ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಟ್ವಿಟರ್

Update: 2023-07-07 09:36 GMT

Photo : Twitter

ಕ್ಯಾಲಿಫೋರ್ನಿಯಾ: ಥ್ರೆಡ್ ಆ್ಯಪ್ ಬಿಡುಗಡೆಯಾದ ಮರುದಿನವೇ ಅದರ ಪ್ರತಿಸ್ಪರ್ಧಿ ಕಂಪನಿಯ ವಕೀಲರು ಮೆಟಾ ಸಂಸ್ಥೆಗೆ ಎಚ್ಚರಿಕೆ ಪತ್ರವನ್ನು ಬರೆದಿದ್ದಾರೆ. Semafor ಪ್ರಕಾರ, ಎಲಾನ್ ಮಸ್ಕ್ ಅವರ ವಕೀಲ ಅಲೆಕ್ಸ್ ಸ್ಪೈರೊ ಅವರು ಮೆಟಾ ಯಥಾವತ್ ನಕಲು ಆ್ಯಪ್ ರೂಪಿಸಿದೆ ಎಂದು ಆರೋಪಿಸಿದ್ದಾರೆ ಎಂದು gadgetsnow.com ವರದಿ ಮಾಡಿದೆ.

ಮೆಟಾ ಸಂಸ್ಥೆಯು ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲು ಮಾಜಿ ಟ್ವಿಟರ್ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಎಂದೂ ಸ್ಪೈರೊ ದೂರಿದ್ದಾರೆ. ಈ ಪತ್ರದ ಪ್ರತಿಯು ಆನ್‌ಲೈನ್ ಪ್ರಕಟಣಾ ಸಂಸ್ಥೆ Semaforನಲ್ಲಿ ಲಭ್ಯವಿದೆ.

ಮೆಟಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್‌ರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ, "ಟ್ವಿಟರ್ ತನ್ನ ಬೌದ್ಧಿಕ ಆಸ್ತಿ ಹಕ್ಕನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶ ಹೊಂದಿದೆ ಹಾಗೂ ಟ್ವಿಟರ್‌ನ ಯಾವುದೇ ವ್ಯಾಪಾರಿ ಗೋಪ್ಯತೆ ಅಥವಾ ಭಾರಿ ರಹಸ್ಯ ಮಾಹಿತಿ ಬಳಸಿಕೊಳ್ಳುವುದನ್ನು ಸ್ಥಗಿತಗೊಳಿಸಲು ಮೆಟಾ ಕೂಡಲೇ ಕ್ರಮ ತೆಗೆದುಕೊಳ್ಳಬೇಕಿದೆ" ಎಂದು ಸ್ಪೈರೊ ಎಚ್ಚರಿಸಿದ್ದಾರೆ. ಇದಲ್ಲದೆ ಟ್ವಿಟರ್‌ನಿಂದ ದತ್ತಾಂಶ ಕಳವಿನಲ್ಲಿ ತೊಡಗಬಾರದು ಎಂದೂ ಎಲಾನ್‌ ಮಸ್ಕ್ ಅವರ ವಕೀಲರು ಮೆಟಾಗೆ ಎಚ್ಚರಿಸಿದ್ದಾರೆ.

ಯಥಾವತ್ ನಕಲು ಆ್ಯಪ್ ರೂಪಿಸಲು ಮೆಟಾ ಸಂಸ್ಥೆಯು ಉದ್ದೇಶಪೂರ್ವಕವಾಗಿ ಟ್ವಿಟರ್‌ನ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಎಂದೂ ಅವರು ಆರೋಪಿಸಿದ್ದಾರೆ.

ಮೆಟಾ ಸಂಸ್ಥೆಯು ಟ್ವಿಟರ್‌ನ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಆ ಮೂಲಕ ಅವರು ಟ್ವಿಟರ್‌ನ ಭಾರಿ ರಹಸ್ಯ ಮಾಹಿತಿಗಳಿಗೆ ಪ್ರವೇಶ ಹೊಂದಿರುತ್ತಾರೆ ಎಂದು ಮಸ್ಕ್ ಪರವಾಗಿ ಸ್ಪೈರೊ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಮೆಟಾ ಸಂಸ್ಥೆಯು ಸಾರಾಸಗಟಾಗಿ ನಿರಾಕರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೆಟಾ ಕಮ್ಯುನಿಕೇಶನ್ಸ್ ನಿರ್ದೇಶಕ ಆ್ಯಂಡಿ ಸ್ಟೋನ್, "ಥ್ರೆಡ್ಸ್‌ನ ತಂತ್ರಜ್ಞರ ತಂಡದಲ್ಲಿ ಯಾವುದೇ ಮಾಜಿ ಟ್ವಿಟರ್ ಉದ್ಯೋಗಿಯಿಲ್ಲ" ಎಂದು ಥ್ರೆಡ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಥ್ರೆಡ್ಸ್ ಆ್ಯಪ್ ಬಿಡುಗಡೆಯಾಗುತ್ತಿದ್ದಂತೆಯೇ ಭಾರಿ ಜನಸ್ಪಂದನೆ ಪಡೆದಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ 30 ದಶಲಕ್ಷ ಬಳಕೆದಾರರು ಥ್ರೆಡ್ ಆ್ಯಪ್‌ಗೆ ನೋಂದಾಯಿಸಿಕೊಂಡಿದ್ದು, ಇದು ಸಹಜವಾಗಿಯೇ ಮಸ್ಕ್ ಹಾಗೂ ಟ್ವಿಟರ್ ಸಂಸ್ಥೆಯನ್ನು ಕಳವಳಕ್ಕೀಡು ಮಾಡಿದೆ.

ಥ್ರೆಡ್ಸ್ ಆ್ಯಪ್ ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್‌ನ ಸಮ್ಮಿಶ್ರಣದಂತೆ ಕಂಡು ಬರುತ್ತಿದ್ದು, ಬಳಕೆದಾರರು ಟ್ವಿಟರ್‌ನಂತೆಯೇ ಫೋಟೊಗಳನ್ನು ಹಂಚಿಕೊಳ್ಳಬಹುದಾಗಿದೆ. ವಿಡಿಯೊ ಕುರಿತು ಹೇಳುವುದಾದರೆ, ಐದು ನಿಮಿಷಗಳ ಅವಧಿಯ ವಿಡಿಯೊಗಳನ್ನು ಬಳಕೆದಾರರು ಹಂಚಿಕೊಳ್ಳಬಹುದಾಗಿದೆ. ಥ್ರೆಡ್ ಆ್ಯಪ್ ಕ್ರಮವಾಗಿ ಐಫೋನ್ ಹಾಗೂ ಆ್ಯಂಡ್ರಾಯ್ ಫೋನ್‌ಗಳ ಆ್ಯಪ್ ಸ್ಟೋರ್ ಹಾಗೂ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಬಳಕೆದಾರರು ಥ್ರೆಡ್ ಆ್ಯಪ್ ಅನ್ನು ಕಂಪ್ಯೂಟರ್ ಮೂಲಕವೂ ಪ್ರವೇಶಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News