2 ವರ್ಷಗಳಿಂದ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ಅಳಿಸಲಿದೆ ಗೂಗಲ್
ನ್ಯೂಯಾರ್ಕ್: ಗೂಗಲ್ ಸಂಸ್ಥೆ ತನ್ನ ಹೊಸ ಇನ್‌ಆಕ್ವಿಟಿವಿಟಿ ನೀತಿ (ನಿಷ್ಕ್ರಿಯತೆ ನೀತಿ) ಯನ್ನು ಆಗಸ್ಟ್ 4ರಂದು ಜಾರಿಗೊಳಿಸಿದೆ. ಈ ನೀತಿಯನ್ವಯ ಗೂಗಲ್ ತನ್ನ ಬಳಕೆದಾರರಿಗೆ ಈ ವರ್ಷದ ಡಿಸೆಂಬರ್ 1ರ ಗಡುವಿನ ನೆನಪು ಮಾಡಿದ್ದು, ಸಕ್ರಿಯವಾಗಿಲ್ಲದೇ ಇರುವ ಖಾತೆಯನ್ನು ಅದು ಅಳಿಸಲು ಪ್ರಾರಂಭಿಸಲಿದೆ.
ಗೂಗಲ್ ಖಾತೆ ಬಳಕೆದಾರರಿಗೆ ನಿಷ್ಕ್ರಿಯ ಅವಧಿಯನ್ನು ಎರಡು ವರ್ಷಗಳಿಗೆ ಪರಿಷ್ಕರಿಸಲಾಗಿದ್ದು ಇದು ಜಿಮೇಲ್ ಸಹಿತ ಎಲ್ಲಾ ಗೂಗಲ್ ಉತ್ಪನ್ನ ಮತ್ತು ಸೇವೆಗಳ ಬಳಕೆದಾರರಿಗೆ ಅನ್ವಯವಾಗುತ್ತದೆ.
ಒಬ್ಬ ಬಳಕೆದಾರ ಎರಡು ವರ್ಷ ಅವಧಿಯಲ್ಲಿ ಒಮ್ಮೆಯೂ ತನ್ನ ಖಾತೆಗೆ ಲಾಗಿನ್ ಮಾಡಿಲ್ಲದೇ ಇದ್ದರೆ ಖಾತೆ ನಿಷ್ಕ್ರಿಯವೆಂದು ಪರಿಗಣಿಸಲಾಗುವುದು ಎಂದು ಗೂಗಲ್ ಹೇಳಿದೆ.
ಡಿಸೆಂಬರ್ 1, 2023ರಿಂದ ಯಾವುದೇ ನಿಷ್ಕ್ರಿಯ ಖಾತೆ ಮತ್ತು ಅದರಲ್ಲಿರುವ ವಿಷಯ ಅಳಿಸುವಿಕೆಗೆ ಅರ್ಹವಾಗುತ್ತವೆ ಎಂದು ಗೂಗಲ್ ಹೇಳಿದೆಯಲ್ಲದೆ ಒಮ್ಮೆ ಅಳಿಸಿದ ನಂತರ ಅದೇ ಜಿಮೇಲ್ ವಿಳಾಸವನ್ನು ಹೊಸ ಖಾತೆ ರಚಿಸಲು ಬಳಸುವ ಹಾಗಿಲ್ಲ ಎಂದು ಸಂಸ್ಥೆ ಹೇಳಿದೆ.
ಖಾತೆ ನಿಷ್ಕ್ರಿಯವಾಗಿದ್ದರೆ ಸಂಬಂಧಿತ ಬಳಕೆದಾರರಿಗೆ ಹಲವಾರು ಜ್ಞಾಪನೆ ಇಮೇಲ್‌ಗಳನ್ನು ಆ ಖಾತೆಗೆ ಮತ್ತು ರಿಕವರಿ ಇಮೇಲ್‌ಗಳನ್ನು ಒದಗಿಸಲಾಗಿದ್ದರೆ ಅವುಗಳಿಗೂ ಕಳಿಸಲಾಗುವುದು, ನಂತರವಷ್ಟೇ ಖಾತೆ ಅಳಿಸಲಾಗುವುದು, ಖಾತೆಯನ್ನು ಅಳಿಸುವ ಎಂಟು ತಿಂಗಳಿಗೆ ಮುಂಚಿತವಾಗಿ ಜ್ಞಾಪನೆ ಇಮೇಲ್‌ಗಳನ್ನು ಕಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ನಿಷ್ಕ್ರಿಯತೆ ನೀತಿಯಿಂದ ಯುಟ್ಯೂಬ್ ಚಾನಲ್ ಖಾತೆಗಳು, ವೀಡಿಯೋಗಳು ಅಥವಾ ಕಾಮೆಂಟ್‌ಗಳನ್ನು ಹೊಂದಿರುವ ಖಾತೆಗಳಿಗೆ ವಿನಾಯಿತಿಯಿದೆ ಎಂದು ಗೂಗಲ್ ಹೇಳಿದೆ. ಲೋಡ್ ಮಾಡಿದ ಗಿಫ್ಟ್ ಕಾರ್ಡ್ ಹೊಂದಿದ ಖಾತೆ ಅಥವಾ ಪ್ರಕಟಿತ ಅಪ್ಲಿಕೇಶನ್ ಹೊಂದಿರುವ ಖಾತೆಗೂ ವಿನಾಯಿತಿಯಿದೆ.
ಖಾತೆ ಹೇಗೆ ಸಕ್ರಿಯವಾಗಿರಿಸುವುದು?
► ಇಮೇಲ್ ಓದುವುದು ಅಥವಾ ಕಳಿಸುವುದು.
► ಗೂಗಲ್ ಡ್ರೈವ್ ಬಳಸುವುದು
► ಯುಟ್ಯೂಬ್ ವೀಡಿಯೋ ವೀಕ್ಷಿಸುವುದು
► ಫೋಟೋ ಶೇರ್ ಮಾಡುವುದು
► ಆಪ್ ಡೌನ್‌ಲೋಡ್ ಮಾಡುವುದು
► ಗೂಗಲ್ ಸರ್ಚ್ ಬಳಸುವುದು
► ಮೂರನೇ ಪಕ್ಷದ ಆ್ಯಪ್ ಅಥವಾ ಸೇವೆಗೆ ಸೈನ್ ಇನ್ ಮಾಡಲು ಗೂಗಲ್ ಮೂಲಕ ಸೈನ್ ಇನ್ ಮಾಡುವುದು