ನಿಮ್ಮ ಖಾಸಗಿ ಮಾಹಿತಿ ಆನ್‍ಲೈನ್‍ನಲ್ಲಿ ಲಭ್ಯವಿದೆಯೇ?: ಗೂಗಲ್ ಮೂಲಕ ತಿಳಿದುಕೊಳ್ಳಿ..
ಬಳಕೆದಾರರ ಖಾಸಗಿತನ ಮತ್ತು ಸುರಕ್ಷೆಯನ್ನು ಮತ್ತಷ್ಟು ವಿಸ್ತರಿಸುವ ಪ್ರಯತ್ನವಾಗಿ, ಗೂಗಲ್ ಸಂಸ್ಥೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹುಡುಕಾಟದ ಫಲಿತಾಂಶದಲ್ಲಿ ನಿರ್ವಹಿಸುವ ಹೊಸ ವಿಧಾನವನ್ನು ಜಾರಿಗೆ ತಂದಿದೆ. ಈ ಸರ್ಚ್ ಇಂಜಿನ್ ಸಂಸ್ಥೆಯ ಹೊಸ ವಿಶೇಷತೆಯ ಅನ್ವಯ, ನಿಮ್ಮ ಸಂಪರ್ಕ ವಿವರಗಳನ್ನು ಪತ್ತೆ ಮಾಡುವುದು ಮತ್ತು ಕಿತ್ತುಹಾಕುವುದು ಸುಲಭ. ಇದಕ್ಕೆ ತ್ರಾಸದಾಯಕ ಹುಡುಕಾಟ ಮತ್ತು ವೈಯಕ್ತಿಕ ಮನವಿಗಳ ಅಗತ್ಯತೆ ಇರುವುದಿಲ್ಲ!
ಕಳೆದ ಸೆಪ್ಟೆಂಬರ್‍ನಲ್ಲಿ ಗೂಗಲ್, "ರಿಸಲ್ಟ್ಸ್ ಅಬೌಟ್ ಯೂ" (results about you) ಡ್ಯಾಶ್‍ಬೋರ್ಡನ್ನು ಮೊಬೈಲ್ ಹಾಗೂ ವೆಬ್‍ಪ್ಲಾಟ್‍ಫಾರಂನಲ್ಲಿ ಜಾರಿಗೊಳಿಸಿತ್ತು. ಈ ಹೊಸ ಅಪ್‍ಡೇಟ್‍ನೊಂದಿಗೆ, ಈ ಡ್ಯಾಷ್‍ಬೋರ್ಡ್ ಮತ್ತಷ್ಟು ಶಕ್ತಿಶಾಲಿಯಾಗಲಿದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳಲು ಹುಡುಕಾಟ ಮಡುತ್ತಿದ್ದ ಕಾಲ ಮುಗಿದು ಹೋಗಿದೆ. ಇದೀಗ ಒಮ್ಮೆ ನೀವು ನಿಮ್ಮ ವಿವರಗಳನ್ನು ಹಾಕಿದಲ್ಲಿ, ಡ್ಯಾಷ್‍ಬೋರ್ಡ್, ವೆಬ್‍ನಲ್ಲಿ ಸ್ವಯಂಚಾಲಿತವಾಗಿ ಹುಡುಕಾಟ ನಡೆಸಿ, ಮಾಹಿತಿ ಒಳಗೊಂಡಿರುವ ವೆಬ್‍ಸೈಟನ್ನು ಪ್ರಸ್ತುತಪಡಿಸುತ್ತದೆ. ಪ್ರತಿ ವೆಬ್‍ಪೇಜ್‍ಗಳನ್ನು ನೀವು ಪರಾಮರ್ಶಿಸಿ, ನಿಮ್ಮ ಮಾಹಿತಿಯನ್ನು ಕಿತ್ತುಹಾಕಲು ಸುಲಭವಾಗಿ ಮನವಿ ಸಲ್ಲಿಸಬಹುದಾಗಿದೆ.
ಈ ಮೊದಲು ಬಳಕೆದಾರರು ವೈಯಕ್ತಿಕ ಮಾಹಿತಿಗಾಗಿ ತೀರಾ ಶ್ರಮಪಟ್ಟು ಹುಡುಕಾಟ ನಡೆಸಬೇಕಿತ್ತು ಹಾಗೂ ಬಳಿಕ ವೈಯಕ್ತಿಕವಾಗಿ ಇದನ್ನು ಕಿತ್ತುಹಾಕಲು ಮನವಿ ಸಲ್ಲಿಸಬೇಕಿತ್ತು. ಆದರೆ ಇದೀಗ ಗೂಗಲ್ ನಿಮ್ಮ ವಿಳಾಸ, ಫೋನ್‍ನಂಬರ್ ಅಥವಾ ಇ-ಮೇಲ್ ಆನ್‍ಲೈನ್‍ನಲ್ಲಿ ಕಂಡುಬಂದರೆ ತಕ್ಷಣ ನಿಮಗೆ ಅಧಿಸೂಚನೆ ಕಳುಹಿಸುತ್ತದೆ. ಇದರಿಂದ ಈ ಮಾಹಿತಿಗಳು ನಿಮ್ಮ ನಿಯಂತ್ರಣದಲ್ಲಿರುತ್ತವೆ ಹಾಗೂ ಕೆಲವೇ ಹಂತಗಳನ್ನು ಅನುಸರಿಸಿ ಈ ಮಾಹಿತಿಯನ್ನು ಕಿತ್ತುಹಾಕಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ.