ಮುಂಬೈ, ದೆಹಲಿಯಲ್ಲಿ ಆ್ಯಪಲ್ ಐಫೋನ್ ಮಾರಾಟಕ್ಕೆ ಉತ್ತೇಜನ
ಆ್ಯಪಲ್ ಐಫೋನ್ ಭಾರತದಲ್ಲಿ ಹೊಸ ಗ್ರಾಹಕರನ್ನು ಕಂಡುಕೊಳ್ಳುತ್ತಿದೆ. ಆ್ಯಪಲ್‍ನ ಇತ್ತೀಚಿನ ತ್ರೈಮಾಸಿಕದ ಫಲಿತಾಂಶದಿಂದ ಸ್ಪಷ್ಟವಾಗುತ್ತಿದೆ. ಗುರುವಾರ ಆ್ಯಪಲ್ 3ನೇ ತ್ರೈಮಾಸಿಕ ಫಲಿತಾಂಶ ಬಿಡುಗಡೆ ಮಾಡಿದೆ. ಈ ಅಂಕಿ ಸಂಖ್ಯೆಗಳು ಕಂಪನಿಯ ವಿಶ್ವಜಾಲದ ವಹಿವಾಟಿಗೆ ಸಂಬಂಧಿಸಿದ್ದು, ಇದರಲ್ಲಿ ಭಾರತ ಒಂದು ಭಾಗ ಮಾತ್ರ. ಆದರೆ ಕಂಪನಿ ಸಿಇಒ ಟಿಮ್ ಕುಕ್ ಅವರು ಭಾರತಕ್ಕೆ ನಿರ್ದಿಷ್ಟವಾದ ಕೆಲ ಅಂಶಗಳನ್ನು ಒತ್ತಿಹೇಳಿದ್ದಾರೆ. ಭಾರತದಲ್ಲಿ ಕಳೆದ ಏಪ್ರಿಲ್‍ನಲ್ಲಿ ಆರಂಭವಾದ ದೆಹಲಿ ಹಾಗೂ ಮುಂಬೈ ಮಳಿಗೆಗಳು ಭಾರತೀಯ ಆದಾಯಕ್ಕೆ ಗಣನೀಯ ಕೊಡುಗೆ ನೀಡುತ್ತಿರುವುದನ್ನು ಉಲ್ಲೇಖಿಸಿದ್ದಾರೆ.
ಈ ಎರಡು ಮಳಿಗೆಗಳ ಉದ್ಘಾಟನೆ ಕುಕ್ ಭಾರತಕ್ಕೆ ಆಗಮಿಸಿದ್ದರು. ಇದೀಗ ಇವುಗಳ ಸಾಧನೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಮಳಿಗೆಗಳು ನಿರೀಕ್ಷೆ ಮೀರಿ ಸಾಧನೆ ಮಾಡಿವೆ ಎಂದು ಬಣ್ಣಿಸಿದ್ದಾರೆ.
"ನಮ್ಮ ಎರಡು ಮೊದಲ ಮಳಿಗೆಗಳನ್ನು ಈ ತ್ರೈಮಾಸಿಕ ಅವಧಿಯಲ್ಲಿ ನಾವು ತೆರೆದಿದ್ದೇವೆ. ಇದು ತೀರಾ ಆರಂಭಿಕ ಹಂತವಾಗಿದ್ದರೂ, ಇವು ಪ್ರಸ್ತುತ ಕಾರ್ಯಕ್ಷಮತೆಯಲ್ಲಿ ನಮ್ಮ ನಿರೀಕ್ಷೆಗಳನ್ನು ಮೀರಿವೆ. ನಮ್ಮ ಈ ವಾಹಿನಿಯನ್ನು ಬಲಗೊಳಿಸಲು ನಾವು ಶ್ರಮಿಸುತ್ತೇವೆ ಹಾಗೂ ನಮ್ಮ ನೇರ ಗ್ರಾಹಕರಿಗೆ ನೀಡುವ ಆಫರ್‍ಗಳ ಮೂಲಕ ಮತ್ತಷ್ಟು ಹೆಚ್ಚಿನ ಹೂಡಿಕೆ ಮಾಡಲಿದ್ದೇವೆ" ಎಂದು ಅವರು ವಿವರಿಸಿದ್ದಾರೆ.
ಅಂದರೆ ಭಾರತದಲ್ಲಿ ಮತ್ತಷ್ಟು ಹೊಸ ಮಳಿಗೆಗಳನ್ನು ಆರಂಭಿಸಲು ಕಂಪನಿ ಉದ್ದೇಶಿಸಿದೆ.
ಭಾರತ ಇಡೀ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸ್ಮಾರ್ಟ್‍ಫೋನ್ ಮಾರುಕಟ್ಟೆಯಾಗಿರುವ ಹಿನ್ನೆಲೆಯಲ್ಲಿ ಆ್ಯಪಲ್ ಭಾರತದಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂಬ ನಿರೀಕ್ಷೆ ಕುಕ್ ಅವರದ್ದು. ತಮ್ಮ ಪ್ರಗತಿಯ ಹೊರತಾಗಿಯೂ ಭಾರತದಲ್ಲಿ ಆ್ಯಪಲ್ ಮಾರುಕಟ್ಟೆ ಪಾಲು ಇನ್ನೂ ಕಡಿಮೆ ಇದೆ. ಆದಾಗ್ಯೂ ಭಾರತ, ಆ್ಯಪಲ್‍ಗೆ ದೊಡ್ಡ ಅವಕಾಶ ಕಲ್ಪಿಸುತ್ತದೆ ಎನ್ನುವುದು ಅವರ ನಂಬಿಕೆ. ಇದನ್ನು ಸಾಧಿಸಲು ಎಲ್ಲ ಶಕ್ತಿಯನ್ನು ವಿನಿಯೋಗಿಸುವುದಾಗಿ ಅವರು ಹೇಳುತ್ತಾರೆ.