4 ಕಿಲೋ ಮೀಟರ್ ಪ್ರಯಾಣಕ್ಕೆ ರೂ. 4000 ತೆತ್ತ ಉಬರ್ ಪ್ರಯಾಣಿಕ: ಸಿಇಒ ಸ್ಪಷ್ಟನೆ ಏನು?
ಸವಾರಿ ಸೇವೆ ನೀಡುವ ಕಂಪನಿಗಳು, ಅದರಲ್ಲೂ ಪ್ರಮುಖವಾಗಿ ಉಬರ್, ಪ್ರಯಾಣಿಕರ ಬೆಲೆ ಏರಿಕೆ ಕಾರಣದಿಂದ ಸದಾ ಟೀಕೆಗೆ ಒಳಗಾಗುತ್ತಲೇ ಇದೆ. ಈ ಸಾರಿಗೆ ಆ್ಯಪ್ ವಿಧಿಸುವ ದುಬಾರಿ ದರದ ಬಗ್ಗೆ ವಿಶ್ವದ ಎಲ್ಲೆಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಕೇವಲ ನಾಲ್ಕು ಕಿಲೋಮೀಟರ್ ಪ್ರಯಾಣಕ್ಕಾಗಿ ಉಬರ್ ಬಳಕೆದಾರರೊಬ್ಬರು ಸುಮಾರು 52 ಡಾಲರ್ ಅಂದರೆ ರೂ. 4294 ರೂಪಾಯಿಗಳನ್ನು ತೆತ್ತ ಪ್ರಕರಣ ಸಿಇಒ ದಾರಾ ಕೊಸ್ರೋವ್‍ಶಾಹಿ ಜತೆ ಬಳಕೆದಾರರ ನೇರ ಸಂಘರ್ಷಕ್ಕೆ ಕಾರಣವಾಗಿದೆ.
ಚಾಲಕನ ಟಿಪ್ಸ್ ಸೇರಿದಂತೆ 4 ಕಿಲೋಮೀಟರ್ ಪ್ರಯಾಣಕ್ಕೆ 52 ಡಾಲರ್ ತೆತ್ತ ಪ್ರಕರಣ ವರದಿಯಾಗಿದ್ದು ನ್ಯೂಯಾರ್ಕ್‍ನ ಮ್ಯಾನ್‍ಹಾಟನ್‍ನಿಂದ.
ಉಬರ್ ಸಿಇಓ ಜತೆಗಿನ ಸಂದರ್ಶನದಲ್ಲಿ ಸ್ಟೀವನ್ ಲೆವಿ ಎಂಬುವವರು ಈ ಪ್ರಕರಣವನ್ನು ಬೆಳಕಿಗೆ ತಂದು ಅಂದಾಜು 4 ಕಿಲೋಮೀಟರ್ ಪ್ರಯಾಣಕ್ಕೆ ಎಷ್ಟು ದರ ಇರಬಹುದು ಎಂದು ಅಂದಾಜಿಸುವಂತೆ ಕೇಳಿದರು. ಈ ಪಾವತಿ ರಸೀದಿ ನೋಡಿ ಬೆಚ್ಚಿಬೀಳುವ ಸರದಿ ಸಿಇಒ ಅವರದ್ದಾಗಿತ್ತು. "ಓ ಮೈ ಗಾಡ್..ವಾವ್" ಎಂಬ ಉದ್ಗಾರ ಕೇಳಿ ಬಂತು. ಅವರು ಊಹಿಸಿದ್ದಕ್ಕಿಂತ ಆ ದರ ದುಪ್ಪಟ್ಟು ಆಗಿತ್ತು.
ಆದರೂ ಹಣದುಬ್ಬರದಿಂದ ಕಂಗೆಟ್ಟಿರುವ ಆರ್ಥಿಕತೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಉಬರ್ ಸಿಇಓ ಪ್ರತಿಪಾದಿಸಿದರು. ಪ್ರತಿಯೊಂದೂ ದುಬಾರಿಯಾಗಿದೆ ಎಂದು ಅವರು ಹೇಳಿದ್ದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಹಣದುಬ್ಬರದ ಜತೆಗೆ ಹೆಚ್ಚಿದ ಅವಧಿ ಮತ್ತು ಶ್ರಮದಿಂದಾಗಿ ಬೆಲೆ ಏರಿಕೆ ಅನಿವಾರ್ಯ ಎಂಬ ಸಮರ್ಥನೆ ಅವರದ್ದು.
ಕೋವಿಡ್ ಸಾಂಕ್ರಾಮಿಕ ಸಂದರ್ಭದ ಬಳಿಕ ಚಾಲಕರ ಕೊರತೆ ಎದ್ದುಕಾಣುತ್ತಿದೆ ಎಂದು ಹೇಳಿಕೊಂಡರು. ಆದರೆ 2022ರ ಆಗಸ್ಟ್ ನಲ್ಲಿ ಈ ಆ್ಯಪ್‍ನಲ್ಲಿ ನೋಂದಾಯಿಸಿಕೊಂಡ ಚಾಲಕರ ಸಂಖ್ಯೆ ದಾಖಲೆ 50 ಲಕ್ಷ. ಹೀಗೆ ಫೋಬ್ರ್ಸ್ ವರದಿಯಲ್ಲಿ ಬಹಿರಂಗಪಡಿಸಲಾದ ಅಂಕಿ ಅಂಶಕ್ಕೂ ಸಿಇಒ ಹೇಳಿಕೆಗೂ ತಾಳೆಯಾಗುವುದಿಲ್ಲ. ವರದಿಯ ಪ್ರಕಾರ ಅಮೆರಿಕದಲ್ಲಿ ಉಬರ್ ಪ್ರಯಾಣ ದರ 2018ರಿಂದ 2022ರ ಅವಧಿಯಲ್ಲಿ ದರ ಏರಿಕೆ ಹಣದುಬ್ಬರದ ನಾಲ್ಕು ಪಟ್ಟು ಆಗಿದೆ. ನಾಲ್ಕು ವರ್ಷದ ಅವಧಿಯಲ್ಲಿ ಪ್ರಯಾಣದರ ಶೇಕಡ 83ರಷ್ಟು ದುಬಾರಿಯಾಗಿದೆ.
ಭಾರತ ಕೂಡಾ ಈ ದುಬಾರಿ ಬೆಲೆ ಏರಿಕೆಗೆ ಹೊರತಲ್ಲ. ಹಬ್ಬ ಹಾಗೂ ಮಳೆಯ ಸಂದರ್ಭದಲ್ಲಿ 5-6 ಕಿಲೋಮೀಟರ್ ಪ್ರಯಾಣಕ್ಕೆ 300 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಬಳಕೆದಾರರು ದೂರುತ್ತಿದ್ದಾರೆ.