ಬಳಕೆದಾರರಿಗೆ ಮತ್ತೊಂದು ವಿಶೇಷತೆಯನ್ನು ಪರಿಚಯಿಸಿದ ವಾಟ್ಸ್ ಆ್ಯಪ್; ಇಲ್ಲಿದೆ ಮಾಹಿತಿ
ವಿಶ್ವಾದ್ಯಂತ ಕೋಟ್ಯಂತರ ಜನ ಬಳಸುವ ಜನಪ್ರಿಯ ಮೆಸೇಜಿಂಗ್ ಮತ್ತು ಕರೆ ಮಾಡುವ ಅಪ್ಲಿಕೇಶನ್ ವಾಟ್ಸ್ ಆ್ಯಪ್, ಮತ್ತೊಂದು ವಿಶೇಷತೆಯನ್ನು ಬಳಕೆದಾರರಿಗೆ ಪರಿಚಯಿಸಿದೆ. ಇದು ವಾಟ್ಸ್ ಆ್ಯಪ್ ಬಳಕೆದಾರರರು ವಿಡಿಯೊ ಕರೆಗಳ ಸಂದರ್ಭದಲ್ಲಿ ತಮ್ಮ ಫೋನ್ ಸ್ಕ್ರೀನನ್ನು ಹಂಚಿಕೊಳ್ಳಲು ಅವಕಾಶವಿದೆ. ಈ ಸ್ಕ್ರೀನ್ ಹಂಚಿಕೊಳ್ಳುವ ಅವಕಾಶವು, ಕರೆ ಮಾಡುವ ವ್ಯಕ್ತಿ ತಮ್ಮ ಫೋನ್ ಸ್ಕ್ರೀನ್‍ನಲ್ಲಿರುವ ಅಂಶವನ್ನು ಮತ್ತೊಬ್ಬರ ಜತೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಇದು ಕಚೇರಿ ಮೀಟಿಂಗ್‍ಗಳಿಗೆ ಮತ್ತು ಇತರ ಬಳಕೆಗೆ ಸಹಕಾರಿಯಾಗಲಿದೆ.
ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಈ ಹೊಸ ಅಪ್‍ಡೇಟ್ ಅನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಘೋಷಿಸಿದ್ದಾರೆ. "ನಾವು ವಾಟ್ಸ್ ಆ್ಯಪ್ ವಿಡಿಯೊ ಕರೆಯ ವೇಳೆ ನಿಮ್ಮ ಫೋನ್ ಸ್ಕ್ರೀನ್ ಅನ್ನು ಹಂಚಿಕೊಳ್ಳುವ ಅವಕಾಶವನ್ನು ನಾವು ಕಲ್ಪಿಸುತ್ತಿದ್ದೇವೆ. ವಾಟ್ಸ್ ಆ್ಯಪ್ ನ ಹೊಸ ವಿಶೇಷತೆಯು ಗುಂಪು ಸಭೆಗಳಿಗೆ ಪ್ರಯೋಜನಕಾರಿ ಎನಿಸಿದ ಜನಪ್ರಿಯ ವಿಡಿಯೊ ಕರೆ ಆ್ಯಪ್‍ಗಳಾದ ಗೂಗಲ್ ಮೀಟ್ ಮತ್ತು ಝೂಮ್‍ಗೆ ಕಠಿಣ ಸ್ಪರ್ಧೆ ಒಡ್ಡಲಿದೆ" ಎಂದು ಬಣ್ಣಿಸಿದ್ದಾರೆ.
ಬಳಕೆದಾರರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಸುಲಭವಾಗಿ ತಾಂತ್ರಿಕ ನೆರವನ್ನು ನೀಡಬಹುದಾಗಿದೆ. ಒಂದು ವೇಳೆ ನಿಮ್ಮ ಪೋಷಕರು ಫೋನ್ ಸೆಟ್ಟಿಂಗ್ ಬದಲಾಯಿಸಬೇಕಿದ್ದರೆ, ವಾಟ್ಸ್ ಆ್ಯಪ್ ವಿಡಿಯೊ ಕರೆ ಮಾಡಿ ಸ್ಕ್ರೀನ್ ಶೇರಿಂಗ್ ಮೂಲಕ ಈ ಬಗ್ಗೆ ಅವರಿಗೆ ನೆರವಾಗಬಹುದು. ಬಳಕೆದಾರರು ಈ ವಿಶೇಷತೆ ಬಗ್ಗೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ ಹಾಗೂ ಇದು ಯಾವುದೇ ಇತರ ಜನಪ್ರಿಯ ವಿಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‍ಗೆ ಸಮವಾಗಿದೆ. ಅಂದರೆ ತಮ್ಮ ಇಚ್ಛೆಗೆ ಅನುಗುಣವಾಗಿ ಯಾವುದೇ ಹಂತದಲ್ಲಿ ವಿಡಿಯೊ ಕರೆಯಲ್ಲಿ ಅಂಶಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ಅವಕಾಶವಿದೆ.