ChatGPT ಯಿಂದಾಗಿ ಉದ್ಯೋಗ ಕಳೆದುಕೊಂಡ 22ರ ಯುವತಿ ಹೇಳಿದ್ದೇನು?

Update: 2023-08-06 16:54 GMT

Photo: NDTV 

ChatGPT ನಿಧಾನವಾಗಿ ಕೆಲವರ ಉದ್ಯೋಗ ಕಸಿದುಕೊಳ್ಳುತ್ತಿದೆ. ಕಾಪಿರೈಟರ್, ಗೋಸ್ಟ್ ರೈಟರ್ ಮತ್ತು ಸೈಡ್ ಗಿಗ್ ಕಾರ್ಯವನ್ನು ನಿರ್ವಹಿಸಿ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಹಲವು ಮಂದಿ ಇದರ ಪರಿಣಾಮವನ್ನು ಈಗಾಗಲೇ ಎದುರಿಸುತ್ತಿದ್ದಾರೆ. ChatGPT ಬದುಕಿನ ಭಾಗವಾದ ಬಳಿಕ ಹೇಗೆ ಬದುಕು ಬದಲಾಯಿತು ಎನ್ನುವುದನ್ನು ಕೊಲ್ಕತ್ತಾದ 22ರ ಯುವತಿ ಶರಣ್ಯಾ ಭಟ್ಟಾಚಾರ್ಯ ವಿವರಿಸಿದ್ದಾರೆ.

ವಿದ್ಯಾರ್ಥಿನಿಯಾಗಿದ್ದಾಗಲೇ ಕ್ರಿಯೆಟಿವ್ ಏಜೆನ್ಸಿಗೆ ಕಾಪಿರೈಟರ್ ಮತ್ತು ಗೋಸ್ಟ್ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇದೀಗ ಬರವಣಿಗೆ ಅಗತ್ಯತೆ ತೀರಾ ಕಡಿಮೆಯಾಗಿದ್ದು, ಕೆಲಸ ಕಡಿಮೆಯಾಗಿರುವುದಕ್ಕೆ ಕಂಪನಿ ಯಾವುದೇ ವಿವರಣೆ ನೀಡಿಲ್ಲ ಎನ್ನುವುದು ಅವರ ಆರೋಪ.

ನ್ಯೂಯಾರ್ಕ್‍ಪೋಸ್ಟ್ ವರದಿಯ ಪ್ರಕಾರ, ಕೆಲ ಸಮಯದ ಹಿಂದೆ ಶರಣ್ಯ, ಪ್ರತಿವಾರ ಎಸ್‍ಇಒ-ಆಪ್ಟಿಮೈಸ್ಟ್ ಲೇಖನಗಳನ್ನು ಬರೆಯುತ್ತಿದ್ದರು. ಇದು ಮಾಸಿಕ 20 ಸಾವಿರ ರೂಪಾಯಿ ಆದಾಯ ತಂದುಕೊಡುತ್ತಿತ್ತು. ತಮ್ಮ ಫೋನ್ ಸಮರ್ಥವಾಗಿ ಬಳಸಿಕೊಂಡು ಕುಟುಂಬ ನಿರ್ವಹಣೆಗೆ ಬೆನ್ನೆಲುಬಾಗಿದ್ದರು. ಈಕೆಯ ತಾಯಿ ಬಂದನಾ ಸೀರೆ ಮಾರುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದು ಶರಣ್ಯ ಆದಾಯ ಕುಟುಂಬದ ಆದಾಯಕ್ಕೆ ಪೂರಕವಾಗಿತ್ತು, ChatGPT ರಂಗಪ್ರವೇಶದೊಂದಿಗೆ ಶರಣ್ಯ ಭವಿಷ್ಯ ಮುಸುಕಾಗುತ್ತಾ ಹೋಯಿತು. 2022ರ ಕೊನೆಯ ವೇಳೆಗೆ ಶರಣ್ಯ ಅವರಿಗೆ ಸಿಗುತ್ತಿದ್ದ ಕೆಲಸದ ಅವಕಾಶ ತೀರಾ ಕಡಿಮೆಯಾಗುತ್ತಾ ಬಂತು. ಪ್ರತಿ ವಾರ ಹಲವು ಬರಹಗಳನ್ನು ಬರೆಯುತ್ತಿದ್ದ ಅವರ ಕೆಲಸದ ಒತ್ತಡ ತಿಂಗಳಿಗೆ ಒಂದೆರಡು ಬರಹಗಳಿಗೆ ಸೀಮಿತವಾಯಿತು. ಕೆಲಸ ದಿಢೀರನೇ ಕಡಿಮೆಯಾದ ಬಗ್ಗೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿಗಳು ಏನೂ ಹೇಳುತ್ತಿಲ್ಲ. ಆದರೆ ChatGPT ಇದಕ್ಕೆ ಕಾರಣವಾಗಿದ್ದು, ವೆಚ್ಚ ಕಡಿಮೆ ಮಾಡುವುದು ಅನಿವಾರ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶರಣ್ಯ ಆದಾಯ ಶೇಕಡ 90ರಷ್ಟು ಕುಸಿದಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಜೀವನದ ಐಷಾರಾಮಿ ಅಂಶಗಳು ಮಾಯವಾಗಿದ್ದು, ದೈನಂದಿನ ಅಗತ್ಯತೆಗಳನ್ನು ಪೂರೈಸುವುದೇ ಕಷ್ಟವಾಗಿದೆ. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಶನ್ ಅಂಡ್ ರೀಸರ್ಚ್‍ನಲ್ಲಿ ಜೀವವಿಜ್ಞಾನ ಅಧ್ಯಯನ ಮಾಡುತ್ತಿರುವ ಶರಣ್ಯ ಇದೀಗ ನಿರುದ್ಯೋಗದ ಭೀತಿ ಎದುರಿಸುತ್ತಿದ್ದಾರೆ. ಭವಿಷ್ಯದ ಬಗೆಗಿನ ಅನಿಶ್ಚಿತತೆ ಅವರ ಮಾನಸಿಕ ಒತ್ತಡಕ್ಕೂ ಕಾರಣವಾಗಿದೆ.

AI ವ್ಯವಸ್ಥೆ ಜಾರಿಯಾದ ಬಳಿಕ ಎಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ಚಿಂತನೆ ನಡೆಸುವಂತೆ ಶರಣ್ಯ ಕಂಪನಿಗಳಿಗೆ ಮನವಿ ಮಾಡಿದ್ದಾರೆ. ಎಐ ಸೃಷ್ಟಿಕರ್ತರಿಗಿಂತ ಮಾನವ ಕಾರ್ಯಗಳು ಭಿನ್ನ ಎನ್ನುವುದು ಅವರ ಅಭಿಪ್ರಾಯ. ತಮ್ಮಂಥ ಕಾಪಿರೈಟರ್‍ಗಳ ಕೆಲಸ ವಿಶಿಷ್ಟ ಎನ್ನುವುದು ಅವರ ವಾದ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News