ವಜಾಗೊಳಿಸಿದ ಒಂದೇ ವಾರದಲ್ಲಿ ಸ್ಯಾಮ್ ಆಲ್ಟ್ ಮನ್ ರನ್ನು ಸಿಇಒ ಹುದ್ದೆಗೆ ವಾಪಸ್ ಕರೆ ತಂದ OpenAI
ಕ್ಯಾಲಿಫೋರ್ನಿಯಾ: ಸ್ಯಾಮ್ ಆಲ್ಟ್ ಮನ್ ಅವರು ಸಿಇಒ ಆಗಿ ಸಂಸ್ಥೆಗೆ ಮರಳಲಿದ್ದಾರೆ ಎಂದು ಚಾಟ್ ಜಿಪಿಟಿಯನ್ನು ಸೃಷ್ಟಿಸಿದ್ದ, ಮೈಕ್ರೊಸಾಫ್ಟ್ ಬೆಂಬಲಿತ ಸಂಸ್ಥೆ OpenAI ಬುಧವಾರ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ವಾರದ ಹಿಂದಷ್ಟೆ ಅವರನ್ನು ಸಂಸ್ಥೆಯಿಂದ ಹೊರ ಹಾಕಿದ್ದ ಮಂಡಳಿಯ ಮೇಲೆ ಹೂಡಿಕೆದಾರರು ಹಾಗೂ ಉದ್ಯೋಗಿಗಳು ತೀವ್ರ ಒತ್ತಡ ಹೇರಿದ್ದರಿಂದ ಅವರನ್ನು ಮರಳಿ ಸಂಸ್ಥೆಗೆ ಕರೆ ತರಲಾಗಿದೆ ಎಂದು ಹೇಳಲಾಗಿದೆ cnbc.com ವರದಿ ಮಾಡಿದೆ.
ಸಂಸ್ಥೆಯ ಮಂಡಳಿಗೆ ಮಾಜಿ ಮಾರಾಟ ವಲಯದ ಸಹ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರೆಟ್ ಟೇಲರ್ ಹಾಗೂ ಮಾಜಿ ಖಜಾಂಚಿ ಕಾರ್ಯದರ್ಶಿ ಲ್ಯಾರಿ ಸಮ್ಮರ್ಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೈಕ್ರೊಸಾಫ್ಟ್ ಬೆಂಬಲಿತ ನವೋದ್ಯಮವಾದ OpenAI ಹೇಳಿದೆ. ಬ್ರೆಟ್ ಟೇಲರ್ ಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಲಿದ್ದರೆ, ಪ್ರಶ‍್ನೋತ್ತರ ನವೋದ್ಯಮವಾದ ಕೋರಾದ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆ್ಯಡಮ್ ಡಿ ಏಂಜೆಲೊ ಮಂಡಳಿಯ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಸೋಮವಾರ, ಸಹ ಸಂಸ್ಥಾಪಕ ಹಾಗೂ ಮಂಡಳಿಯ ಸದಸ್ಯ ಇಲ್ಯಾ ಸುತ್ಸ್ ಕೆವರ್ ಸೇರಿದಂತೆ ನೂರಾರು ಉದ್ಯೋಗಿಗಳು ಪತ್ರವೊಂದಕ್ಕೆ ಸಹಿ ಮಾಡಿ, ಒಂದು ವೇಳೆ ಮಂಡಳಿಯು ರಾಜಿನಾಮೆ ನೀಡಿ, ಆಲ್ಟ್ ಮನ್ ರನ್ನು ಸಂಸ್ಥೆಗೆ ಮರಳಿ ಕರೆ ತರದಿದ್ದರೆ, ಮೈಕ್ರೊಸಾಫ್ಟ್ ನಲ್ಲಿ ಕೆಲಸ ಮಾಡಲು ಬಹುತೇಕ ಸಿಬ್ಬಂದಿ ಅವರೊಂದಿಗೆ ತೆರಳಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು.
ಸೋಮವಾರ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಮೈಕ್ರೋಸಾಫ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯ ನಾದೆಲ್ಲ, ಆಲ್ಟ್ ಮನ್ ಹಾಗೂ OpenAIನ ಸಹ ಸಂಸ್ಥಾಪಕ ಗ್ರೇಗ್ ಬ್ರಾಕ್ ಮನ್ ನೂತನ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವನ್ನು ಸ್ಥಾಪಿಸಲು ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸೇರ್ಪಡೆಯಾಗಲಿದ್ದಾರೆ ಎಂದು ಪ್ರಕಟಿಸಿದ್ದರು.