ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳರ ವದಂತಿ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ

Update: 2023-07-23 06:12 GMT

Photo: udupipolice.karnataka.gov.in

ಕುಂದಾಪುರ: ಇತ್ತೀಚೆಗೆ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೇಶ್ವರ, ಕಾಳಾವರ ಪರಿಸರದಲ್ಲಿ ಮಕ್ಕಳನ್ನು ಅಪಹರಿಸಿಕೊಂಡು ಹೋಗುವ ಪ್ರಯತ್ನ ನಡೆದಿದೆ ಎಂಬ ವದಂತಿ ಹಾಗೂ ಫೋಟೋ ವೀಡಿಯೋಗಳು ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ತಿಳಿಸಿದ್ದಾರೆ.

ಕಾರಿನಲ್ಲಿ ಮಕ್ಕಳ ಅಪಹರಣಕ್ಕೆ ಯತ್ನಿಸಲಾಗಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಕುಂದಾಪುರ ನಗರ ಠಾಣಾ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಾಹನವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡದೆ ಏನೇ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಅಥವಾ ತುರ್ತು ಕರೆ ಸಂಖ್ಯೆ 112 ಗೆ ಕರೆ ಮಾಡಬೇಕಾಗಿ ಡಿವೈಎಸ್ಪಿ ಮನವಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಇತ್ತೀಚೆಗೆ ಕುಂದಾಪುರ ಬರೇಕಟ್ಟು ರಸ್ತೆಯಲ್ಲಿ ಮಕ್ಕಳಿಗೆ ಆಟಿಕೆ ಆಸೆ ತೋರಿಸಿ ಮಕ್ಕಳನ್ನು ಕರೆಯುವ ವಿಡಿಯೋ ತುಣುಕು ಹರಿದಾಡುತ್ತಿದ್ದು ಈ ವಿಚಾರವು ಸುಳ್ಳು ಸುದ್ದಿಯಾಗಿದ್ದು, ವಿಷಯ ತಿಳಿದ ತಕ್ಷಣವೇ ಕಾರ್ಯ ಪ್ರವೃತ್ತರಾದ ಕುಂದಾಪುರ ಪೊಲೀಸ್ ಸಿಬ್ಬಂದಿ ಆತನನ್ನು ಕರೆಸಿ ವಿಚಾರಣೆ ನಡೆಸಿದ್ದು ಅದರಲ್ಲಿ ಕೂಡ ಆತನಲ್ಲಿ ಯಾವುದೇ ದುರುದ್ದೇಶ ಕಂಡು ಬಂದಿಲ್ಲ. ಯಾವುದೇ ವದಂತಿಗಳನ್ನು ನಂಬದೇ ಮಾಹಿತಿಗಳಿದ್ದಲ್ಲಿ ಕುಂದಾಪುರ ಠಾಣೆಯ 08254-230338 ಸಂಖ್ಯೆ ಸಂಪರ್ಕಿಸಲು ಕುಂದಾಪುರ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ನಂದಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News