ಹಾಸ್ಯದ ಜೊತೆ ಮನುಷ್ಯತ್ವದ ಭಾಷ್ಯ
ಬಾಲು ಬಾಲ್ಯದಲ್ಲೇ ಗಾಯಕನಾಗಬೇಕು ಎಂದುಕೊಂಡವನು. ಆದರೆ ಅದೇ ಸಮಯದಲ್ಲೇ ಮನೆ ಕುಸಿತದಿಂದ ಮನೆಮಂದಿಯನ್ನೆಲ್ಲ ಕಳೆದುಕೊಂಡು ಅನಾಥನಾಗುತ್ತಾನೆ. ಯುವಕನಾದ ಮೇಲೆ ಆರ್ಕೆಸ್ಟ್ರಾಕ್ಕೆ ಸೀಮಿತವಾಗಿದ್ದ ಆತನ ಗಾಯನ ಪ್ರತಿಭೆಯು ರಿಯಾಲಿಟಿ ಶೋ ನಿರೂಪಕಿಯ ಮೇಲಿನ ಆಸಕ್ತಿಯಿಂದಾಗಿ ಇನ್ನಷ್ಟು ಬೆಳೆಯುತ್ತದೆ. ವಾಹಿನಿಗೆ ಟಿಆರ್‌ಪಿ ತರುವ ಗಾಯಕನಾಗಿ ಆಯ್ಕೆಯಾಗಲು ಅಂಧಗಾಯಕನಂತೆ ನಟಿಸುತ್ತಾನೆ! ಆದರೆ ಈ ನಟನೆ ಆತನನ್ನು ಮುಂದೆ ಎಲ್ಲಿಯವರೆಗೆ ಕೊಂಡೊಯ್ಯುತ್ತದೆ ಎನ್ನುವುದನ್ನು ಕುತೂಹಲಕಾರಿಯಾಗಿ ತೋರಿಸಿರುವ ಚಿತ್ರವೇ ಸಖತ್.
ಆರಂಭದಲ್ಲಿ ರಿಯಾಲಿಟಿ ಶೋಗಳ ರಿಯಾಲಿಟಿ ಬಗ್ಗೆ ಮತ್ತು ಅವುಗಳ ಕುರಿತಾಗಿರುವ ಆರೋಪಗಳ ಬಗ್ಗೆ ಒಂದಷ್ಟು ವ್ಯಂಗ್ಯ, ಹಾಸ್ಯ ರೂಪದ ದೃಶ್ಯಗಳಿವೆ. ಆದರೆ ಅದು ಪ್ರೇಕ್ಷಕರಿಗೆ ಹೊಸ ವಿಚಾರವೆನಿಸುವುದಿಲ್ಲ. ಮಾತ್ರವಲ್ಲ, ಆ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಪ್ರತಿಭಾವಂತ ನಟರಾದ ಕುರಿ ಪ್ರತಾಪ್ ಮತ್ತು ಧರ್ಮಣ್ಣ ಅವರನ್ನು ಹೆಚ್ಚು ಬಳಸಿಕೊಂಡಂತೆ ಕಾಣಿಸುವುದಿಲ್ಲ. ಆದರೆ ಬಾಲು ಅಂಧನ ವೇಷದಲ್ಲಿರುವಾಗಲೇ ಕೊಲೆಯೊಂದನ್ನು ನೋಡುತ್ತಾನೆ. ಅದರ ಸಾಕ್ಷಿಯಾಗಿ ಕೋರ್ಟ್ ಮೆಟ್ಟಿಲೇರುವ ಬಾಲು ಆ ಕೊಲೆಗೆ ಕಾರಣಕರ್ತೃಗಳಾದವರಿಗೆ ಶಿಕ್ಷೆ ಕೊಡಿಸಲು ಪಾಡು ಪಡುತ್ತಾನೆ. ಆತನ ಪ್ರಯತ್ನ ಮತ್ತು ಬುದ್ಧಿವಂತಿಕೆಯ ನಡವಳಿಕೆಗಳು ಚಿತ್ರವನ್ನು ಆಸಕ್ತಿಕರವಾದ ಕ್ಲೈಮ್ಯಾಕ್ಸ್ ಕಡೆಗೆ ಸಾಗಿಸುತ್ತದೆ.
ಒಂದು ಕೊಲೆಯನ್ನು ಅಪಘಾತ ಎನ್ನುವಂತೆ ಚಿತ್ರಿಸುವ ಅಪರಾಧಿಗಳ ತಂತ್ರವನ್ನು ಬಯಲಿಗೆಳೆಯುವುದೇ ಚಿತ್ರದ ಮುಖ್ಯ ಎಳೆ. ಆದರೆ ಅದನ್ನು ತೋರಿಸುವ ನಡುವೆ ರಿಯಾಲಿಟಿ ಶೋ, ಎಪಿಸೋಡ್ ಮಧ್ಯದಲ್ಲಿ ಎಳೆದಾಡಿದಂತೆ ಅನಿಸುತ್ತದೆ. ಆದರೆ ಕೋರ್ಟ್ ಒಳಗೆ ನಡೆಯುವ ಡ್ರಾಮ ಸನ್ನಿವೇಶಗಳು ಚಿತ್ರಕ್ಕೆ ಪೂರಕವಾದ ಕತೆ ಮತ್ತು ಹಾಸ್ಯವನ್ನು ಒದಗಿಸಿದೆ. ನ್ಯಾಯಾಧೀಶೆಯಾಗಿ ಮಾಳವಿಕಾ ಅವಿನಾಶ್ ಕಾಣಿಸಿಕೊಂಡಿದ್ದರೆ ವಕೀಲರಾಗಿ ರಂಗಾಯಣ ರಘು ಅವರ ನಟನೆ ವೈವಿಧ್ಯಮಯವೆನಿಸುತ್ತದೆ. ಸಾಮಾನ್ಯವಾಗಿ ನೋಟದಲ್ಲಿ ಹೆಚ್ಚೇನೂ ಆಕರ್ಷಕವೆನಿಸದ ಕೋರ್ಟ್ ಕೂಡ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕಣ್ಣುಗಳಲ್ಲಿ ಮನೋಹರವಾಗಿ ಮೂಡಿದೆ.
ಚಿತ್ರದಲ್ಲಿ ನಾಯಕ ಬಾಲು ಒಬ್ಬ ಹುಡುಗಿಗಾಗಿ ಅಂಧನಂತೆ ನಟಿಸುತ್ತಾನೆ. ಆದರೆ ಮತ್ತೋರ್ವ ಹುಡುಗಿ ಅಂಧೆಯಾಗಿದ್ದುಕೊಂಡೇ ನಾಯಕನ ಕಣ್ಣು ತೆರೆಸುತ್ತಾಳೆ. ಬಾಲುವಾಗಿ ಗಣೇಶ್ ತಮ್ಮ ಎಂದಿನ ಲವಲವಿಕೆಯ ನಟನೆ ನೀಡಿದ್ದಾರೆ. ‘‘ನಿಜಕ್ಕೂ ಕಣ್ಣು ಕಾಣುತ್ತಿಲ್ಲ..’’ ಎಂದು ರೋದಿಸುವ ಕೆಲವೇ ನಿಮಿಷಗಳೇ ಸಾಕು ಅವರ ನಟನಾಶಕ್ತಿಯನ್ನು ಅರ್ಥ ಮಾಡಿಸಲು. ನಿರ್ದೇಶಕ ಸುನಿಯ ಶಕ್ತಿಯೇ ಸಂಭಾಷಣೆ. ಅದು ಇಲ್ಲಿಯೂ ಚೆನ್ನಾಗಿ ಪ್ರಯೋಗಗೊಂಡಿದೆ. ರಿಯಾಲಿಟಿ ಶೋ ನಿರ್ದೇಶಕನಾಗಿ ಗಿರೀಶ್ ಶಿವಣ್ಣನಿಗೆ ನೀಡಿರುವ ಉತ್ತಮ ಅವಕಾಶಕ್ಕಾಗಿ ಕೂಡ ನಿರ್ದೇಶಕರು ಪ್ರಶಂಸಾರ್ಹರು. ಕೊಲೆಗೆ ಒಳಗಾಗುವ ನಟ ರಾಮಕೃಷ್ಣ ಮತ್ತು ಅವರ ಪುತ್ರನಾಗಿ ನಟಿಸಿರುವ ಉತ್ಪಲ್ ಪಾತ್ರಗಳು ಕಡಿಮೆ ದೃಶ್ಯಗಳಲ್ಲಿ ಕಾಣಿಸಿದರೂ ಚಿತ್ರದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ. ಗಣೇಶ್ ಅವರ ಬಾಲ್ಯದ ಪಾತ್ರದಲ್ಲಿ ಪುತ್ರ ವಿಹಾನ್ ಬಾಲನಟನಾಗಿ ಭರವಸೆ ಮೂಡಿಸಿದ್ದಾನೆ.
ಇಬ್ಬರು ನಾಯಕಿಯರ ಪೈಕಿ ನವನಟಿ ಸುರಭಿಯ ನಟನೆ ಆಕೆಗೆ ಮತ್ತಷ್ಟು ಅವಕಾಶಗಳನ್ನು ತಂದುಕೊಟ್ಟರೆ ಅಚ್ಚರಿ ಇಲ್ಲ. ನಿಶ್ವಿಕಾ ನಾಯ್ಡು ಅಂಧೆಯ ಪಾತ್ರಕ್ಕೂ ಅಂದ ತಂದುಕೊಟ್ಟಿದ್ದಾರೆ. ಗಂಭೀರ ಸನ್ನಿವೇಶವೊಂದರಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಅಗತ್ಯದ ಬಗ್ಗೆ ಒತ್ತು ನೀಡುವ ಭಾಷಣವಿದೆ. ಭಾಷಣಕಾರರಾಗಿ ನಟಿಸಿರುವ ಚಿತ್ರದ ನಿರ್ಮಾಪಕ ವೆಂಕಟ್ ಅವರ ಬಾಯಲ್ಲಿ ಪದೇಪದೇ ‘ಮಕ್ಕಲು’ ಎನ್ನುವ ಉಚ್ಚಾರಣೆ ಹೊರಬಂದಿರುವುದು ವಿಪರ್ಯಾಸ! ‘‘ಬಾಲು ಕಣ್ಣಿಲ್ಲದಂತೆ ನಟಿಸಬಲ್ಲ; ಆದರೆ ಮನುಷ್ಯತ್ವ ಇರದಂತೆ ಬದುಕಲಾರ’’ ಎಂದು ನಾಯಕನ ಕುರಿತಾಗಿ ಸಾಧುಕೋಕಿಲ ಹೇಳುವ ಸಂಭಾಷಣೆಗೆ ಪೂರಕವಾಗಿ ಈ ಚಿತ್ರದಲ್ಲಿ ಹಾಸ್ಯ, ಪ್ರೇಮದ ಜೊತೆಯಲ್ಲೇ ಒಂದು ಮಾನವೀಯ ಮೌಲ್ಯ ಸಾರುವ ಕತೆ ಇದೆ. ಹಾಗಾಗಿ ಅವರವರ ಆಸಕ್ತಿಗೆ ಅನುಗುಣವಾಗಿ ಆಸ್ವಾದನೆ ಒದಗಿಸಬಲ್ಲ ಚಿತ್ರವಾಗಿ ಸಖತ್ ಕಾಣಿಸುತ್ತದೆ.
ತಾರಾಗಣ: ಗಣೇಶ್, ನಿಶ್ವಿಕಾ ನಾಯ್ಡು, ಸುರಭಿ
ನಿರ್ದೇಶನ: ಸುನಿ
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್