ಲ್ಯಾಪ್‍ಟಾಪ್ ಆಮದು ಲೈಸನ್ಸ್ ಕಡ್ಡಾಯ ಕ್ರಮದಿಂದ ಭಾರತದಲ್ಲಿ ಲ್ಯಾಪ್‍ಟಾಪ್ ದುಬಾರಿಯಾಗಲಿದೆಯೇ?

Update: 2023-08-05 18:11 GMT

ಸಾಂದರ್ಭಿಕ ಚಿತ್ರ 

ಲ್ಯಾಪ್‍ಟಾಪ್, ಟ್ಯಾಬ್ಲೆಟ್, ಆಲ್ ಇನ್ ವನ್ ಪಿಸಿ ಹಾಗೂ ಅಲ್ಟ್ರಾ ಸ್ಮಾಲ್ ಕಂಪ್ಯೂಟರ್‍ ಗಳ ಆಮದಿನ ಮೇಲೆ ಭಾರತ ಸರ್ಕಾರ ನಿರ್ಬಂಧಗಳನ್ನು ಹೇರಿದೆ. ವಿದೇಶಿ ವ್ಯವಹಾರಗಳ ಮಹಾನಿರ್ದೇಶಕರು ಈ ನಿರ್ಧಾರ ಪ್ರಕಟಿಸಿದ್ದು, ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯ ಇದನ್ನು ಅನುಮೋದಿಸಿದೆ. ಪ್ರಮುಖ ಓಇಎಂಗಳಾದ ಆ್ಯಪಲ್, ಡೆಲ್, ಎಪಿ ಮತ್ತು ಲೆನೆವೊದಂಥ ಕಂಪನಿಗಳು ಚೀನಾವನ್ನು ನೆಲೆಯಾಗಿಸಿಕೊಂಡಿದ್ದು, ಭಾರತದಲ್ಲೇ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಕಂಪನಿಗಳು ಆಮದು ಲೈಸನ್ಸ್ ಪಡೆಯುವುದು ಕಡ್ಡಾಯವಾಗಿರುವುದರಿಂದ, ಭಾರತದಲ್ಲೇ ಉತ್ಪಾದನೆ ಆರಂಭವಾಗುವವರೆಗೂ ಲ್ಯಾಪ್‍ಟಾಪ್‍ಗಳು ದುಬಾರಿಯಾಗಲಿವೆ.

ಸರ್ಕಾರ ಎಚ್‍ಎಸ್‍ಎನ್ 8471ರ ವರ್ಗದಡಿಯಲ್ಲಿ ಲ್ಯಾಪ್‍ಟಾಪ್, ಟ್ಯಾಬ್ಲೆಟ್, ಆಲ್ ಇನ್ ವನ್ ಪಿಸಿ ಹಾಗೂ ಅಲ್ಟ್ರಾ ಸ್ಮಾಲ್ ಕಂಪ್ಯೂಟರ್‍ಗಳ ಆಮದಿನ ಮೇಲೆ ನಿರ್ಬಂಧ ಹೇರಿದೆ. ಆದರೆ ಆನ್‍ಲೈನ್ ಮಳಿಗೆಗಳನ್ನು ಖರೀದಿಸುವ ಗ್ರಾಹಕರಿಗೆ ಇದರಿಂದ ವಿನಾಯ್ತಿ ಇದೆ. ಆದರೆ ಅವರು ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಇದರ ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ಬೆಂಚ್‍ಮಾರ್ಕಿಂಗ್, ಮೌಲ್ಯಮಾಪನ, ದುರಸ್ತಿ ಹಾಗೂ ಮರು ರಫ್ತಿಗೆ ಇದರಿಂದ ವಿನಾಯ್ತಿ ಇದೆ.

ಇದು ಭಾರತದಲ್ಲಿ ಈ ಉತ್ಪನ್ನಗಳ ಉತ್ಪಾದನೆ ಹೆಚ್ಚಲು ನೇರವಾಗಿ ಕಾರಣವಾಗಲಿದೆ. ಐಟಿ ಹಾರ್ಡ್‍ವೇರ್‍ಗಳಿಗೆ ಉತ್ಪಾದನೆ ಸಂಬಂಧಿತ ಉತ್ತೇಜಕಗಳನ್ನು ನೀಡಲು ಸರ್ಕಾರ ಮುಂದಾಗಿದೆ.

ಸರ್ಕಾರದ ಈ ನಡೆ ಇತ್ತೀಚೆಗೆ ಭಾರತದಲ್ಲಿ ಜಿಯೊಬುಕ್ ಬಿಡುಗಡೆ ಮಾಡಿದ ರಿಲಯನ್ಸ್ ನಂಥ ಕಂಪನಿಗಳಿಗೂ ಅನುಕೂಲವಾಗಲಿದೆ. ಇದರ ಜತೆಗೆ ಸ್ಥಳೀಯ ಉತ್ಪಾದನಾ ಕಂಪನಿಗಳಿಗೆ ಆಮದು ವಿನಾಯ್ತಿ ಲೈಸನ್ಸ್ ಪಡೆಯಲು ಕೂಡಾ ಇದು ನೆರವಾಗಲಿದೆ. ಏತನ್ಮಧ್ಯೆ ಭಾರತೀಯ ಎಲೆಕ್ಟ್ರಾನಿಕ್ ಸರಕು ಉತ್ಪಾದಕ ಸಂಸ್ಥೆಯಾದ ಡಿಕ್ಸಾನ್ ಟೆಕ್ನಾಲಜೀಸ್ ಗುರುವಾರ ಶೇಕಡ 6ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News