ಕಿರು ವೀಡಿಯೋ ಸಂದೇಶಗಳ ಹೊಸ ಫೀಚರ್‌ ಪರಿಚಯಿಸಿದ ವಾಟ್ಸ್ ಆ್ಯಪ್‌

Update: 2023-07-28 08:48 GMT

ಕ್ಯಾಲಿಫೋರ್ನಿಯಾ: ಮೆಟಾ ತನ್ನ ಒಡೆತನದ ಜನಪ್ರಿಯ ಮೆಸೆಂಜರ್‌ ಆ್ಯಪ್‌ ಆಗಿರುವ ವಾಟ್ಸ್ ಆ್ಯಪ್‌ನಲ್ಲಿ ಇತ್ತೀಚೆಗೆ ಕಿರು ವೀಡಿಯೋ ಸಂದೇಶಗಳನ್ನು ಕಳುಹಿಸುವ ಫೀಚರ್‌ ಅನ್ನು ಪರಿಚಯಿಸಿದೆ. ಇದರೊಂದಿಗೆ ವಾಟ್ಸ್ ಆ್ಯಪ್‌ ಬಳಕೆದಾರರು ಈಗ ಕಿರು ವೀಡಿಯೋಗಳನ್ನು ರೆಕಾರ್ಡ್‌ ಮಾಡಿ, ಪಠ್ಯ ಸಂದೇಶಗಳಿಗೆ ಬದಲಾಗಿ ಕಳುಹಿಸಬಹುದಾಗಿದೆ. ಈ ನೈಜ-ಸಮಯದ ವೀಡಿಯೋ ಸಂದೇಶಗಳ ಗರಿಷ್ಠ ಅವಧಿ 60 ಸೆಕೆಂಡ್‌ಗಳಾಗಿವೆ. ಈ ಫೀಚರ್‌ನ ಜಾಗತಿಕ ಬಿಡುಗಡೆ ಈಗಾಗಲೇ ನಡೆದಿದ್ದು ಸದ್ಯವೇ ಎಲ್ಲಾ ಬಳಕೆದಾರರಿಗೆ ಈ ಫೀಚರ್‌ ಲಭ್ಯವಾಗಲಿದೆ.

ಈ ಹೊಸ ಫೀಚರ್‌ ಬಗ್ಗೆ ಮೆಟಾ ಸಿಇಒ ಮಾರ್ಕ್‌ ಝುಕರ್ ಬರ್ಗ್‌ ಅವರು ಫೇಸ್ಬುಕ್‌ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ ಹಾಗೂ ಕಿರು ವೀಡಿಯೋ ಮೂಲಕ ಈ ಫೀಚರ್‌ ಅನ್ನು ಪರಿಚಯಿಸಿದ್ದಾರೆ.

ಈಗಾಗಲೇ ಇರುವ ರಿಯಲ್-ಟೈಮ್‌ ಧ್ವನಿ ಸಂದೇಶ ಪ್ರಕ್ರಿಯೆಯಂತೆ ಈ ಹೊಸ ಫೀಚರ್‌ನಲ್ಲಿ ಪಠ್ಯ ಸಂದೇಶ ಬಾಕ್ಸ್‌ ಪಕ್ಕದಲ್ಲಿ ವೀಡಿಯೋ ರೆಕಾರ್ಡರ್‌ ಐಕಾನ್‌ ಹೊಂದಿರಲಿದೆ. ಈ ಐಕಾನ್‌ ಒತ್ತಿದಲ್ಲಿ ಬಳಕೆದಾರರು ಗರಿಷ್ಠ 60 ಸೆಕೆಂಡ್‌ಗಳ ಕಿರು ವೀಡಿಯೋ ಸಂದೇಶ ಕಳುಹಿಸಬಹುದಾಗಿದೆ.

ತನ್ನ ಅಧಿಕೃತ ಬ್ಲಾಗ್‌ ಪೋಸ್ಟ್‌ನಲ್ಲೂ ವಾಟ್ಸ್ ಆ್ಯಪ್‌ ಈ ಫೀಚರ್‌ ಬಗ್ಗೆ ಬರೆದುಕೊಂಡಿದೆ ಹಾಗೂ ಹುಟ್ಟುಹಬ್ಬ, ವಾರ್ಷಿಕೋತ್ಸವ, ಶುಭ ಸುದ್ದಿಗಳನ್ನು ಹಾಗೂ ಪ್ರಮುಖ ಮಾಹಿತಿ ಒದಗಿಸಲು ಈ ಫೀಚರ್‌ ಬಳಸಬಹುದಾಗಿದೆ ಎಂದು ಹೇಳಿದೆ.

ಈ ಹೊಸ ಫೀಚರ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಹಂತಹಂತವಾಗಿ ಬಿಡುಗಡೆಗೊಳಿಸಲಾಗುವುದು. ಈ ಫೀಚರ್‌ ಅನ್ನು ಈಗಲೇ ಬಳಸಲು ಬಯಸುವವರು ವಾಟ್ಸ್ ಆ್ಯಪ್‌ ನ ಇತ್ತೀಚಿನ ಆವೃತ್ತಿಯನ್ನು ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಬಹುದಾಗಿದೆ.

ಈ ವೀಡಿಯೋ ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್‌ ಆಗಿರುತ್ತವೆ ಎಂದು ಮೆಟಾ ಹೇಳಿಕೊಂಡಿದೆ.

ಫೀಚರ್‌ ಬಳಕೆ ಹೇಗೆ:

ಸ್ವಿಚ್‌ ಟು ವೀಡಿಯೋ ಮೋಡ್‌ ಅನ್ನು ಟ್ಯಾಪ್‌ ಮಾಡಿ ವೀಡಿಯೋ ರೆಕಾರ್ಡ್‌ ಮಾಡಿ ನಂತರ ಅದನ್ನು ಶೇರ್‌ ಮಾಡಬಹುದು. ಅಷ್ಟೇ ಅಲ್ಲದೆ ಮೇಲೆ ಸ್ವೈಪ್‌ ಮಾಡಿ ರೆಕಾರ್ಡಿಂಗ್‌ ಅನ್ನು ಲಾಕ್‌ ಮಾಡಬಹುದು. ಈ ಸಂದೇಶ ಸ್ವೀಕರಿಸಿದವರು ಅದನ್ನು ತೆರೆದ ತಕ್ಷಣ ವೀಡಿಯೋ ಪ್ಲೇ ಆಗುವುದಾದರೂ ಧ್ವನಿ ಸಕ್ರಿಯಗೊಳಿಸಲು ವೀಡಿಯೋವನ್ನು ಟ್ಯಾಪ್‌ ಮಾಡಬೇಕು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News