ಉದ್ಯೋಗ ಮೀಸಲಾತಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಕನ್ನಡಿಗರ ಕ್ಷಮೆಯಾಚಿಸಿದ Phonepe ಸಿಇಒ

Update: 2024-07-21 17:02 GMT

Photo credit: X/sameernigam

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧ ಹೇಳಿಕೆ ನೀಡಿದ್ದ ಫೋನ್ ಪೇ (Phonepe) ಸಿಇಒ ಸಮೀರ್ ನಿಗಮ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಇಂದು ಭೇಷರತ್‌ ಕ್ಷಮೆಯಾಚಿಸಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ್ದ ಸಮೀರ್ ನಿಗಮ್, ಸರ್ಕಾರದ ನಿರ್ಧಾರವು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದರು. ಸಮೀರ್ ನಿಗಮ್ ಹೇಳಿಕೆಗೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಂದು ಎಕ್ಸ್‌ನಲ್ಲಿ ಫೋನ್ ಪೇ ಸಂಸ್ಥೆಯ ಅಧಿಕೃತ ಖಾತೆಯಿಂದ ಪೋಸ್ಟ್‌ ಮಾಡಿ ಕ್ಷಮೆ ಕೋರಿದ್ದಾರೆ. 

"ಫೋನ್ ಪೇ ಬೆಂಗಳೂರಿನಲ್ಲಿ ಹುಟ್ಟಿದೆ. ಕಳೆದೊಂದು ದಶಕದಲ್ಲಿ ಫೋನ್‌ಪೇ ಬೆಂಗಳೂರಿನಿಂದ ಭಾರತದ ಉದ್ದಗಲಕ್ಕೂ ವಿಸ್ತರಿಸಿದೆ. ಈ ಮೂಲಕ ದೇಶದ 55 ಕೋಟಿಗೂ ಹೆಚ್ಚಿನ ಜನರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಡಿಜಿಟಲ್ ಪಾವತಿಗಳನ್ನು ನೀಡಲು ಸಾಧ್ಯವಾಗಿದೆ. ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳನ್ನು ಓದಿದೆ. ಇದಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಕರ್ನಾಟಕ ಮತ್ತು ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ. ನನಗೆ ಕನ್ನಡ ಸೇರಿ ದೇಶದ ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ಅತೀವ ಗೌರವವಿದೆ. ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ, ಪರಂಪರೆಯು ದೇಶದ ಆಸ್ತಿಯಾಗಿದೆ. ಇದಕ್ಕೆ ಎಲ್ಲಾ ಭಾರತೀಯರು ಹೆಮ್ಮೆಪಡಬೇಕಿದೆ. ನನ್ನ ಉದ್ದೇಶ ಕನ್ನಡಿಗರನ್ನು ಅವಮಾನಿಸುವುದು ಆಗಿರಲಿಲ್ಲ. ನನ್ನ ಹೇಳಿಕೆಯಿಂದ ಯಾರದ್ದಾದರೂ ಭಾವನೆಗಳಿಗೆ ನೋವುಂಟಾಗಿದ್ದರೆ ಬೇಷರತ್ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

"ಕರ್ನಾಟಕದಾದ್ಯಂತ ಕನ್ನಡಿಗರಿಗೆ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ನಾನು ಸಹಾಯ ಮಾಡಲು ಸಿದ್ಧ. ಸುಸ್ಥಿರವಾದ ಉದ್ಯೋಗದ ದಾರಿಯನ್ನು ಸೃಷ್ಟಿಸಬೇಕಿದೆ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕಿದೆ" ಎಂದು ಸಮೀರ್ ನಿಗಮ್ ಹೇಳಿದ್ದಾರೆ.

ಖಾಸಗಿ ವಲಯಗಳಲ್ಲಿ ಕನ್ನಡಿಗರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಸರ್ಕಾರವು ಮಸೂದೆ ಮಂಡಿಸಲು ನಿರ್ಧರಿಸಿ ನಂತರ ಖಾಸಗಿ ವಲಯದಿಂದ ವಿರೋಧ ವ್ಯಕ್ತವಾದ್ದರಿಂದ ತನ್ನ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. 

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News