ʼಜಾತಿ ಗಣತಿʼಯನ್ನು ಸಿಎಂ ಸಿದ್ದರಾಮಯ್ಯ ಹೇಳಿ ಬರೆಸಿದ್ದಾರೆ : ಆರ್‌.ಅಶೋಕ್‌

Update: 2025-01-16 09:55 GMT

ಆರ್‌.ಅಶೋಕ್‌ 

ಬೆಂಗಳೂರು : ʼಕೇಂದ್ರ ಸರಕಾರ ಜನಗಣತಿ ನಡೆಸುತ್ತಿರುವಾಗ ಕಾಂಗ್ರೆಸ್‌ ಸರಕಾರ ಜಾತಿ ಗಣತಿ ವರದಿಯ ಬಗ್ಗೆ ಮಾತಾಡುತ್ತಿದೆ. ಜಾತಿ ಗಣತಿ ವರದಿಯನ್ನು ಬೀದಿಬೀದಿಯಲ್ಲಿ ಜನರು ನೋಡಿದ್ದಾರೆ. ಅದು ಈಗಾಗಲೇ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಹೇಳಿ ಬರೆಸಿರುವ ವರದಿ ಇದಾಗಿದ್ದು, ಯಾವುದೇ ರಹಸ್ಯ ಉಳಿದಿಲ್ಲʼ ಎಂದು ಆರ್‌.ಅಶೋಕ್‌ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಎಲ್ಲರೂ ಒಪ್ಪುವಂತೆ ಜಾತಿ ಗಣತಿ ವರದಿ ತಯಾರಿಸಬೇಕು. ಒಕ್ಕಲಿಗರು ಹಾಗೂ ಲಿಂಗಾಯತರ ಸಂಖ್ಯೆ ಜಾಸ್ತಿ ಬರಬಾರದೆಂಬ ಕಾರಣಕ್ಕೆ ಒಡೆದು ಚೂರು ಮಾಡಲಾಗಿದೆ. ಎಲ್ಲ ಯೋಜನೆಗಳಿಗೆ ಕೇಂದ್ರ ಸರಕಾರದ ಜನಗಣತಿ ವರದಿಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ನಡೆಸುವ ಜನಗಣತಿ ವರದಿಯಲ್ಲೇ ಎಲ್ಲ ಜಾತಿಗಳ ಲೆಕ್ಕಾಚಾರ ಕೂಡ ಬರುತ್ತದೆ. ಆದ್ದರಿಂದ ರಾಜ್ಯ ಸರಕಾರ ಈ ಗಣತಿಗೆ ಸಹಕಾರ ನೀಡಬೇಕು. ಅದು ಬಿಟ್ಟು ಪ್ರತ್ಯೇಕವಾಗಿ ಜಾತಿ ಗಣತಿ ವರದಿ ಬಿಡುಗಡೆ ಮಾಡಿ ರಾಜಕೀಯ ಮಾಡಬಾರದು. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಡಬಲ್‌ ಗೇಮ್‌ ಆಡುತ್ತಿದ್ದಾರೆʼ ಎಂದು ಆಕ್ರೋಶ ಹೊರಹಾಕಿದರು.

ಸರಕಾರದ ನೆರವು ಮರೀಚಿಕೆಯಾಗಿದೆ :

ಒಂದು ಕಡೆ ಸಚಿವರಾದ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕಲಹವಿದ್ದರೆ, ಮತ್ತೊಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್‌-ಸಚಿವ ಜಾರಕಿಹೊಳಿ ನಡುವೆ ಕಲಹವಿದೆ. ಎರಡೂವರೆ ವರ್ಷಕ್ಕೆ ಅಧಿಕಾರ ಹಸ್ತಾಂತರವಾಗಬೇಕೆಂದು ಒಪ್ಪಂದವಾದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಲು ಮನಸ್ಸಿಲ್ಲ. ಅದಕ್ಕಾಗಿ ಸಚಿವರನ್ನು ಛೂ ಬಿಟ್ಟಿದ್ದು, ಡಿ.ಕೆ.ಶಿವಕುಮಾರ್‌ ಒಬ್ಬಂಟಿಯಾಗಿದ್ದಾರೆ. ಅದಕ್ಕಾಗಿ ಅವರೀಗ ಹೈಕಮಾಂಡ್‌ ಪಾದದ ಬಳಿ ಕೂತಿದ್ದಾರೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಸಿದ್ಧವಿಲ್ಲ.ಹೀಗಾಗಿ ಯಾರೂ ಜನರ ಪರವಾಗಿ ಮಾತಾಡುತ್ತಿಲ್ಲ. ಗುತ್ತಿಗೆದಾರರು ದಯಾಮರಣಕ್ಕೆ ಕೋರಿದ್ದರೆ, ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಾಗುತ್ತಿದೆ. ಎಲ್ಲರೂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ಜನರ ಪಾಲಿಗೆ ಸರಕಾರದ ನೆರವು ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News