ಭಾರತದ ʼಪಾನಿಪುರಿʼಗೆ ಗೂಗಲ್ ಡೂಡಲ್ ಗೌರವ
ಹೊಸದಿಲ್ಲಿ: ಭಾರತದ ಮೂಲೆ ಮೂಲೆಗಳಲ್ಲೂ ಪ್ರಸಿದ್ಧಿ ಪಡೆದಿರುವ ಪಾನಿಪುರಿ ಬಹುತೇಕ ಎಲ್ಲರ ನೆಚ್ಚಿನ ತಿನಿಸು. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೂ ಪಾನಿಪುರಿಯನ್ನು ಜನರು ಇಷ್ಟಪಡುತ್ತಾರೆ. ಇದೀಗ ಭಾರತದ ಪಾನಿಪುರಿಗೆ ಗೂಗಲ್ ಡೂಡಲ್ ರಚಿಸುವ ಮೂಲಕ ಗೌರವ ನೀಡಿದೆ. ಇದರೊಂದಿಗೆ ಪಾನಿಪುರಿ ಕುರಿತಾದ ಕೆಲವು ಮಾಹಿತಿಗಳನ್ನೂ ಹಂಚಿಕೊಂಡಿದೆ.
"ಪಾನಿಪುರಿಯನ್ನು ಆಲೂಗಡ್ಡೆ, ಕಡ್ಲೆ, ಮಸಾಲೆಗಳು, ಮೆಣಸಿನಕಾಯಿ ಮತ್ತು ಸುವಾಸಿತ ನೀರಿನಿಂದ ಮಾಡಲಾಗುತ್ತದೆ. ಜೊತೆಗೆ, ಎಣ್ಣೆಯಲ್ಲಿ ಕರಿದ ಪೂರಿಯೊಂದಿಗೆ ಇದನ್ನು ತಿನ್ನಲಾಗುತ್ತದೆ. ಇದು ದಕ್ಷಿಣ ಏಷ್ಯಾದ ಪ್ರಮುಖ ಬೀದಿ ಆಹಾರವಾಗಿದೆ" ಎಂದು ಗೂಗಲ್ ತನ್ನ ಡೂಡಲ್ ಅನ್ನು ಪರಿಚಯಿಸಿಕೊಂಡಿದೆ.
ಭಾರತದ ವಿವಿಧ ಪ್ರದೇಶಗಳಲ್ಲಿ ಪಾನಿಪುರಿಯ ಸ್ವಾದ ವಿಭಿನ್ನವಾಗಿರುತ್ತದೆ. ಪಾನಿಪುರಿ, ಗೋಲ್ ಗಪ್ಪಾ, ಪುಚ್ಕಾ ಮತ್ತು ಗುಪ್‌ಚುಪ್ ಎಂದೂ ಇದನ್ನು ಕರೆಯಲಾಗುತ್ತದೆ. ಟೆಕ್ ದೈತ್ಯ ಗೂಗಲ್ ಈ ಕುರಿತು ಪರಿಚಯಿಸಿದ್ದಕ್ಕೆ ಹಲವರು ಸಾಮಾಜಿಕ ತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.