9 ವರ್ಷಗಳ ಕಾಲ ಕೇವಲ 35 ಸಾವಿರ ರೂ. ವೇತನಕ್ಕೆ ದುಡಿದ ಇನ್ಫೋಸಿಸ್ ಉದ್ಯೋಗಿ!
ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯಲ್ಲಿ ಒಂಬತ್ತು ವರ್ಷಗಳ ಕಾಲ ಕೇವಲ 35,000 ರೂ.ಗೆ ತಾನು ದುಡಿದಿದ್ದೆ ಎಂದು ಇನ್ಪೋಸಿಸ್ ನ ಮಾಜಿ ಉದ್ಯೋಗಿಯೊಬ್ಬರು ರೆಡಿಟ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಇನ್ಫೋಸಿಸ್ ನಲ್ಲಿನ ಒಂಬತ್ತು ವರ್ಷಗಳ ಉದ್ಯೋಗವನ್ನು ಆ ಟೆಕ್ಕಿ ಸರಪಳಿ ಇಲ್ಲದ ಗುಲಾಮಗಿರಿಯ ಅನುಭವ ಎಂದು ರೆಡಿಟ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ದೇಶಾದ್ಯಂತ ಕಾರ್ಪೊರೇಟ್ ಸಂಸ್ಕೃತಿಯು ಆರೋಗ್ಯಕರವಾಗಿದೆಯೆ ಅಥವಾ ವಿಷಮಯವಾಗಿದೆಯೆ ಎಂಬ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಇನ್ಫೋಸಿಸ್ ನ ಮಾಜಿ ಉದ್ಯೋಗಿಯಿಂದ ಈ ರೆಡಿಟ್ ಪೋಸ್ಟ್ ಹಂಚಿಕೆಯಾಗಿದೆ.
ಇದೀಗ ಈ ವಿಷಯವು ಕೆಲಸ-ಜೀವನದ ಸಮತೋಲನದ ಚರ್ಚೆಯಿಂದ ಕೆಲಸಕ್ಕೆ ತಕ್ಕ ವೇತನದ ಅನುಪಾತ ಹಾಗೂ ಉದ್ಯೋಗಿಗಳಿಗೆ ಉದ್ಯೋಗ ತಾಣದಲ್ಲಿ ಒದಗಿಸಲಾಗುವ ಸವಲತ್ತಿನವರೆಗೆ ವಿಸ್ತರಿಸಿದೆ. ಜನರು ನಿಧಾನವಾಗಿ ತಾವು ಕೆಲಸ ಮಾಡುತ್ತಿರುವ ಕಾರ್ಪೊರೇಟ್ ರೂಢಿಗಳ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.
ಇತ್ತೀಚೆಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರು ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಕರೆ ನೀಡುವ ಮೂಲಕ ಕೆಲಸ-ಜೀವನ ಸಮತೋಲನ ಚರ್ಚೆಗೆ ನಾಂದಿ ಹಾಡಿದ್ದರು. ಜೀವನದಲ್ಲಿ ಯಶಸ್ವಿಯಾಗಲು ವಾರಕ್ಕೆ 70 ಗಂಟೆಗಳ ಕಾಲ ದುಡಿಯುವುದು ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದರು. ಈ ಹೇಳಿಕೆಗೆ ಹಲವು ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು.
ಇನ್ಫೋಸಿಸ್ ನಲ್ಲಿ ಒಂಬತ್ತು ವರ್ಷಕ್ಕೂ ಹೆಚ್ಚು ಕಾಲ ಉದ್ಯೋಗ ಮಾಡಿರುವುದಾಗಿ ಹೇಳಿಕೊಂಡಿರುವ ರೆಡಿಟ್ ಬಳಕೆದಾರ @GoatTop607, ತಾನು ಮತ್ತೊಂದು ದೈತ್ಯ ಮಾಹಿತಿ ತಂತ್ರಜ್ಞಾನ ಕಂಪನಿಗೆ ಸೇರ್ಪಡೆಯಾಗುವುದಕ್ಕೂ ಮುನ್ನ, ಬೆಂಗಳೂರು ಮೂಲದ ದೈತ್ಯ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಇನ್ಫೋಸಿಸ್ ನಲ್ಲಿ ಹೇಗೆ ಸರಪಳಿ ಇಲ್ಲದ ಗುಲಾಮಗಿರಿಯನ್ನು ಮಾಡಿದೆ ಎಂದು ವಿಸ್ತೃತವಾಗಿ ವಿವರಿಸಿದ್ದಾರೆ.
ಇನ್ಫೋಸಿಸ್ ಸಂಸ್ಥೆಯಲ್ಲಿ ತಾವು ಅನುಭವಿಸಿದ ತಾರತಮ್ಯವನ್ನು 10 ಅಂಶಗಳ ಮೂಲಕ ಅವರು ವಿವರಿಸಿದ್ದಾರೆ. ವೇತನ ತಾರತಮ್ಯ, ಉಚಿತವಾಗಿ ನೀಡಲಾಗುವ ಸೌಲಭ್ಯಗಳಿಗಾಗಿ ಕಳೆದುಕೊಳ್ಳಬೇಕಾದ ಸ್ವಾತಂತ್ರ್ಯ, ಕ್ಯಾಂಟೀನ್ ದರ, ಬಡ್ತಿ ವರ್ಸಸ್ ಪ್ರಗತಿ, ವೇತನ ಏರಿಕೆ, 90 ದಿನಗಳ ನೋಟಿಸ್ ಅವಧಿ, ಶಾಲಾ ಕಾಲೇಜಿನಂಥ ಹಾಜರಾತಿ ನೀತಿಗಳು, ದಾನ ವರ್ಸಸ್ ಕಾರ್ಮಿಕ ಕಲ್ಯಾಣ, ಮಾರುಕಟ್ಟೆ ತಿದ್ದುಪಡಿಯ ಅನುಪಸ್ಥಿತಿ, ಉದ್ಯೋಗ ಭದ್ರತೆಯೆಂಬ ಸುಳ್ಳು ವರ್ಸಸ್ ನೈಜತೆ ಎಂದು ಅವರು ತಮ್ಮ 10 ಅಂಶಗಳನ್ನು ವರ್ಗೀಕರಿಸಿದ್ದಾರೆ.
ಮೂಲ ಬಳಕೆದಾರರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಇತರ ಬಳಕೆದಾರರೂ ಅವರ ಮಾತುಗಳನ್ನು ಪ್ರತಿಧ್ವನಿಸಿದ್ದಾರೆ. ಅವರೂ ಕೂಡಾ ಇನ್ಫೋಸಿಸ್ ಹಾಗೂ ಇತರ ಸಂಸ್ಥೆಗಳಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಸೌಜನ್ಯ : deccanherald.com