ಬೀದರ್ ಎಟಿಎಂ ದರೋಡೆ | ಆರೋಪಿಗಳ ಬಂಧನಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಈಶ್ವರ್ ಖಂಡ್ರೆ ಸೂಚನೆ

Update: 2025-01-16 12:55 GMT

ಬೆಂಗಳೂರು : ಬೀದರ್‌ನ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಬ್ಬರು ಸಿಬ್ಬಂದಿಯನ್ನು ಕೊಲೆಗೈದು ಹಣ ದರೋಡೆ ಮಾಡಿದ ಘಟನೆ ಸಂಬಂಧ ಆರೋಪಿಗಳ ಬಂಧನಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಸೂಚಿಸಿದ್ದೇನೆ ಎಂದು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿರುವುದು ತೀವ್ರ ನೋವಿನ ಸಂಗತಿ. ಮೃತರ ಕುಟುಂಬದವರಿಗೆ ಈ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ನೋವಿನ ಸಂದರ್ಭದಲ್ಲಿ ಸರಕಾರ ಕುಟುಂಬದ ಜೊತೆ ನಿಲ್ಲುತ್ತದೆ ಎಂದರು.

ದುಷ್ಕರ್ಮಿಗಳ ಬಂಧನಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ಬಾರದಂತೆ ಕ್ರಮ ವಹಿಸಲು ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ನಾಳೆ(ಜ.17) ಬೀದರ್‌ಗೆ ತೆರಳುತ್ತಿದ್ದು, ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ. ಎಟಿಎಂಗೆ ಹಣ ಸಾಗಿಸುವಾಗ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಿತ್ತು, ಪ್ರಕರಣದಲ್ಲಿ ಏನು ಲೋಪವಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News