಲಣವಿದೆ. ಬಡತನ, ಅಸಹಾಯಕ ಬದುಕಿನ ಜತೆಗೆ ತನ್ನವರಿಗಾಗಿನ ತ್ಯಾಗ, ಬಲಿದಾನದ ಸಂದೇಶವಿದೆ. ಸೈತಾನನಲ್ಲೂ ಮಗುವಿನ ಮನಸ್ಸಿರುತ್ತದೆ. ತನಗಾರೂ ಇಲ್ಲವೆಂಬ ಅನಾಥನಿಗೆ ಅನಾಥ ‘ಬದುಕ’ನ್ನು ತನ್ನದಾಗಿಸುವ ದೊಡ್ಡತನ, ಜತೆಗೆ ಆ ‘ಬದುಕ’ಲ್ಲೇ ತನ್ನತನವನ್ನು ಕಂಡುಕೊಳ್ಳಲೆತ್ನಿಸುವ ನಡುವೆಯೂ ಸೈತಾನ ಸೈತಾನನಾಗಿಯೇ ಉಳಿಯುತ್ತಾನೆಂಬ ಚಿತ್ರ ಕಥೆಯ ಟೋಬಿ ಪಾತ್ರ ಪ್ರೇಕ್ಷಕರನ್ನು ಸೆಳೆಯುತ್ತದೆ.

ನಿರ್ದೇಶಕ ರಾಜ್ ಬಿ. ಶೆಟ್ಟಿಯವರು ಈಗಾಗಲೇ ಹೇಳಿರುವಂತೆ ಈ ಚಿತ್ರ ಪಕ್ಕಾ ಕಮರ್ಷಿಯಲ್. ಹಾಗಿದ್ದರೂ ಥಿಯೇಟರ್‌ನತ್ತ ಪ್ರೇಕ್ಷಕರು ಬರಬೇಕು, ಮನರಂಜನೆ ಪಡೆಯಬೇಕು ಎಂಬ ಮಾತಿಗೆ ಪೂರಕವಾಗಿ ಪ್ರೇಕ್ಷಕನನ್ನು ಸುಮಾರು ಎರಡೂವರೆ ಗಂಟೆವರೆಗೆ ಥಿಯೇಟರ್‌ನಲ್ಲಿ ಹಿಡಿದಿಟ್ಟುಕೊಳ್ಳುವ ಪಾತ್ರಾಭಿನಯವನ್ನು ರಾಜ್ ಬಿ. ಶೆಟ್ಟಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ಹಿಂದಿನ ತಮ್ಮ ಚಿತ್ರಗಳ ಪಾತ್ರಗಳಂತೆ ‘ಟೋಬಿ’ಯಾಗಿ ಮೈಮೇಲೆ ಪಾತ್ರವನ್ನು ಆವಾಹನೆ ಮಾಡಿಕೊಂಡಂತೆ ನಟಿಸಿದ್ದಾರೆ. ಇನ್ನು ಸೈತಾನ ‘ಟೋಬಿ’ಯಲ್ಲಿ ಮಮತೆಯನ್ನು ಜಾಗೃತಗೊಳಿಸುವ ‘ಜೆನ್ನಿ’ ಪಾತ್ರದಲ್ಲಿ ಚೈತ್ರಾ ಆಚಾರ್ ನಟನೆ ‘ವಾವ್’ ಆಗಿದೆ. ಇನ್ನೋರ್ವ ನಟಿ ಸಂಯುಕ್ತ ಹೊರನಾಡು ಹಾಗೂ ನೆಗೆಟಿವ್ ಪಾತ್ರದ ರಾಜ್ ದೀಪಕ್ ಶೆಟ್ಟಿ ಅವರೂ ನ್ಯಾಯ ಒದಗಿಸಿದ್ದಾರೆ. ಬರಹಗಾರ ಟಿ.ಕೆ. ದಯಾನಂದ್ ಅವರ ಚಿತ್ರಕಥೆ ಮಾತ್ರ ಸಖತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸತ್ಯಾ

contributor

Similar News

ಸ್ಮಗ್ಲರ್