ಎಚ್ಚರಿಕೆ! ನೀವು ಕೋರದೆ ನಿಮಗೆ ವಾಟ್ಸ್ಆ್ಯಪ್ ವೆರಿಫಿಕೇಶನ್ ಕೋಡ್ ಬಂದಿದ್ದರೆ ನಿಮ್ಮ ಮೊಬೈಲ್ ಸಂಖ್ಯೆ ಅಪಾಯದಲ್ಲಿದೆ ಎಂದರ್ಥ

Update: 2023-07-30 11:09 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ವಾಟ್ಸ್ ಆ್ಯಪ್ನಲ್ಲಿ ವಂಚನೆಗೊಳಗಾಗಿರುವುದನ್ನು ನಾವೆಲ್ಲ ಕೇಳುತ್ತಲೇ ಇರುತ್ತೇವೆ. ನೂತನ ತಂತ್ರಜ್ಞಾನಗಳು ಹಾಗೂ ಆವಿಷ್ಕಾರಿ ತಂತ್ರಗಳ ಮೂಲಕ ಈ ವಂಚಕರು ಸಾಮಾನ್ಯ ಜನರನ್ನು ಮೂರ್ಖರನ್ನಾಗಿಸುತ್ತಲೇ ಇರುತ್ತಾರೆ. ಬಲವಂತದ ಒಟಿಪಿ ಹಂಚಿಕೆ ಹಗರಣ ಹಾಗೂ ವಾಟ್ಸ್ ಆ್ಯಪ್ ಖಾತೆ ಹ್ಯಾಕ್ ನಂತಹ ಹಲವು ವಂಚನೆಯ ಪ್ರಕರಣಗಳ ನಡೆದಿದೆ. ಇದು ಹಲವಾರು ಸಾಧನಗಳ ಮೂಲಕ ವಾಟ್ಸ್ ಆ್ಯಪ್ ಪರಿಶೀಲನಾ ಸಂಕೇತಾಕ್ಷರಗಳನ್ನು (WhatsApp verification code) ಕಳವು ಮಾಡುವುದರಿಂದ ಆಗುತ್ತದೆ ಎಂದು tech.hindustantimes.com ವರದಿ ಮಾಡಿದೆ.

ನೀವು ವಾಟ್ಸ್ ಆ್ಯಪ್ ವೆರಿಫಿಕೇಶನ್ ಕೋಡ್ ಕುರಿತು ಒಂದಿಷ್ಟು ತಿಳಿದಿರಬೇಕು ಮತ್ತು ಅದರೊಂದಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತೂ ಅರಿತಿರಬೇಕು. ಬಳಕೆದಾರರನ್ನು ಸುರಕ್ಷಿತವಾಗಿಡಲು ವಾಟ್ಸ್ ಆ್ಯಪ್ ಸಂಸ್ಥೆಯು ಈ ನೂತನ ವೈಶಿಷ್ಟ್ಯತೆಯನ್ನು ಬಿಡುಗಡೆ ಮಾಡಿದ್ದು, ಇದು ಯಾರಾದರೂ ತಮ್ಮ ಖಾತೆಯನ್ನು ಹ್ಯಾಕ್ ಮಾಡಲು ಯತ್ನಿಸಿದರೆ ಆ ಕುರಿತು ಸದರಿ ಬಳಕೆದಾರರಿಗೆ ಎಚ್ಚರಿಕೆಯನ್ನೂ ರವಾನಿಸುತ್ತದೆ.

ವಾಟ್ಸ್ ಆ್ಯಪ್ ನೂತನ ವೈಶಿಷ್ಟ್ಯದ ಕುರಿತು ಮಾಹಿತಿ

ಯಾರಾದರೂ ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ವಾಟ್ಸ್ ಆ್ಯಪ್ ಖಾತೆಯನ್ನು ನೋಂದಾಯಿಸಲು ಮುಂದಾದರೆ, ವಾಟ್ಸ್ ಆ್ಯಪ್ ನಿಮಗೆ ಆ ಕುರಿತು ಎಚ್ಚರಿಸುವ ಅಧಿಸೂಚನೆಯನ್ನು ರವಾನಿಸುತ್ತದೆ. ಹೀಗಾಗಿ, ನೀವು ಕೇಳಿರದಿದ್ದರೂ ಈ ವೆರಿಫಿಕೇಶನ್ ಕೋಡ್ ನೀವು ಸ್ವೀಕರಿಸಿದರೆ ಅಥವಾ ಯಾರಾದರೂ ನಿಮಗೆ ಕರೆ ಮಾಡಿ, ಒಟಿಪಿ ಸಂಖ್ಯೆ ತಿಳಿಸುವಂತೆ ಕೋರಿದರೆ, ತಕ್ಷಣವೇ ಅದು ಹಗರಣ ಎಂದು ಅರ್ಥ ಮಾಡಿಕೊಳ್ಳಿ. ಯಾವುದೇ ಸಂದರ್ಭದಲ್ಲೂ ನೀವು ಆ ವೆರಿಫಿಕೇಶನ್ ಕೋಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಕೂಡದು.

ಹೀಗಿದ್ದೂ, ಯಾರಾದರೂ ಕೆಲವೊಮ್ಮೆ ತಮ್ಮ ಮೊಬೈಲ್ ಸಂಖ್ಯೆಯನ್ನು ಪ್ರವೇಶಿಸಲು ಯತ್ನಿಸುತ್ತಿದ್ದರೂ, ಪ್ರಮಾದದಿಂದಾಗಿ ಅವರು ತಮ್ಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸುವುದರಿಂದ ಇದು ನಡೆಯುವ ಸಾಧ್ಯತೆ ಇದ್ದರೂ, ನೀವೇನಾದರೂ ಅಂತಹ ಅಧಿಸೂಚನೆಯನ್ನು ಸ್ವೀಕರಿಸಿದರೆ, ಹ್ಯಾಕರ್ ಗಳು ನಿಮ್ಮ ವಾಟ್ಸ್ ಆ್ಯಪ್ ಖಾತೆಯನ್ನು ಹ್ಯಾಕ್ ಮಾಡಲು ಯತ್ನಿಸುತ್ತಿರುವ ಸಾಧ್ಯತೆ ಅಧಿಕವಾಗಿರುತ್ತದೆ.

ನಿಮ್ಮ ಆತ್ಮೀಯ ಗೆಳೆಯ ಅಥವಾ ಕುಟುಂಬದ ಸದಸ್ಯರು ಸೇರಿದಂತೆ ಯಾರಾದರೂ ಆಗಿರಲಿ, ಅವರೊಂದಿಗೆ ನಿಮ್ಮ ವಾಟ್ಸ್ ಆ್ಯಪ್ ವೆರಿಫಿಕೇಶನ್ ಕೋಡ್ ಅನ್ನು ಹಂಚಿಕೊಳ್ಳಬೇಡಿ. ಅವರು ನಿಮ್ಮ ಖಾತೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಅವರಿಗೆ ನಿಮ್ಮ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವ ಕಿರು ಸಂದೇಶ ಸೇವೆಯ ವೆರಿಫಿಕೇಶನ್ ಕೋಡ್ ಅಗತ್ಯವಿರುತ್ತದೆ. ಈ ಕೋಡ್ ನಿಮ್ಮ ಮೊಬೈಲ್ ಸಂಖ್ಯೆಯನ್ನು ಯಾರಾದರೂ ಬಳಕೆದಾರರು ಪರಿಶೀಲಿಸಲು ಯತ್ನಿಸಿದರೆ ಅದಕ್ಕೆ ಈ ಪರಿಶೀಲನಾ ಪ್ರಕ್ರಿಯೆ ಅವಕಾಶ ನೀಡುವುದಿಲ್ಲ. ಈ ರೀತಿಯಲ್ಲಿ ನಿಮ್ಮ ವಾಟ್ಸ್ ಆ್ಯಪ್ ಖಾತೆಯು ನಿಮ್ಮ ಬಳಿಯೇ ಉಳಿಯುತ್ತದೆ.

ಒಂದು ವೇಳೆ ನೀವೇನಾದರೂ ನಿಮ್ಮ ವಾಟ್ಸ್ ಆ್ಯಪ್ ಖಾತೆಗೆ ಬೇರೆ ಸಾಧನದಿಂದ ಲಾಗಿನ್ ಆಗಲು ಪ್ರಯತ್ನಿಸುತ್ತಿದ್ದರೆ, ನೀವು ಮೊದಲು ಅಧಿಸೂಚನೆಯನ್ನು ಸ್ವೀಕರಿಸಬೇಕು ಹಾಗೂ ಆ ವೆರಿಫಿಕೇಶನ್ ಕೋಡ್ ಅನ್ನು ನಮೂದಿಸಬೇಕು. “ನಿಮ್ಮ ವಾಟ್ಸ್ ಆ್ಯಪ್ ಖಾತೆಯನ್ನು ಪರಿಶೀಲಿಸಲು ಯತ್ನಿಸುತ್ತಿರುವ ವ್ಯಕ್ತಿಗಳನ್ನು ಗುರುತು ಹಚ್ಚಲು ವಾಟ್ಸ್ ಆ್ಯಪ್ ಬಳಿ ಸಾಕಷ್ಟು ಮಾಹಿತಿಯಿಲ್ಲ. ಬೇರೆ ಯಾರಾದರೂ ಮತ್ತೊಂದು ಸಾಧನದ ಮೂಲಕ ನಿಮ್ಮ ವಾಟ್ಸ್ ಆ್ಯಪ್ ಖಾತೆಯನ್ನು ಪ್ರವೇಶಿಸಿದರೆ, ನಿಮ್ಮ ಸಾಧನದಲ್ಲಿ ಸಂಗ್ರಹಗೊಂಡಿರುವ ಈ ಹಿಂದಿನ ಸಂದೇಶ, ಸಂಭಾಷಣೆಗಳನ್ನು ಓದಲು ಸಾಧ್ಯವಿಲ್ಲ” ಎಂದು ವಾಟ್ಸ್ ಆ್ಯಪ್ ಬ್ಲಾಗ್ ಒಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News