ಹೈದರಾಬಾದ್ ನಲ್ಲಿ ಬೀದರ್ ಪೊಲೀಸರ ಕೈಯ್ಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಎಟಿಎಂ ದರೋಡೆಕೋರರು!
ಹೈದರಾಬಾದ್ : ಗುರುವಾರ ಬೆಳಿಗ್ಗೆ ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಲು ಬಂದಿದ್ದ ಎಸ್‌ಬಿಐ ಭದ್ರತಾ ಸಿಬ್ಬಂದಿಗೆ ಗುಂಡಿಕ್ಕಿ, 93 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದ ಇಬ್ಬರ ಗ್ಯಾಂಗ್ ಹೈದರಾಬಾದ್ ನಲ್ಲಿ ಬೀದರ್ ಪೊಲೀಸರ ಕೈಯ್ಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೀದರ್ ನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಹೈದರಾಬಾದ್ ಗೆ ಮಧ್ಯಾಹ್ನ ಸುಮಾರು 3-4 ರ ವೇಳೆ ಗೆ ಆಗಮಿಸಿದ ಇಬ್ಬರು ಆಗಂತುಕರು ರಿಯಾಝ್ ಎಂಬವರಿಗೆ ಸೇರಿದ ಅಫ್ಝಲ್ ಗಂಜ್ ನ ಮಸ್ಜಿದ್ ಚಮನ್ ಪ್ರದೇಶದಲ್ಲಿರುವ ಟ್ರಾವೆಲಿಂಗ್ ಏಜೆನ್ಸಿಯಾ ರೋಷನ್ ಟ್ರಾವೆಲ್ಸ್‌ನಲ್ಲಿ ಅಮಿತ್ ಕುಮಾರ್ ಎಂಬ ಹೆಸರಿನಲ್ಲಿ ರಾಯ್ಪುರಕ್ಕೆ ಟಿಕೆಟ್ ಬುಕ್ ಮಾಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಬೀದರ್ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ರಾಯ್ಪುರಕ್ಕೆ ತೆರಳುವ ಬಸ್‌ನಲ್ಲಿ ಸಂಜೆ 7 ರ ವೇಳೆಗೆ ಪೊಲೀಸರು ಮತ್ತು ಆರೋಪಿಗಳು ಒಂದೇ ಬಸ್ ನಲ್ಲಿ ಕುಳಿತಿದ್ದಾರೆ.
ರಾಯ್ಪುರಕ್ಕೆ ಪ್ರಯಾಣಿಸುವ ಪ್ರಯಾಣಿಕರನ್ನು ಟ್ರಾವೆಲ್ ಏಜೆನ್ಸಿಯಿಂದ ಸಣ್ಣ ಬಸ್ ನಲ್ಲಿ ಕರೆದುಕೊಂಡು ಹೋಗಿ, ದೊಡ್ಡ ಬಸ್ ಗೆ ಶಿಫ್ಟ್ ಮಾಡುವ ಪರಿಪಾಠವಿದೆ. ಅದರಂತೆ, ಆ ಸಂದರ್ಭ ಸಾಮಾನ್ಯ ಸೆಕ್ಯೂರಿಟಿ ಚೆಕ್ಕಿಂಗ್ ಮಾಡಲಾಗುತ್ತದೆ. ಪ್ರಯಾಣಿಕರಲ್ಲಿ ಶಂಕಾಸ್ಪದರು ಕಂಡು ಬಂದರೆ ಅವರ ಬ್ಯಾಗ್ ಗಳನ್ನು ಪರಿಶೀಲಿಸಲಾಗುತ್ತದೆ. ಇಬ್ಬರು ದರೋಡೆಕೋರರು ಶಂಕಾಸ್ಪದವಾಗಿ ಬ್ಯಾಗ್ ಹಾಕಿದ್ದರಿಂದ ಅವರ ಮೇಲೆ ಟ್ರಾವೆಲ್ ಏಜೆನ್ಸಿ ಸಿಬ್ಬಂದಿಗೆ ಸಹಜವಾಗಿಯೇ ಅನುಮಾನ ಬಂದಿತ್ತು ಎನ್ನಲಾಗಿದೆ.
ಸವೇರಾ ಪ್ಯಾಲೇಸ್ ಬಳಿಯಿಂದ ಸಣ್ಣ ಬಸ್ ನಲ್ಲಿ ಕರೆದೊಯ್ಯುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇಬ್ಬರೂ ಪ್ರಯಾಣಿಕರು ದೊಡ್ಡ ಭಾರವಾರ ಬ್ಯಾಗ್ ಹಾಕಿಕೊಂಡಿದ್ದರಿಂದ ಅವರ ಬ್ಯಾಗ್ ಗಳನ್ನು ಪರಿಶೀಲನೆ ಮಾಡಲು ಟಿಕೆಟ್ ಟ್ರಾವೆಲ್ ಏಜೆನ್ಸಿ ಟಿಕೆಟ್ ಮ್ಯಾನೇಜರ್ ಜಹಾಂಗೀರ್ ಅವರು ಪ್ರಯತ್ನಿಸಿದಾಗ, ದರೋಡೆಕೋರರು ಬ್ಯಾಗ್ ನಿಂದ ಹಣದ ಕಟ್ಟೊಂದನ್ನು ನೀಡಿ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಆಗ ಟಿಕೆಟ್ ಮ್ಯಾನೇಜರ್ ಅವರು ಬ್ಯಾಗ್ ನಲ್ಲಿ ಏನಿದೆ ತೆಗೆಯಿರಿ ಎಂದು ಗದರಿಸಿದ್ದಾರೆ. ಕೂಡಲೇ ದರೋಡೆಕೋರರು ಗನ್ ತೆಗೆದು ಎರಡು ರೌಂಡ್ ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ. ಆರೋಪಿಗಳು ಉತ್ತರ ಭಾರತ ಮೂಲದವರು ಎಂದು ಟ್ರಾವೆಲ್ಸ್ ಏಜೆನ್ಸಿ ಮೂಲಗಳು ತಿಳಿಸಿವೆ.
ಗುಂಡು ತಗುಲಿದ ಟಿಕೆಟ್ ಮ್ಯಾನೇಜರ್ ಜಹಾಂಗೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.