ಅರಮನೆ ಟಿ.ಡಿ.ಆರ್ ಪ್ರಕರಣ | 1996 ಕಾನೂನಿನ ಸಿಂಧುತ್ವದ ಬಗ್ಗೆ ತುರ್ತು ವಿಚಾರಣೆಗೆ ಕೋರಿ ‘ಸುಪ್ರೀಂ’ಗೆ ಮನವಿ : ಸಚಿವ ಸಂಪುಟ ತೀರ್ಮಾನ

Update: 2025-01-16 14:47 GMT

ಬೆಂಗಳೂರು: ಬೆಂಗಳೂರು ಅರಮನೆಯನ್ನು ವಶಪಡಿಸಿಕೊಂಡಿರುವ 1996ರ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿಯಲು ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಯನ್ನು ಪರಿಗಣಿಸಬೇಕೆಂದು ಕೋರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು.

ಈ ಹಿಂದೆ ಹೈಕೋರ್ಟ್ ಅನುಮೋದಿಸಿದ ಕರ್ನಾಟಕ ವಿಧಾನ ಮಂಡಲ ಅಂಗೀಕರಿಸಿದ ಅಧಿನಿಯಮವನ್ನು ಎತ್ತಿಹಿಡಿಯಲು 1997ರಲ್ಲಿ ಸರಕಾರ ಸಲ್ಲಿಸಿರುವ ಮೇಲ್ಮನವಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಈಗಾಗಲೇ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್ 2024ರ ಡಿ.10ರ ತೀರ್ಪಿನಂತೆ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ 15 ಎಕರೆ 17.5 ಗುಂಟೆ ಜಮೀನನ್ನು ಉಪಯೋಗಿಸಿಕೊಳ್ಳುವುದಕ್ಕೆ ನಿಗಧಿಪಡಿಸಿದ ಟಿ.ಡಿ.ಆರ್ ದರದ ಬಗ್ಗೆ ಸಚಿವ ಸಂಪುಟವು ಇಂದು ಚರ್ಚಿಸಿತು. ನ್ಯಾಯಾಂಗ ನಿಂದನೆ ಅರ್ಜಿಯ ವಿಷಯದಲ್ಲಿ ಕಾನೂನಿನ ಪ್ರಕಾರ ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಸುಪ್ರೀಂಕೋರ್ಟ್‍ನ 2014ರ ಡಿ.21ರ ಆದೇಶಾನುಸಾರ 2,83,500 ರೂ. ಪ್ರ.ಚ.ಮೀಟರ್‌ಗೆ (ಬಳ್ಳಾರಿ ರಸ್ತೆ) ಮತ್ತು 2.04 ಲಕ್ಷ ರೂ. ಪ್ರ.ಚ.ಮೀಟರ್‌ಗೆ (ಜಯಮಹಲ್ ರಸ್ತೆ) ಮೌಲ್ಯದಂತೆ ಟಿ.ಡಿ.ಆರ್ ನೀಡಲು ಅಂದಾಜು 3011 ಕೋಟಿ ರೂ.ಗಳ ಆರ್ಥಿಕ ಹೊರೆ ಬಗ್ಗೆ ಈಗಾಗಲೇ ರಾಜ್ಯ ಸರಕಾರ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರೂ ಅದನ್ನು ತಿರಸ್ಕರಿಸಲಾಗಿದೆ ಎಂದು ಅವರು ತಿಳಿಸಿದರು.

ಅಲ್ಲದೇ, ಸುಪ್ರೀಂಕೋರ್ಟ್‍ನ 2001ರ ಆದೇಶವನ್ನು ಉಲ್ಲಂಘಿಸಿ ಬೆಂಗಳೂರು ಅರಮನೆಯ 2 ಲಕ್ಷ ಚ.ಮೀಟರ್ ವ್ಯಾಪ್ತಿಯಲ್ಲಿ ಖಾಯಂ ಕಟ್ಟಡಗಳನ್ನು ನಿರ್ಮಿಸಿರುವ ಮಹಾರಾಜರ ಉತ್ತರಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಲು ಸಚಿವ ಸಂಪುಟ ತೀರ್ಮಾನಿಸಿದೆ. 15 ದಿನಗಳಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಜ.9ರಂದು ಸರಕಾರದ ವತಿಯಿಂದ ನೋಟಿಸ್‍ಗಳನ್ನು ಜಾರಿ ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.

ಇಂತಹ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸರಕಾರದಿಂದ ಇನ್ನೂ ಮುಂದೆ ಅನುಮತಿ ನೀಡದಿರಲು ಸಚಿವ ಸಂಪುಟ ನಿರ್ಬಂದ ವಿಧಿಸಿದೆ. ಬೆಂಗಳೂರು ಅರಮನೆ (ಭೂಸ್ವಾಧಿನ ಮತ್ತು ವರ್ಗಾವಣೆ) ಅಧಿನಿಯಮ, 1996 ಈ ಶಾಸನವನ್ನು ಅಧಿನಿಯಮಿಸಿ 1996ರ ನ.21ರಿಂದ ಜಾರಿಗೆ ಬರುವಂತೆ ಬೆಂಗಳೂರು ಅರಮನೆಗೆ ಸೇರಿದ ಎಲ್ಲ ಸ್ಥಿರ ಚರ ಸ್ವತ್ತುಗಳ(ಕಾಯ್ದೆಯಲ್ಲಿ ನಿರ್ಧಿಷ್ಟಪಡಿಸಲಾದ ಸ್ವತ್ತುಗಳು) ಎಲ್ಲ ವಿಧವಾದ ಹಕ್ಕು ರಾಜ್ಯ ಸರಕಾರದಲ್ಲಿ ವಿಹಿತವಾಗುತ್ತದೆ ಎಂದು ತಿಳಿಸಲಾಗಿತ್ತು ಎಂದು ಅವರು ತಿಳಿಸಿದರು.

ಈ ಅಧಿನಿಯಮವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಂಖ್ಯೆ: 3383/1997 ರಲ್ಲಿ ಮತ್ತು ಇತರೆ ಸಂಬಂಧಿತ ವಿಷಯಗಳಲ್ಲಿ ಹೈಕೋರ್ಟ್ ಮುಂದೆ ಪ್ರಶ್ನಿಸಿದ ಸಂದರ್ಭದಲ್ಲಿ ರಾಜ್ಯದ ಶಾಸನದ ಮಾನ್ಯತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್‍ನ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ವಿಶೇಷ ಅನುಮತಿ ಅರ್ಜಿ (ಸಿವಿಲ್) ಸಂಖ್ಯೆ: 8650/1997 ರಲ್ಲಿ ಮತ್ತು ಇತರೆ ಸಂಬಂಧಿತ ವಿಷಯಗಳಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು ಎಂದು ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.

ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದೆ. ಈ ಅರ್ಜಿ ವಿಲೆವಾರಿ ಆಗುವವರೆಗೆ ಮಾಲಕತ್ವ ಪ್ರಶ್ನೆಯು ಇತ್ಯರ್ಥವಾಗುವವರೆಗೆ ಟಿ.ಡಿ.ಆರ್ ಪ್ರಕರಣವನ್ನು ಕಾನೂನು ಪ್ರಕಾರ ನಿರ್ವಹಿಸಲು ಸಚಿವ ಸಂಪುಟ ನಿರ್ದೇಶಿಸಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News