ಹಿಮಾಚಲ ಪ್ರದೇಶ: ಮೇಘಸ್ಫೋಟ, ಭೂಕುಸಿತದಿಂದ 19 ಮಂದಿ ಮೃತ್ಯು

Update: 2023-06-29 02:47 GMT

ಫೋಟೋ: PTI

ಶಿಮ್ಲಾ (ಹಿಮಾಚಲ ಪ್ರದೇಶ): ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭೂಕುಸಿತ, ದಿಢೀರ್ ಪ್ರವಾಹ ಹಾಗೂ ಮೇಘಸ್ಫೋಟದಿಂದ ಕಳೆದ ಐದು ದಿನಗಳಲ್ಲಿ 19 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಹಿಮಾಚಲ ಪ್ರದೇಶ ವಿಕೋಪ ನಿರ್ವಹಣಾ ಪ್ರಾಧಿಕಾರ ಹೇಳಿದೆ.

ರಾಜ್ಯದಲ್ಲಿ ಮುಂಗಾರು ಆರಂಭವಾದಾಗಿನಿಂದ ಇದುವರೆಗೆ ಸುಮಾರು 219.29 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಪ್ರಾಧಿಕಾರ ವಿವರಿಸಿದೆ.

ಜೂನ್ 24ರಿಂದ 28ರವರೆಗೆ 19 ಮಂದಿ ಮೃತಪಟ್ಟಿರುವ ಜತೆಗೆ ಇತರ ಮೂವರು ನಾಪತ್ತೆಯಾಗಿದ್ದಾರೆ. 34 ಮಂದಿಗೆ ಗಾಯಗಳಾಗಿದ್ದು, ಒಂಬತ್ತು ಕಡೆ ಭೂಕುಸಿತ, ಆರು ಕಡೆ ಪ್ರವಾಹ ಹಾಗೂ ಒಂದು ಮೇಘಸ್ಫೋಟ ಘಟನೆಯಿಂದ 352 ಪ್ರಾಣಿಗಳು ಕೂಡಾ ಮೃತಪಟ್ಟಿವೆ ಎಂದು ಅಂಕಿ ಅಂಶಗಳು ವಿವರಿಸಿವೆ.

ಇದುವರೆಗೆ ಐದು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 36 ಮನೆಗಳು ಭಾಗಶಃ ಹಾನಿಗೀಡಾಗಿವೆ. ಒಂದು ಅಂಗಡಿ ಹಾಗೂ 20 ದನದ ಕೊಟ್ಟಿಗೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಶಿಮ್ಲಾ ನಗರದಲ್ಲಿ ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿ ಪದೇ ಪದೇ ಭೂಕುಸಿದ ಘಟನೆಗಳು ಸಂಭವಿಸುತ್ತಿದ್ದು, ಬೀದಿಗಳಲ್ಲಿ ನೀರು ನಿಂತು ಜನರಿಗೆ ಸಂಕಷ್ಟ ಎದುರಾಗಿದೆ.

"ಮುಂಗಾರು ಮಳೆ ಈಗಷ್ಟೇ ಆರಂಭವಾಗಿದೆ. ಕಳೆದ ಐದು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ನೀರು ನಿಂತಿರುವುದನ್ನು ನೀವು ನೋಡಬಹುದು. ನಗರದ ಹೃದಯ ಭಾಗದಲ್ಲೇ ಚರಂಡಿಗಳು ಕಟ್ಟಿಕೊಂಡಿವೆ. ನಗರದ ಇತರ ಭಾಗಗಳ ಸ್ಥಿತಿಯನ್ನು ನೀವು ಕಲ್ಪಿಸಿಕೊಳ್ಳಬಹುದು" ಎಂದು ಕಮಲೇಶ್ ಮೆಹ್ತಾ ಎಂಬ ನಿವಾಸಿ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಎರಡು ದಿನಗಳ ಅವಧಿಗೆ ಶಿಮ್ಲಾ ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ..

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News