ಕೊಪ್ಪಳ | ವಸತಿ ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ಆರೋಪ: ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

Update: 2024-12-25 05:53 GMT

ಕೊಪ್ಪಳ : ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಅಡುಗೆ ಸಹಾಯಕನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಕಾರಟಗಿ ತಾಲೂಕಿನ ವಸತಿ ಶಾಲೆಯೊಂದರಲ್ಲಿ ಅಡುಗೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಕಿರುಕುಳ ನೀಡುವುದು ಮತ್ತು 'ಬ್ಯಾಡ್ ಟಚ್' ಮಾಡುತ್ತಿದ್ದಾನೆಂದು ವಿದ್ಯಾರ್ಥಿಗಳು ಮಕ್ಕಳ ಸಲಹಾ ಪೆಟ್ಟಿಗೆಯಲ್ಲಿ ದೂರು ಹಾಕಿದ್ದರು. ಸಲಹಾ ಪೆಟ್ಟಿಗೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಈ ಮಾಹಿತಿಯು ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿದುಬಂದಿದ್ದು, ಅವರು ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಡುಗೆ ಸಹಾಯಕನ ವಿರುದ್ಧ ಡಿ.23ರಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರತಿ ಶೈಕ್ಷಣಿಕ ಸಂಸ್ಥೆಗಳು 'ಮಕ್ಕಳ ಸುರಕ್ಷತಾ ನೀತಿ-2016 ಪರಿಷ್ಕಕೃತ-2023'ನ್ನು ಅಳವಡಿಸಿಕೊಳ್ಳುವಂತೆ ಹಾಗೂ ಮಕ್ಕಳಿಗೆ 'ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ'ದ ಬಗ್ಗೆ ಕಡ್ಡಾಯವಾಗಿ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ

'ಮಕ್ಕಳ ಸುರಕ್ಷತಾ ನೀತಿಯನ್ವಯ ಸಿಬ್ಬಂದಿಯಿಂದ ಮಕ್ಕಳ ಸುರಕ್ಷತೆಯ ಬಗ್ಗೆ 'ಬದ್ಧತಾ ಪತ್ರ' 'ಸಿಬ್ಬಂದಿಗಳ ಪೊಲೀಸ್ ಪರಿಶೀಲನೆ', ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷತಾ ನೀತಿ', 'ಸಲಹಾ ಪೆಟ್ಟಿಗೆ' ಅಳವಡಿಕೆ, ಸಂಸ್ಥೆಯನ್ನು 'ಸಿಸಿಟಿವಿ' ಕ್ಯಾಮರಾ ಅಳವಡಿಕೆ, ಸಂಸ್ಥೆಯಲ್ಲಿ 'ಮಕ್ಕಳ ಸಹಾಯವಾಣಿ-1098' ಕುರಿತು ಶಾಶ್ವತ ಗೋಡೆ ಬರಹ ಬರೆಸುವುದು, 'ಪೋಷಕರ ಸಭೆ' ನಡೆಸುವುದು 'ಪ್ರತೀ ಸಂಸ್ಥೆಯ ಸುರಕ್ಷತಾ ನೀತಿ' ಅಳವಡಿಸಿಕೊಳ್ಳುವುದು ಹಾಗೂ ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿಯನ್ನು ಮೂಡಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News